CONNECT WITH US  

ಸಚಿವ ರಮೇಶ್‌ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿ

ಬೆಳಗಾವಿ: ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಸೇರಿದಂತೆ 
ಜಿಲ್ಲೆಯ ಕಾಂಗ್ರೆಸ್‌ ಪ್ರಮುಖರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಏಕಕಾಲಕ್ಕೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಟಾಳಕರ, ಗೋಕಾಕದಲ್ಲಿ ಸಚಿವ ರಮೇಶ ಜಾರಕಿಹೊಳಿ, ಇವರ ಸಹೋದರ ಲಖನ್‌ ಜಾರಕಿಹೊಳಿ,
ಸಚಿವರ ಆಪ್ತ ಆಲಿ ಅತ್ತಾರ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಜಾವೇದ ಮುಲ್ಲಾ, ನಿಪ್ಪಾಣಿ ಬಳಿ ಸಚಿವರ ಸಂಬಂಧಿಯೊಬ್ಬರ ನಿವಾಸದ ಮೇಲೆ ದಾಳಿ ನಡೆದಿದೆ. ಮನೆಗಳ ಹೊರಗೆ ಪೊಲೀಸ್‌ ಭದ್ರತೆಯೊಂದಿಗೆ ಅಧಿಕಾರಿಗಳು ದಿನವಿಡೀ ದಾಖಲೆಗಳ 
ಪರಿಶೀಲನೆ ನಡೆಸಿವೆ.

3 ತಂಡಗಳಿಂದ ದಾಳಿ: ಬೆಳಗಾವಿ ಕುವೆಂಪು ನಗರದಲ್ಲಿರುವ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಮನೆಯ ಮೇಲೆ ಬೆಳಗ್ಗೆ 8.30ರ ಸುಮಾರಿಗೆ ಗೋವಾ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಬಂದಿದ್ದ 8 ಜನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ದಾಳಿಯ ವೇಳೆ ಹೆಬ್ಟಾಳಕರ ಮನೆಯಲ್ಲಿರಲಿಲ್ಲ. ಇನ್ನೊಂದೆಡೆ ಗೋಕಾಕ ಪಟ್ಟಣದಲ್ಲಿರುವ ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮನೆ ಮತ್ತು ಕಾರ್ಯಾಲಯ, ಸಹೋದರ ಲಖನ್‌ ಜಾರಕಿಹೊಳಿ ಅವರ ಮನೆ, ಬಿಎಲ್‌ ಜೆ ಟ್ರಸ್ಟಿನ ಕಾರ್ಯಾಲಯ, ಹಳೇ ಮನೆ, ಜಿಲ್ಲಾ ಯುಥ್‌ ಕಾಂಗ್ರೆಸ್‌ ಅಧ್ಯಕ್ಷ ಜಾವೇದ ಮುಲ್ಲಾ ಹಾಗೂ ಅಲಿ ಅತ್ತಾರ ಅವರ ಮನೆಗಳ ಮೇಲೆ ಬೆಳಗ್ಗೆ 8.30 ರ ವೇಳೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ತಡ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದರು. ಕತ್ತಲಾದ ಮೇಲೂ ಪರಿಶೀಲನೆ ಮುಂದುವರಿದಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಯಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿರುವದು ಇದೇ ಮೊದಲು. ಸಕ್ಕರೆ ಕಾರ್ಖಾನೆಗಳ ವ್ಯವಹಾರ, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು
ದಾಳಿಗೆ ಕಾರಣ ಎನ್ನಲಾಗಿದೆ. 

ದಾಳಿ ಸುದ್ದಿ ಗೊತ್ತಾಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಕುತೂಹಲದಿಂದ ಸಚಿವರು ಹಾಗೂ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷರ ಮನೆ ಮುಂದೆ ಜಮಾಯಿಸಿದ್ದರು.  


Trending videos

Back to Top