CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉಮೇದುವಾರ್‌ ಶುರು; ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರಿಂದ ಕಲ್ಲು ತೂರಾಟ

ಗುಂಡ್ಲುಪೇಟೆ: ಸಚಿವ ಮಹದೇವಪ್ರಸಾದ್‌ರವರ ನಿಧನದಿಂದ ತೆರವಾಗಿರುವ ಗುಂಡ್ಲುಪೇಟೆ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯಾದ ಮೊದಲು ದಿನವೇ ಹಿಂಸಾರಂಭ ಪಡೆದುಕೊಂಡಿದೆ. ನಾಮಪತ್ರ ಸಲ್ಲಿಕೆ ವೇಳೆ ತಾಲೂಕು ಕಚೇರಿ ಮುಂಭಾಗದಲ್ಲಿ ನೆರೆದಿದ್ದ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಪರಿಣಾಮವಾಗಿ ಮೂವರು ಪೊಲೀಸರು ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ಬಿಜೆಪಿ ಅಭ್ಯರ್ಥಿ ಸಿ.ಎಸ್‌.ನಿರಂಜನಕುಮಾರ್‌ ಮತ್ತು ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಡಾ.ಗೀತಾ ಮಹದೇವಪ್ರಸಾದ್‌ರಿಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಯಾಗಿತ್ತು. ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್‌ ಮೆರವಣಿಗೆ ನಡೆಸಿ ಬಹಿರಂಗ ಸಭೆ ಮುಗಿಸಿಕೊಂಡು ತಾಲೂಕು ಕಚೇರಿಗೆ ಬರುವ ವೇಳೆಗೆ 12.10 ಆಗಿತ್ತು. ಈ ಸಮಯಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಡಾ|ಗೀತಾ ಮಹದೇವಪ್ರಸಾದ್‌ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿ ಕಡೆಗೆ ಸಾಗುತ್ತಿರುವ ಮಾಹಿತಿ ಬಂದಿತು. ಆಗ ಬಿಜೆಪಿ ಮುಖಂಡರು ತಾಲೂಕು ಕಚೇರಿಗೆ ಹೋಗಿ ನಾಮಪತ್ರ ಸಲ್ಲಿಸಿ ಹೊರಬಂದರು. ಅದೇ ಸಮಯಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾರವರು ತಮ್ಮ ಅಪಾರ ಬೆಂಬಲಿಗರೊಂದಿಗೆ ತಾಲೂಕು ಕಚೇರಿ ಹತ್ತಿರ ಬಂದಿದ್ದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಮುಖಾಮುಖೀಯಾದರು.

ಈ ಸಮಯದನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಿದ್ದಾರೆ. ಇದರಿಂದ ವ್ಯಗ್ರಗೊಂಡ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಕಲ್ಲು, ಚಪ್ಪಲಿ ತೂರಿದರು. ಇದನ್ನು ಕಂಡ ಪೊಲೀಸರು ಮೊದಲು ಶಾಂತಿಯುತವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರಾದರೂ ಉದ್ರಿಕ್ತರು ನಿಯಂತ್ರಣಕ್ಕೆ ಬರಲಿಲ್ಲ. ಆಗ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದರು. ಈ ಮಧ್ಯೆ ಪೊಲೀಸರು ಕಡೆಗೂ ದುಷ್ಕರ್ಮಿಗಳು ಕಲ್ಲು ತೂರಿದರು. ಪರಿಣಾಮ ಎಎಸ್‌ಐ ನಾಗರಾಜು, ಪೇದೆಗಳಾದ ಮಂಜುನಾಥಸ್ವಾಮಿ, ನಾಗರಾಜು ಗಾಯಗೊಂಡುರು. ಪರಿಸ್ಥಿತಿ ಕೈಮೀರುವುದನ್ನು ಅರಿತ ಪೊಲೀಸರು ಲಾಠಿಪ್ರಹಾರ ನಡೆಸಿ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತರೆನ್ನಲಾದ ನಾಲ್ವರು ಗಾಯಗೊಂಡಿದ್ದು, ಇವರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.

Back to Top