CONNECT WITH US  

ಸದನದಲ್ಲಿ ಗದ್ದಲ, ಬಿಜೆಪಿ ಸಭಾತ್ಯಾಗ

ವಿಧಾನಸಭೆ: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಒತ್ತಾಯಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಏಕಾಏಕಿ ಕೇಂದ್ರದ ವಿರುದಟಛಿ ಟೀಕಾ ಪ್ರಹಾರ ನಡೆಸಿದ್ದರಿಂದ ಸದನದಲ್ಲಿ ಗದ್ದಲ ಉಂಟಾಗಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು.

ಬರ ಪರಿಸ್ಥಿತಿ ಕುರಿತಂತೆ ನಡೆದ ಚರ್ಚೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉತ್ತರಿಸುತ್ತಿದ್ದಾಗ ಜಗದೀಶ್‌ ಶೆಟ್ಟರ್‌
ಮಾತನಾಡಿ, ರಾಜ್ಯ ಸರ್ಕಾರ ಮುಂದಿನ ಬಜೆಟ್‌ ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, "ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತೀರಿ. ಆದರೆ, ನಿಮ್ಮದೇ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರ ಮಾತ್ರ ರೈತರ ಸಾಲ ಮನ್ನಾ ಮಾಡುತ್ತಿಲ್ಲ. ನೀವು ರೈತರ ಅರ್ಧ ಸಾಲ ಮನ್ನಾ ಮಾಡಿದರೆ ನಾವು ಕೂಡ ರೈತರ ಅರ್ಧ ಸಾಲ ಮನ್ನಾ ಮಾಡುತ್ತೇವೆ ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ. ನಾನೇ ಖುದ್ದಾಗಿ ಪ್ರಧಾನಿಯವರ ಮುಂದೆ ಪ್ರಸ್ತಾಪ ಮಾಡಿದ್ದೇನೆ' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಗದೀಶ್‌ ಶೆಟ್ಟರ್‌, ಆ ರೀತಿ ಕೇಂದ್ರಕ್ಕೆ ಪತ್ರ ಬರೆಯಿರಿ. ಆ ಪತ್ರವನ್ನು ಆಧಾರವಾಗಿಟ್ಟುಕೊಂಡು ನಾವೂ ಒತ್ತಾಯ ಮಾಡುತ್ತೇವೆ ಎಂದಾಗ, ಈಗಾಗಲೇ ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಪತ್ರ ಬಹಿರಂಗಪಡಿಸಿ ಎಂದು ಶೆಟ್ಟರ್‌ ಕೇಳಿದಾಗ, ಆಯ್ತು ಮಾಡೋಣ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನೀವು ರೈತರ ಹೆಸರು ಹೇಳಿಕೊಂಡು ಮೋಸ ಮಾಡುತ್ತೀರಾ
ಎಂದು ಪರಸ್ಪರ ಆರೋಪ ಮಾಡಿದರು. ಅಷ್ಟರಲ್ಲಿ ಆಡಳಿತ ಮತ್ತು ಬಿಜೆಪಿ ಸದಸ್ಯರು ಎದ್ದುನಿಂತು ತಮ್ಮ ನಾಯಕರನ್ನು 
ಬೆಂಬಲಿಸಿದರು. ಕೇಂದ್ರ ಸರ್ಕಾರ ರೈತ ವಿರೋಧಿ ಎಂದು ಕಾಂಗ್ರೆಸ್‌ನವರು ಹೇಳಿದರೆ, ರಾಜ್ಯ ಸರ್ಕಾರ ರೈತ ವಿರೋಧಿ 
ಎಂದು ಬಿಜೆಪಿಯವರು ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಈ ವೇಳೆ, ಕುಪಿತರಾದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

Trending videos

Back to Top