CONNECT WITH US  

ಉಡುಪಿ ಸಮೀಪ ರೌಡಿ ಶೀಟರ್‌ನನ್ನು ಅಟ್ಟಾಡಿಸಿ ಕೊಚ್ಚಿ ಕೊಂದ ಹಂತಕರು

ಉಡುಪಿ : ಇಲ್ಲಿಗೆ ಸಮೀಪದ ಹಿರಿಯಡಕ ಪೊಲೀಸ್‌ ಠಾಣೆ ವ್ಯಾಪ್ತಿಗೊಳಪಡುವ ಕೋತನಕಟ್ಟೆ ಎಂಬಲ್ಲಿ ಇಂದು ಸೋಮವಾರ ಬೆಳಗ್ಗೆ ಬೈಕ್‌ನಲ್ಲಿ ಬಂದ ಇಬ್ಬರು, ರೌಡಿ ಶೀಟರ್‌ ವೊರ್ವಾಡಿ ಪ್ರವೀಣ್‌ ಕುಲಾಲ್‌ ಎಂಬಾತನನ್ನು ಅಟ್ಟಾಡಿಸಿ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆಗೈದ ಭೀಭತ್ಸಕರ ಘಟನೆ ನಡೆದಿದೆ.

ಹತ್ಯೆಗೀಡಾಗಿರುವ ಕುಲಾಲ್‌, ಕೊಲೆ, ಕೊಲೆ ಯತ್ನದಂತಹ 16 ಗಂಭೀರ ಕ್ರಿಮಿನಲ್‌ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಈತನ ವಿರುದ್ಧ ಈಚೆಗೆ ಗೂಂಡಾ ಕಾಯಿದೆಯನ್ವಯ ಕೇಸು ದಾಖಲಾಗಿತ್ತು.

ಪ್ರವೀಣ್‌ ಹಾಗೂ ಆತನ ಸ್ನೇಹಿತ ಮಧ್ಯಾಹ್ನದ ಊಟಕ್ಕಾಗಿ ಇಲ್ಲಿನ ಹೊಟೇಲೊಂದಕ್ಕೆ ಬಂದಿದ್ದರು. ಹೊಟೇಲಿನಿಂದ ಹೊರಡಲು ಇವರು ಸಿದ್ಧರಾದಾಗ ಬೈಕಿನಲ್ಲಿ  ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಇಬ್ಬರು ಪ್ರವೀಣ್‌ ಮೇಲೆ ಮಾರಣಾಂತಿಕ ದಾಳಿಗೆ ಮುಂದಾದರು.

ಪ್ರಾಣ ಭೀತಿಯಿಂದ ಪ್ರವೀಣ್‌ ಓಡಲು ಯತ್ನಿಸಿದಾಗ ಹಂತಕರನ್ನು ಆತನನ್ನು ಬೆನ್ನಟ್ಟಿ ಹಿಡಿದು ಕಡಿದು ಕೊಂದರು ಎಂದು ತಿಳಿದುಬಂದಿದೆ. ರೆಸ್ಟೋರೆಂಟ್‌ ಎದುರಿನ ಟ್ರಾವೆಲ್‌ಏಜನ್ಸಿಯ ಮುಂಭಾಗದಲ್ಲಿ ಈ ಕೊಲೆ ಕೃತ್ಯ ನಡೆದಿದೆ. ಆರೋಪಿಗಳು ಪ್ರವೀಣ್‌ನನ್ನು ಕಡಿದು ಕೊಂದ ಮರುಕ್ಷಣದಲ್ಲೇ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯನ್ನು ಪ್ರತ್ಯಕ್ಷವಾಗಿ ಕಂಡಿರುವ ಐವರು, ಸುಮಾರು 30 ನಿಮಿಷಗಳ ಕಾಲ ಪ್ರವೀಣ್‌ನನ್ನು ಹಂತಕರು ಅಟ್ಟಾಡಿಸಿ ಕೊಚ್ಚಿ ಕೊಲೆಗೈದಿದ್ದಾರೆ. ಆದರೆ ಯಾರೂ ಆತನ ನೆರವಿಗೆ ಹೋಗಿಲ್ಲ ಎಂದು ತಿಳಿಸಿದ್ದಾರೆ.

ಸುದ್ದಿ ತಿಳಿದೊಡನೆಯೇ ಉಡುಪಿ ಎಸ್‌ಪಿ ಕೆ ಟಿ ಬಾಲಕೃಷ್ಣ ಅವರು ಹಿರಿಯಡಕ ಪೊಲೀಸರು, ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ ಮತ್ತು ಇನ್ಸ್‌ಪೆಕ್ಟರ್‌ ಸಂಪತ್‌ ಕುಮಾರ್‌ ಅವರೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. 

ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು ತನಿಖೆ ನಡೆಯುತ್ತಿದೆ; ಹಂತಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Trending videos

Back to Top