ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ


Team Udayavani, Mar 23, 2017, 3:45 AM IST

22BNP17.jpg

ಬೆಂಗಳೂರು: ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ  ಮಾಧ್ಯಮಗಳ ವಿರುದ್ಧ ಜನಪ್ರತಿನಿಧಿಗಳು ತಿರುಗಿಬಿದ್ದು ಎರಡೂ ಸದನಗಳಲ್ಲಿ ಬುಧವಾರ ಪಕ್ಷಾತೀತವಾಗಿ ವಾಗಾœಳಿ ನಡೆಸಿದ ಪ್ರಸಂಗ ನಡೆಯಿತು. ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ನಿಯಮಾವಳಿ ರೂಪಿಸುವ ಸಂಬಂಧ ವಿಧಾನಸಭೆಯಲ್ಲಿ ಸದನ ಸಮಿತಿ ರಚಿಸುವ ನಿರ್ಣಯವನ್ನೂ ಕೈಗೊಳ್ಳಲಾಯಿತು.

ಉಭಯ ಸದನಗಳಲ್ಲಿ ಮಾತನಾಡಿದ ಸದಸ್ಯರು, ಮಾಧ್ಯಮಗಳು ಅದರಲ್ಲೂ ಮುಖ್ಯವಾಗಿ ಕೆಲವು ವಿದ್ಯುನ್ಮಾನ ಮಾಧ್ಯಮಗಳು ಲಕ್ಷ್ಮಣರೇಖೆ ದಾಟುತ್ತಿದ್ದು, ಜನಪ್ರತಿನಿಧಿಗಳ ತೇಜೋವಧೆಗೆ ಯತ್ನಿಸುತ್ತಿವೆ. ಬ್ಲಾಕ್‌ವೆುàಲ್‌ ಮೂಲಕ ಬೆದರಿಸುತ್ತಿವೆ. ಸಾರ್ವಜನಿಕರಲ್ಲಿ ಅಶಾಂತಿ, ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಸುದ್ದಿ ಪ್ರಸಾರ ಮಾಡುತ್ತಿದ್ದು, ವೈಯಕ್ತಿಕ ವಿಷಯಗಳನ್ನು ವೈಭವೀಕರಣ ಮಾಡುತ್ತಿವೆ. ಇವುಗಳ ನಿಯಂತ್ರಣಕ್ಕೆ ವಿಶೇಷ ಕಾನೂನು ತರಬೇಕು ಎಂಬ ಒಕ್ಕೊರಲ ಆಗ್ರಹ ಮಾಡಿದರು.

ಪತ್ರಿಕೋದ್ಯಮದಲ್ಲಿ ಒಳ್ಳೆಯವರು ಇದ್ದಾರೆ. ಇಂದಿಗೂ ನಂಬಿದ ತತ್ವ ಸಿದ್ಧಾಂತದಡಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಬಗ್ಗೆ ನಮಗೆ ಅತೀವ ಗೌರವ ಇದೆ ಎಂದು ಹೇಳುತ್ತಲೇ, ಆದರೆ, ಇತ್ತೀಚಿನ ದಿನಗಳಲ್ಲಿ ಟಿಆರ್‌ಪಿಗಾಗಿ ಸುದ್ದಿ ಸೃಷ್ಟಿಸಿ ತೇಜೋವಧೆ ಮಾಡುವವರು ಹೆಚ್ಚಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಚರ್ಚೆ ಸಂದರ್ಭದಲ್ಲಿ ಹಲವು ಸದಸ್ಯರು ತೀವ್ರ ಆಕ್ರೋಶ ಮತ್ತು ಭಾವೋದ್ವೇಗಕ್ಕೆ ಒಳಗಾಗಿ, ಕೆಲವು ವಿದ್ಯುನ್ಮಾನ ಮಾಧ್ಯಮಗಳ ಮಾಲೀಕರ ಆಸ್ತಿ, ಸಂಪತ್ತು ಎಷ್ಟಿದೆ, ಮೊದಲು ಹೇಗಿದ್ದರು ಎಂದು ಪ್ರಶ್ನಿಸಿದರು. ಜತೆಗೆ ಜಿಲ್ಲಾ ಮಟ್ಟದಲ್ಲಿ ವಿದ್ಯುನ್ಮಾನ ಮಾಧ್ಯಮದ ವರದಿಗಾರರು ಗುಂಪುಕಟ್ಟಿಕೊಂಡು ದಂಧೆಗೆ ಇಳಿದಿದ್ದಾರೆ ಎಂಬ ಗಂಭೀರ ಆರೋಪ ಸಹ ಮಾಡಿದರು. ನಿಮಗೆ ನಾಚಿಕೆಯಾಗಲ್ವಾ? ಮಾಧ್ಯಮದವರಿಗೆ ಮಾನ ಮರ್ಯಾದೆ ಇಲ್ವಾ? ಎಂಬ ಏಕವಚನ ಪ್ರಯೋಗವೂ ನಡೆಯಿತು.

ನಾಲ್ಕು ಗೋಡೆಗಳ ಮಧ್ಯೆ ಎಸಿ ಕೊಠಡಿಯಲ್ಲಿ ಕುಳಿತು ದೂರುದಾರ, ವಕೀಲ, ನ್ಯಾಯಾಧೀಶ ಮೂರೂ ಆಗಿ ತೀರ್ಪು ನೀಡಲಾಗುತ್ತಿದೆ. ನಾವು ಲಕ್ಷಾಂತರ ಜನರ ಆಶೀರ್ವಾದ ಪಡೆದು ಆಯ್ಕೆಯಾಗಿದ್ದೇವೆ. ಜನಪ್ರತಿನಿಧಿಗಳ ತೇಜೋವಧೆ ಮಾಡುತ್ತಿರುವ ವಿದ್ಯುನ್ಮಾನ ಮಾಧ್ಯಮದವರು ಪಂಚಾಯಿತಿ ಚುನಾವಣೆಗೆ ನಿಂತು ತೋರಿಸಲಿ ಎಂಬ ಸವಾಲು ಸಹ ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿದ್ದು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೆ ಯಡ್ಡಿ, ಕುಮಾರಸ್ವಾಮಿಯವರಿಗೆ ಕುಮ್ಮಿ ಎಂದು ಸಂಭೋಧಿಸಲಾಗುತ್ತದೆ. ಇವರಿಗೆ  ಇಷ್ಟ ಬಂದಂತೆ ಹೇಳಬಹುದಾ? ಜನಪ್ರತಿನಿಧಿಗಳನ್ನು ಆಟವಾಡುವ ಬೊಂಬೆಗಳ ರೀತಿ ಚಿತ್ರಿಸಿ ಅಸಹ್ಯವಾಗಿ ತೋರಿಸಲಾಗುತ್ತಿದೆ. ಇದು  ಈ ಸದನಕ್ಕೂ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಕೆಜೆಪಿಯ ಬಿ.ಆರ್‌.ಪಾಟೀಲ್‌, ಕೆಲವು ದೃಶ್ಯ ಮಾಧ್ಯಮಗಳು ಜನಪ್ರತಿನಿಧಿಗಳ ಚಾರಿತ್ರ್ಯಹರಣಕ್ಕೆ ಇಳಿದಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಏನು ಬೇಕಾದರೂ ಹೇಳಬಹುದು. ಯಾರನ್ನು ಬೇಕಾದರೂ ತೆಗಳಬಹುದು, ನಮ್ಮನ್ನು ಯಾರೂ ಕೇಳುವವರು ಇಲ್ಲ ಎಂಬ ವರ್ತನೆ ತೋರುತ್ತಿವೆ. ಇಂತಹ ಧೋರಣೆ ಸಮಾಜಕ್ಕೂ ಹಾನಿಕರ ಎಂದು ಹೇಳಿದರು.

ಶಿಕ್ಷಕಿಯೊಬ್ಬರಿಗೆ ವರ್ಗಾವಣೆಗೆ ಶಿಫಾರಸು ಪತ್ರ ನೀಡಿದ ವಿಚಾರ ಹಾಗೂ ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಸಾರವಾದ ವರದಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಹೋರಾಟದಿಂದ ಮೇಲೆ ಬಂದಿದ್ದೇನೆ. ಒಂದೇ ದಿನದಲ್ಲಿ ನಮ್ಮ ಮಾನ ಹರಾಜು ಹಾಕುವ ಹಕ್ಕು ಇವರಿಗೆ ಕೊಟ್ಟವರ್ಯಾರು ಎಂದು ಪ್ರಶ್ನಿಸಿದರು.

ಬಿಜೆಪಿಯ ರಾಜುಕಾಗೆ, ಇತ್ತೀಚೆಗೆ ಹಲ್ಲೆ ಪ್ರಕರಣವೊಂದರಲ್ಲಿ ನನ್ನ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿ ನಾಲ್ಕು ದಿನ ಕಾರಾಗೃಹ ವಾಸ ಅನುಭವಿಸಬೇಕಾಯಿತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದೇನೆ. ನನ್ನ ವಿರುದ್ಧದ ಅಪಪ್ರಚಾರ, ನಿಂದನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದೆ. ಆದರೆ, ನನ್ನ ಇಬ್ಬರು ಹೆಣ್ಣುಮಕ್ಕಳು ತಡೆದರು. ನೀವೇನೂ ದೊಡ್ಡ ಆಪರಾಧ ಮಾಡಿಲ್ಲ, ಯಾಕೆ ಚಿಂತೆ ಮಾಡುತ್ತೀರಿ ಎಂದು ಹೇಳಿ ಸಮಾಧಾನ ಪಡಿಸಿದರು. ಇಲ್ಲದಿದ್ದರೆ ಈ ಅಧಿವೇಶನದಲ್ಲಿ ನನಗೆ ಶ್ರದ್ಧಾಂಜಲಿ ಸಲ್ಲಿಸಬೇಕಾಗಿತ್ತು ಎಂದು ಹೇಳಿದರು.

ಬಿಜೆಪಿಯ ಸುರೇಶ್‌ಗೌಡ, ಟೋಲ್‌ ವಿಚಾರದಲ್ಲಿ ನನ್ನ ವಿರುದ್ಧ ವಿದ್ಯುನ್ಮಾನ ಮಾಧ್ಯಮವೊಂದು ಗೂಂಡಾ ಶಾಸಕ ಎಂದು ಸರ್ಟಿಫಿಕೇಟ್‌ ಕೊಟ್ಟಿತು. ನನ್ನ ಮೇಲೆ ಯಾವ ಪೊಲೀಸ್‌ ಠಾಣೆಯಲ್ಲಿ ರೌಡಿ ಪಟ್ಟಿ ದಾಖಲಾಗಿದೆ ಎಂದು ಪ್ರಶ್ನಿಸಿದರು.

ಎಲ್ಲ ಮಾಧ್ಯಮಗಳು ಕೆಟ್ಟದ್ದು ಅಂತಲ್ಲ. ಮುದ್ರಣ ಮಾಧ್ಯಮಗಳು ಅತಿರೇಕಕ್ಕೆ ಹೋಗಿಲ್ಲ. ಆದರೆ,ಕೆಲವು ವಿದ್ಯುನ್ಮಾನ ಮಾಧ್ಯಮಗಳು ಜನಪ್ರತಿನಿಧಿಗಳ ಬಗ್ಗೆ ತೀರಾ ವೈಯಕ್ತಿಕವಾಗಿ ಅವಹೇಳನ ಮಾಡುತ್ತಿವೆ ಇದನ್ನು ಸಹಿಸಲು ಸಾಧ್ಯವಿಲ್ಲ. ಇದರ ನಿಯಂತ್ರಣಕ್ಕೆ ಕಾನೂನು ತರಲೇಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಕೆ.ಎಸ್‌.ಪುಟ್ಟಣ್ಣಯ್ಯ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಭಾಷೆ ತೀರಾ ಕೆಳಮಟ್ಟದ್ದಾಗಿದೆ. ಕಾವೇರಿ ಪ್ರಕರಣದಲ್ಲಿ ನಾನು ಮುಖ್ಯಮಂತ್ರಿ ಭೇಟಿ ಮಾಡಿದರೆ ಪುಟ್ಟಣ್ಣಯ್ಯ-ಸಿಎಂ ಗುಸುಗುಸು ಎಂದು ಹೇಳುತ್ತಾರೆ. ಅಲ್ಲಿ ಗುಸು ಗುಸು ಏನಿರುತ್ತದೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಬಂದರೆ ಅಪಶಕುನ ಎಂದು ಎರಡು ದಿನ ಸುದ್ದಿ ಬಿತ್ತರಿಸುತ್ತಾರೆ. ನಮ್ಮಲ್ಲಿ ಯಾರಾದರೂ ಸತ್ತರೆ ಹಾಲುತುಪ್ಪ ದಿನ ಕಾಗೆಗೆ ಅನ್ನ ಹಾಕ್ತೇವೆ.  ಒಂದು ಕಾಗೆ ಬಂದರೆ ತಮ್ಮ ಕುಟುಂಬದವರನ್ನೆಲ್ಲಾ ಕಾವ್‌ ಕಾವ್‌ ಎಂದು ಕರೆಯುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿದ್ದಕ್ಕೆ ಕಾಗೆ ಬಂದಿರಬಹುದು. ಆದರೆ, ಅದನ್ನು ಅಪಶಕುನ ಎಂಬಂತೆ ವಿದ್ಯುನ್ಮಾನ ಮಾಧ್ಯಮಗಳು ತೋರಿಸಿದವು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನ ನರೇಂದ್ರಸ್ವಾಮಿ, ಮಾಧ್ಯಮದವರು ಪ್ರಶ್ನಾರ್ಹರೇ? ಯಾರ್ಯಾರು ಹೇಗಿದ್ದರು, ಈಗ ಹೇಗಿದ್ದಾರೆ ಎಂಬುದು ಗೊತ್ತಿದೆ. ನನ್ನ ಕ್ಷೇತ್ರದಲ್ಲಿ ನನ್ನ ಎದುರಾಳಿ ಜತೆ ಸೇರಿ ಸಿಡಿ ಮಾಡಿ ಬ್ಲಾಕ್‌ವೆುàಲ್‌ ಮಾಡುವ ತಂತ್ರ ಮಾಡಲಾಯಿತು ಎಂದು ದೂರಿದರು.

ಜೆಡಿಎಸ್‌ನ ಸಾ.ರಾ.ಮಹೇಶ್‌, ಟಿರ್‌ಪಿಗಾಗಿ ಹಣ ದೋಚಲು ವಿದ್ಯುನ್ಮಾನ ಮಾಧ್ಯಮಗಳು ಜನಪ್ರತಿನಿಧಿಗಳ ವಿರುದ್ಧ ತೇಜೋವಧೆ ಸುದ್ದಿ ಪ್ರಸಾರ ಮಾಡುತ್ತವೆ. ನಮ್ಮನ್ನು ಸ್ಪಷ್ಟನೆ ಸಹ ಕೇಳುವುದಿಲ್ಲ ಎಂದರು.

ಹೆಣ್ಣು ಮಕ್ಕಳು ನಮ್ಮ ಮನೆಗೆ ಬಂದರೆ ಸೀರೆ ಅರಶಿಣ ಕುಂಕುಮ ಕೊಡುವುದು ಸಂಪ್ರದಾಯ. ಆದರೆ, ಒಮ್ಮೆ ನಮ್ಮ ಮನೆಯಲ್ಲಿ ಸೀರೆ ಹಂಚಲಾಗುತ್ತಿದೆ ಎಂದು ಸುದ್ದಿ ಹಬ್ಬಿಸಲಾಯಿತು. ದಿನಗಟ್ಟಲೆ ಸುದ್ದಿ ಹಾಕಿದರು, ನನ್ನ ಸೋಲಿಸಲು ಆಗಲಿಲ್ಲ. ನಮಗೆ ಮತ ಹಾಕುವವರು ಮತದಾರರು ಎಂಬುದು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು. ಇವರು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು ತೋರಿಸಲಿ ಎಂದು ಸವಾಲು ಹಾಕಿದರು.

ಮಾಜಿ ಸಚಿವ ಶಿವರಾಜ ತಂಗಡಗಿ, ಹೆಂಡತಿ, ಮಕ್ಕಳ ಜತೆ ಕುಳಿತು ಟಿವಿ ನೋಡಲು ಆಗದಂತೆ ಸುದ್ದಿಗಳು ಪ್ರಸಾರವಾಗುತ್ತವೆ. ಹದಿನೆಂಟು ವರ್ಷ ನನ್ನ ಜತೆ ಸಂಸಾರ ಮಾಡಿದ ಹೆಂಡತಿಯೇ ಪ್ರಶ್ನೆ ಮಾಡುವಂತಾಗಿದೆ ನನ್ನ ಪರಿಸ್ಥಿತಿ ಎಂದರು. ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್‌, ಮಾಧ್ಯಮದವರಿಗೆ ಮಾನ ಮರ್ಯಾದೆ ಇಲ್ಲವೇ? ಎಂದು ಪ್ರಶ್ನಿಸಿ ಏಕ ವಚನವನ್ನೂ ಪ್ರಯೋಗಿಸಿದರು.  ಅಶೋಕ್‌ ಪಟ್ಟಣ್‌, ವಿಧಾನಸಭೆ ಕಲಾಪ ಚಿತ್ರೀಕರಣಕ್ಕೆ ಖಾಸಗಿ ವಿದ್ಯುನ್ಮಾನ ಮಾಧ್ಯಮಗಳಿಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ‌ದರ‌ು.

ಅಂತಿಮವಾಗಿ ಸ್ಪೀಕರ್‌ ಕೆ.ಬಿ.ಕೋಳಿವಾಡ್‌,  ಈ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಒಂದೇ ಇರುವುದರಿಂದ ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಸದನ ಸಮಿತಿ ರಚಿಸಲು ಸದನ ನಿರ್ಣಯ ಕೈಗೊಳ್ಳುತ್ತದೆ ಎಂದು ಹೇಳಿದರು. ಇದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು. ಸಚಿವ ಬಸವರಾಜ ರಾಯರೆಡ್ಡಿ, ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಪ್ರಶ್ನಿಸಿದಾಗ, ಪಕ್ಷಾತೀತವಾಗಿ ಎಲ್ಲ ಸದಸ್ಯರು ಅವರ ವಿರುದ್ಧ ಹರಿಹಾಯ್ದರು.

ವಿಧಾನ ಪರಿಷತ್ತು
ಇನ್ನು, ಮೇಲ್ಮನೆಯಲ್ಲೂ ವಿದ್ಯುನ್ಮಾನ ದೃಶ್ಯ ಮಾಧ್ಯಮಗಳಲ್ಲಿ ಸಾರ್ವಜನಿಕರ ಖಾಸಗಿ ಸಂಗತಿಗಳು, ಹಿಂಸೆ- ಕ್ರೌರ್ಯ ವೈಭವೀಕರಣ, ಚಾರಿತ್ರ್ಯವಧೆ, ಉದ್ದೇಶಿತ ರಾಜಕೀಯ ಷಡ್ಯಂತ್ರಗಳಿಗೆ ವೇದಿಕೆ ಕಲ್ಪಿಸುವುದು ಸೇರಿದಂತೆ ಜನರಲ್ಲಿ ಮೌಡ್ಯ ಬಿತ್ತುವ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಸಮಾಜ ಸ್ವಾಸ್ಥ್ಯ ಹದಗೆಡಲು ಕಾರಣವಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂತು.

“ಬ್ರೇಕಿಂಗ್‌ ನ್ಯೂಸ್‌’ ಹೆಸರಿನಲ್ಲಿ ಅಪಕ್ವ ಸುದ್ದಿ ಪ್ರಸಾರ, ಜ್ಯೋತಿಷ್ಯ, ಸಾಕ್ಷಾಧಾರವಿಲ್ಲದಿದ್ದರೂ ಜನಪ್ರತಿನಿಧಿಗಳ ವಿರುದ್ಧ ಆರೋಪ, ತೇಜೋವಧೆ, ಟಿಆರ್‌ಪಿ ಏರಿಕೆಗಾಗಿ ಆಧಾರರಹಿತ ಸುದ್ದಿ ಪ್ರಸಾರ, ಅಪರಾಧ ಕೃತ್ಯಗಳ ವೈಭವೀಕರಣದಿಂದ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನು ಪಕ್ಷಭೇದ ಮರೆತು ಸದಸ್ಯರು ವ್ಯಕ್ತಪಡಿಸಿದರು.

ಮೇಲ್ಮನೆಯಲ್ಲಿ ನಿಯಮ 330ರ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ತಾರಾ ಅನುರಾಧ, “ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾರ್ವಜನಿಕರ ವೈಯಕ್ತಿಯ ಸಂಗತಿಗಳು ವ್ಯಾಪಕವಾಗಿ ಪ್ರಸಾರವಾಗುತ್ತಿರುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ’ ಎಂದರು.

ಇದೊಂದು ಸೂಕ್ಷ್ಮ ವಿಚಾರ. ದೃಶ್ಯ ಮಾಧ್ಯಮಗಳಲ್ಲಿ ಹೆಚ್ಚಾಗಿ ಋಣಾತ್ಮಕ ಸುದ್ದಿಗಳೇ ಪ್ರಸಾರವಾಗುತ್ತಿವೆ. ಬೆಳಗ್ಗೆ ಜ್ಯೋತಿಷ್ಯದಿಂದ ಆರಂಭವಾದರೆ ರಾತ್ರಿ ಮಕ್ಕಳ ದೆವ್ವ, ಭೂತ, ಅಪರಾಧ ಸುದ್ದಿ ಪ್ರಸಾರವಾಗುತ್ತಿದೆ. “ಬ್ರೇಕಿಂಗ್‌ ನ್ಯೂಸ್‌’ ಹೆಸರಿನಲ್ಲಿ ರಸವತ್ತಾಗಿ ಸುದ್ದಿ ಪ್ರಸಾರ ಮಾಡುವ ತವಕದಲ್ಲಿ ಅಪಾಯಗಳಾಗುತ್ತಿವೆ. ಅಡುಗೆ ಮನೆಯ ಸಂಗತಿಗಳು, ಬೆಡ್‌ರೂಂನಲ್ಲಿ ಗಂಡ ಹೆಂಡತಿ ನಡೆಯುವ ಜಗಳ, ಮಹಿಳೆಯರು ಜಡೆ ಹಿಡಿದುಕೊಂಡು ಹೊಡೆದಾಡಿಕೊಳ್ಳುವ ದೃಶ್ಯಗಳನ್ನೇ ನಿರಂತರವಾಗಿ ಪ್ರಸಾರ ಮಾಡಿದರೆ ಮನೆಮಂದಿ ಮೇಲೆ ಯಾವ ಪರಿಣಾಮ ಬೀರುತ್ತದೆ ಏನು ಎಂಬುದನ್ನು ಗಮನಿಸಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.

ದೃಶ್ಯ ಮಾಧ್ಯಮಗಳಲ್ಲಿ ಧನಾತ್ಮಕ ಸುದ್ದಿಗಳೇ ಪ್ರಸಾರವಾಗುವುದಿಲ್ಲ. ತಕ್ಷಣದ ಕಳಪೆ ಅಭಿರುಚಿಗೆ ಆದ್ಯತೆ ಸಿಗುತ್ತಿದೆ. ಋಣಾತ್ಮಕ ಸುದ್ದಿಗಳನ್ನೇ ಪ್ರಸಾರ ಮಾಡಿ ಪ್ರಭಾವ ಬೀರಿ ಪ್ರೇಕ್ಷಕ ವೃಂದವನ್ನು ರೂಪಿಸಲಾಗುತ್ತಿದೆ. ಹಾಗಾಗಿ ಮಾಧ್ಯಮ ಕ್ಷೇತ್ರದವರು ಆತ್ಮಾವಲೋಕನ ಮಾಡಿಕೊಂಡು ಸ್ವನಿಯಂತ್ರಣ ಅಗತ್ಯ. ಹಾಗೆಯೇ ಸರ್ಕಾರದ ಮಧ್ಯಪ್ರವೇಶವೂ ಅನಿವಾರ್ಯ’ ಎಂದರು.

ಧಾರಾವಾಹಿಗಳಿಗೆ ಸೆನ್ಸಾರ್‌ ಅಗತ್ಯ
ಇದಕ್ಕೆ ದನಿಗೂಡಿಸಿದ ಬಿಜೆಪಿಯ ರಾಮಚಂದ್ರಗೌಡ, “ದೃಶ್ಯ ಮಾಧ್ಯಮದಲ್ಲಿ ಅಡ್ಡದಾರಿ ಹಿಡಿದ ಸುದ್ದಿಗಳೇ ಹೆಚ್ಚಾಗಿ ಬರುತ್ತಿವೆ. ಜತೆಗೆ ಬುದ್ದಿಜೀವಿಗಳ ಹಾವಳಿ ಹೆಚ್ಚಾಗಿದೆ. ಚಲನಚಿತ್ರಗಳಿಗೆ ಸೆನ್ಸಾರ್‌ ವ್ಯವಸ್ಥೆ ಇರುವಂತೆ ಧಾರಾವಾಹಿಗಳಿಗೂ ಸೆನ್ಸಾರ್‌ ವ್ಯವಸ್ಥೆ ಕಲ್ಪಿಸುವಂತೆ ಕೋರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು’ ಎಂದು ಒತ್ತಾಯಿಸಿದರು.

ಟಿಆರ್‌ಪಿ- ಜಾಹೀರಾತಿಗೆ ಆದ್ಯತೆ
ಈ ಹಿಂದೆ ಬಾಲಕನೊಬ್ಬ ಕೊಳವೆಬಾವಿಯಲ್ಲಿ ಬಿದ್ದ ಘಟನೆ ಬಳಿಕ ಸುದ್ದಿವಾಹಿನಿಯೊಂದು ಒಂದೂವರೆ ದಿನ ಅದೇ ಘಟನೆಯನ್ನು ಪ್ರಸಾರ ಮಾಡಿತ್ತು. ಸುದ್ದಿವಾಹಿನಿಗಳು ಜನಪ್ರತಿನಿಧಿಗಳನ್ನು ಸಂವಾದಕ್ಕೆ ಆಹ್ವಾನಿಸುವುದು ವಿಚಾರ ಮಂಥನಕ್ಕಲ್ಲ. ಬದಲಿಗೆ ಮಾತಿನ ಮಧ್ಯೆ ಜಾಹೀರಾತು ಪಡೆಯುವ ಉದ್ದೇಶ ಎಂದರು.

ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ, “ರವಿ ಕಾಣದ್ದನ್ನ ಕವಿ ಕಂಡ ಎಂಬ ಮಾತಿದೆ. ಇತ್ತೀಚೆಗೆ ಅದು ರವಿ ಕಾಣದ್ದು ಮಾಧ್ಯಮವದರಿಗೆ ಕಾಣುತ್ತಿದೆ ಎಂಬಂತಾಗುತ್ತಿದೆ. ಕೆಲ ಮಾಧ್ಯಮದವರಿಗೆ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಕಂಡರೆ ಪ್ರೀತಿ. ಒಂದಕ್ಕೊಂದು ಘಟನಾವಳಿಗಳನ್ನು ಜೋಡಿಸಿಕೊಂಡು, ಕಲ್ಪಿಸಿಕೊಂಡು ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸುತ್ತಾರೆ. ಮಾಧ್ಯಮಗಳಲ್ಲಿ ಕೆಲವರನ್ನೇ ಗುರಿಯಾಗಿಸಿಕೊಂಡು ನಿರಂತರವಾಗಿ ಟಾರ್ಗೆಟ್‌ ಮಾಡುತ್ತಾ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ’ ಎಂದರು.

ನಾನು ವಕೀಲ, ಪತ್ನಿ ವೈದ್ಯೆ ಹಾಗೂ ಪುತ್ರ ವಕೀಲ ತೆರಿಗೆ ಪಾವತಿಸುತ್ತಿದ್ದು, ಸಾಧಾರಣ ಜೀವನ ನಡೆಸುತ್ತಿದ್ದೇವೆ. ಆದರೆ ಸಂಪಾದಕರೊಬ್ಬರು ಮನೆಯೊಳಗೆ ಕಾರು ಹೋಗುವಂತಹ ಭವ್ಯ ಮನೆ ನಿರ್ಮಿಸಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಮಾಧ್ಯಮ ಭ್ರಷ್ಟರ ಬಗ್ಗೆ ಸುದ್ದಿ ಇಲ್ಲ
ಗಣಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ವರದಿಯಲ್ಲಿನ ರಾಜಕಾರಣಿಗಳ ಹೆಸರು ಜಗಜ್ಜಾಹೀರಾಯಿತು. ಆದರೆ ಆ ಅಕ್ರಮದಲ್ಲಿ ಹೆಸರು ಕೇಳಿಬಂದ ಮಾಧ್ಯಮ ಕ್ಷೇತ್ರದವರ ಬಗ್ಗೆ ವಿವರವಾದ ವರದಿ, ಚರ್ಚೆ ನಡೆಯಲೇ ಇಲ್ಲ. ಒಂದೊಮ್ಮೆ ಆ ವಿವರವನ್ನು ಪ್ರಸಾರ ಮಾಡಿ ಚರ್ಚೆಗೆ ಅವಕಾಶ ನೀಡಿದ್ದರೆ ಮಾಧ್ಯಮಗಳ ಮೌಲ್ಯ, ಬದ್ಧತೆಯನ್ನು ಒಪ್ಪಬಹುದಿತ್ತು. ಮಾಧ್ಯಮದವರಿಗೆ ತಾವು ಕಾನೂನು, ಸಂವಿಧಾನಕ್ಕಿಂತ ಅತೀತರು ಎಂಬ ಭಾವನೆ ಇದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾರಂಗವೂ ಸ್ವಯಂ ನಿಯಂತ್ರಣ ಹಾಕಿಕೊಳ್ಳದಿದ್ದರೆ ಭಾರಿ ಅಪಾಯ ಉಂಟಾಗಲಿದೆ. ಬಹಳಷ್ಟು ಧಾರಾವಾಹಿಗಳಲ್ಲಿ ಮಹಿಳೆಯರನ್ನು ಅಪರಾಧಿಗಳಂತೆ ಬಿಂಬಿಸುತ್ತಿರುವುದು ಅಪಾಯಕರ’ ಎಂದು ಹೇಳಿದರು.

ಮಾಧ್ಯಮ ಸಂಸ್ಥೆಗಳಲ್ಲೂ ದೌರ್ಜನ್ಯ ಪ್ರಕರಣಗಳಿವೆ
ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಗೆ ಮಾಧ್ಯಮ ಸಂಸ್ಥೆಗಳಲ್ಲಿ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧ ಮೂರ್‍ನಾಲ್ಕು ದೌರ್ಜನ್ಯ ಪ್ರಕರಣಗಳಿವೆ. ಆದರೆ ಇತರೆ ಪ್ರಕರಣಗಳಲ್ಲಿ ವಿಡಿಯೋ ಚಿತ್ರೀಕರಣ ಪ್ರಸಾರ ಮಾಡಿದಂತೆ ಈ ಪ್ರಕರಣಗಳ ವಿಡಿಯೋ ಪ್ರಸಾರ ಮಾಡಬೇಕು ಎಂದು ನಾನು ಹೇಳುವುದಿಲ್ಲ. ಯಾವ ಪ್ರಮಾಣದಲ್ಲೂ ಆ ರೀತಿ ಮಾಡಬಾರದಷ್ಟೇ ಎಂದರು.

ಇದಕ್ಕೆ ಕಡಿವಾಣ ಹಾಕುವಂತಹ ಕಾಯ್ದೆ ತಮಿಳುನಾಡು, ತೆಲಂಗಾಣದಲ್ಲಿದೆ ಎಂಬ ಮಾಹಿತಿ ಇದೆ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿ ನಡೆದುಕೊಳ್ಳುವುದನ್ನು ನಿಯಂತ್ರಿಸಲು ಕಠಿಣ ಕಾನೂನು ರೂಪಿಸಲು ಸರ್ಕಾರ ಚಿಂತನೆ ನಡೆಸಬೇಕು. ಸದನ ಸಮಿತಿಯನ್ನಾದರೂ ರಚಿಸಿ ವರದಿ ಪಡೆಯಬಹುದು. ಮಾಧ್ಯಮ, ಸಾರ್ವಜನಿಕ ಕ್ಷೇತ್ರ, ಪೊಲೀಸ್‌ ಹಾಗೂ ನ್ಯಾಯಾಂಗ ಕ್ಷೇತ್ರದ ನುರಿತ, ನಿವೃತ್ತ ಪ್ರಮುಖರ ಸಮಿತಿ ರಚಿಸಿ ಕಾನೂನಾತ್ಮಕವಾಗಿ ಹೇಗೆ ನಿಯಂತ್ರಿಸಬಹುದು ಎಂಬ ಬಗ್ಗೆ ವರದಿ ಪಡೆಯಬಹುದು. ಒಟ್ಟಾರೆ ಬ್ಲ್ಯಾಕ್‌ವೆುàಲ್‌, ಚಾರಿತ್ರ್ಯವಧೆಗೆ ಕಡಿವಾಣ ಬೀಳಬೇಕು’ ಎಂದು ಒತ್ತಾಯಿಸಿದರು.

ಸಚಿವ ರಮೇಶ್‌ಕುಮಾರ್‌ ಮಾತನಾಡಿ, “ಮಾಧ್ಯಮಗಳ ಕಾರ್ಯವೈಖರಿಯು ಕಾನೂನಾತ್ಮಕವೋ ಅಥವಾ ನೈತಿಕತೆಗೆ ಸಂಬಂಧಪಟ್ಟಿಧ್ದೋ ಎಂಬುದು ಮುಖ್ಯ. ವೃತ್ತಿಪರ ನೈತಿಕತೆ ಎಂಬುದು ಅಗೋಚರವಾಗಿದ್ದು, ಅದು ಪಾಲನೆಯಾಗದಿದ್ದರೆ ಈ ರೀತಿಯ ಅನಾಹುತಗಳು ಉಂಟಾಗುತ್ತವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವೂ ಹಾದಿ ತಪ್ಪಿದೆ. ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿದಿವೆ. ನಾನು ಮಾಧ್ಯಮದಿಂದ ತೇಜೋವಧೆಗೆ ಗುರಿಯಾದವನು. ಆಧಾರವಿಲ್ಲದೇ ಆರೋಪ ಮಾಡಿ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ. ಬಳಿಕ ಸತ್ಯಾಂಶವನ್ನು, ತಪ್ಪು ಸುದ್ದಿ ಪ್ರಸಾರಕ್ಕೆ ಕ್ಷಮೆ ಕೇಳುವ ವ್ಯವಸ್ಥೆಯೂ ಇಲ್ಲದಿರುವುದು ವಿಷಾದನೀಯ’ ಎಂದರು.

ಕೆಲವು ಸುದ್ದಿ ವಾಹಿನಿಗಳಲ್ಲಿ ಉದ್ಯೋಗಿಗಳಿಗೆ ವೇತನವನ್ನೇ ನೀಡುತ್ತಿಲ್ಲ. ಬದಲಿಗೆ ನಿಮ್ಮ ಆದಾಯವನ್ನು ನೀವೇ ಸೃಷ್ಟಿಸಿಕೊಳ್ಳಿ ಎಂದರೆ ಏನರ್ಥ. ಗ್ರಾಮಪಂಚಾಯ್ತಿ ಸದಸ್ಯನಿಂದ ಪ್ರಧಾನಿವರೆಗೆ ಎಲ್ಲ ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗುತ್ತಾರೆ. ಆದರೆ ಮಾಧ್ಯಮದವರು, ಐಎಎಸ್‌ ಅಧಿಕಾರಿಗಳು ಯಾವ ಪರಿಶೀಲನೆಗೂ ಒಳಗಾಗುವುದಿಲ್ಲ. ರಾಜ್ಯಕ್ಕೆ ನಿಯೋಜನೆಗೊಳ್ಳುವ ಐಎಎಸ್‌ ಅಧಿಕಾರಿ ಸಾವಿರಾರು ಕೋಟಿ ರೂ. ಅಕ್ರಮ ಆಸ್ತಿ ಗಳಿಸಿ ಹೋದರೂ ಕೇಳದಂತಹ ಸ್ಥಿತಿ ಇದೆ ಎಂದು ಹೇಳಿದರು.

ಮಾಧ್ಯಮಗಳಲ್ಲಿ ಚಾರಿತ್ರ್ಯಹರಣ, ಉದ್ದೇಶಪೂರ್ವಕವಾಗಿ ಧನಾತ್ಮಕ, ಋಣಾತ್ಮಕ ಪ್ರಚಾರ ನೀಡುವುದು, ರಾಜಕೀಯ ಷಡ್ಯಂತ್ರಕ್ಕೆ ವೇದಿಕೆ ಕಲ್ಪಿಸುವುದು ತೀವ್ರವಾಗಿದೆ. ಸಿದ್ಧತೆಯಿಲ್ಲದೆ, ವಸ್ತುಸ್ಥಿತಿಯ ಅರಿವಿಲ್ಲದವರು ನಿರೂಪಕರಾಗಿ, ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಆಭಾಸಗಳಾಗುತ್ತಿವೆ. ಹಾಗಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಮಾಧ್ಯಮಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಸೂಕ್ತ ನಿಯಂತ್ರಣ ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು. ಜೆಡಿಎಸ್‌ನ ರಮೇಶ್‌ಬಾಬು, ಸಾರ್ವತ್ರಿಕವಾಗಿ ಎಲ್ಲರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಪೀತ ಪತ್ರಿಕೋದ್ಯಮದ ಬಗ್ಗೆ ಮಾತ್ರ ಮಾತನಾಡುವುದು ಸೂಕ್ತ ಎಂದು ಸಲಹೆ ನೀಡಿದರು. ಅದಕ್ಕೆ ಕೆಲವು ಸದಸ್ಯರು, ಪತ್ರಿಕೋದ್ಯಮದಲ್ಲಿ ಉತ್ತಮವಾಗಿ ಕೆಲಸ ಮಾಡುವವರು ಇದ್ದಾರೆ. ಅವರ ಬಗ್ಗೆ  ಆಕ್ಷೆಪ ಇಲ್ಲ, ಅಂತವರ ಬಗ್ಗೆ ಸದಾ ಗೌರವ ಇರುತ್ತದೆ ಎಂದು ಹೇಳಿದರು.

ಸುದೀರ್ಘ‌ ಚರ್ಚೆ ಬಳಿಕ ಸಭಾ ನಾಯಕ ಡಾ.ಜಿ.ಪರಮೇಶ್ವರ್‌, “ಇದಕ್ಕೆಲ್ಲಾ ಕಡಿವಾಣ ಹಾಕುವ ಸಂಬಂಧ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದರು. ಬಳಿಕ ಮಾತನಾಡಿದ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, “ನಿಯಮ 330ರ ಅಡಿ ಚರ್ಚೆ ಮುಕ್ತಾಯಗೊಳಿಸಿದ್ದು, ಇನ್ನೊಮ್ಮೆ ಎರಡು ಗಂಟೆ ಕಾಲ ಸುದೀರ್ಘ‌ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

” ಪೊಲೀಸರು ಮಾಡಿದ ಶೂಟ್‌ಗೆ ವ್ಯಕ್ತಿ ಆ ಕ್ಷಣದಲ್ಲೇ ಸತ್ತು ಹೋಗುವ ಸಾಧ್ಯತೆಯಿರುತ್ತದೆ. ಆದರೆ, ಚಾನಲ್‌ಗ‌ಳ ಕ್ಯಾಮೆರಾ ಮಾಡಿದ ಶೂಟ್‌ಗೆ ಪ್ರತಿ ದಿನ ಸಾಯಬೇಕು. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಅದು ಇತರ ಅಂಗಗಳಿಗೆ ಪೂರಕವಾಗಿರಬೇಕೆ ಹೊರತು, ಸವಾರಿ ಮಾಡಬಾರದು. ಉಳಿದ ಅಂಗಗಳಿಗೂ ಇದು ಅನ್ವಯ. ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಚರ್ಚೆ ಆಗಬೇಕು. ಅವುಗಳಿಗೆ ಮೇರೆಗಳನ್ನು ಹಾಕಲು ಕಾನೂನು ತರಬೇಕು. ಮಾಧ್ಯಮಗಳು ಜವಾಬ್ದಾರಿ ತಪ್ಪಿದರೆ ಸಾಮಾರಸ್ಯಕ್ಕೂ ಅಪಾಯ ಆಗಬಹುದು’.
ಭಾನುಪ್ರಕಾಶ್‌, ಬಿಜೆಪಿ ಸದಸ್ಯ.

ಸಚಿವ ಪರಮೇಶ್ವರ್‌ ಉತ್ತರ
ತಾರಾ ಅನುರಾಧ ಪ್ರಶ್ನೆಗೆ ಉತ್ತರಿಸಿದ ಸಭಾನಾಯಕ ಡಾ.ಜಿ. ಪರಮೇಶ್ವರ್‌, ಟಿ.ವಿ ವಾಹಿನಿಗಳಿಗೆ ಸಂಬಂಧಪಟ್ಟ ದೂರು ಪರಿಶೀಲಿಸಲಾಗುತ್ತದೆ. ಇತ್ತೀಚೆಗೆ ಸಚಿವರೊಬ್ಬರ ಪ್ರಕರಣವನ್ನು ಮುಸುಕು ಮಾಡದೆ ಪ್ರಸಾರ ಮಾಡಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತೆ ಡಾ.ವಿಜಯಾ ಅವರ ದೂರಿನ ಮೇರೆಗೆ ಸುದ್ದಿ ವಾಹಿನಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಅವರಿಂದ ಸ್ಪಷ್ಟನೆ ಪಡೆದು ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ಬಳಿಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯಕ್ಕೆ ಶಿಫಾಸಲು ಮಾಡಲು ನಿರ್ಧರಿಸಬಹುದಾಗಿದೆ. ಹಾಗೆಯೇ ಖಾಸಗಿ ಮನರಂಜನಾ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಮೂರು ಧಾರಾವಾಹಿಗಳಲ್ಲಿ ಮೂಢನಂಬಿಕೆ, ದೆವ್ವ, ವಿಧವೆ ಇತ್ಯಾದಿಯಾಗಿ ಬಿಂಬಿಸುತ್ತಿರುವ ಬಗ್ಗೆ ನೋಟಿಸ್‌ ನೀಡಲಾಗಿದೆ. ಇದಕ್ಕೆ ಉತ್ತರ ನೀಡದ ಕಾರಣ ಮತ್ತೂಮ್ಮೆ ನೋಟಿಸ್‌ ನೀಡಿದ್ದು, ಉತ್ತರ ಬಾರದಿದ್ದರೆ ಅಂತಿಮ ತೀರ್ಮಾನವನ್ನು ರಾಜ್ಯಮಟ್ಟದ ಸಮಿತಿಯಲ್ಲಿ ಕೈಗೊಂಡು ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯಕ್ಕೆ ಶಿಫಾರಸು ಮಾಡಲು ನಿರ್ಧರಿಸಬಹುದು ಎಂದು ಸದನಕ್ಕೆ ತಿಳಿಸಿದರು.

ಟಿ.ವಿಯೊಂದರ ಜ್ಯೋತಿಷಿ ನೀಡಿದ ಸಲಹೆಯಿಂದ ನನ್ನ ಒಡಹುಟ್ಟಿದ ತಂಗಿ ಮಗಳ ಕುಟುಂಬದ ನೆಮ್ಮದಿಯೇ ಹಾಳಾಗಿದೆ. ಜ್ಯೋತಿಷಿಯೊಬ್ಬರು ತಂಗಿಯ ಮಗಳಿಗೆ ತನ್ನ ಅತ್ತೆ, ಮಾವ ಮನೆಯ ಬಾಗಿಲಲ್ಲಿ ನಿಂಬೆಹಣ್ಣು ಹಾಕಿಸಿ ಮಾಟ ಮಾಡಿಸಿದ್ದಾರೆ. ಹಾಗಾಗಿ ಅವರನ್ನು ಮನೆಯಿಂದ ಹೊರಗಿಡಿ ಎಂದು ಸಲಹೆ ನೀಡಿದ್ದ. ಅದರಂತೆ ಅತ್ತೆ, ಮಾವವನ್ನು ಹೊರಗಿಟ್ಟಿದ್ದರಿಂದ ಸಂಸಾರದಲ್ಲಿ ಏರುಪೇರಾಗಿದೆ. ಬಳಿಕ ರಾಜಾಜಿನಗರದ ಆ ಜ್ಯೋತಿಷಿಯನ್ನು ಪತ್ತೆ ಹಚ್ಚಿ ಚೆನ್ನಾಗಿ ಬೈದುಬಂದಿದ್ದೆ. ಬಳಿಕ ಆತ ತಂಗಿಯ ಮಗಳಿಗೆ ಅತ್ತೆ, ಮಾವರನ್ನು ಮುಗಿಸಿಬಿಡು ಎಂದು ಸಲಹೆ ನೀಡಿದ್ದ. ಇದರಿಂದ ಪತಿ- ಪತ್ನಿ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿದೆ. ಕೆಲಸವಿಲ್ಲದ, ತಮ್ಮ ಭವಿಷ್ಯವೇ ಗೊತ್ತಿಲ್ಲದವರ ಜ್ಯೋತಿಷ್ಯ ಪ್ರಸಾರ ಮಾಡುವುದಕ್ಕೆ ಏನು ಹೇಳಬೇಕು. ದೃಶ್ಯ ಮಾಧ್ಯಮಗಳಲ್ಲಿ ಶೇ.80ರಷ್ಟು ಕಾರ್ಯಕ್ರಮಗಳು ಅಪರಾಧ ಸುದ್ದಿಗಳೇ ಪ್ರಸಾರವಾಗುತ್ತಿವೆ.
– ಬಸವರಾಜ ಹೊರಟ್ಟಿ, ಜೆಡಿಎಸ್‌ ಸದಸ್ಯ

ವಿಧಾನಸಭೆಯಲ್ಲಿ ನಿಯಮ 69 ರಡಿ ಸಾರ್ವಜನಿಕ ಜರೂರು ವಿಷಯದ ಚರ್ಚೆಗೆ ಅವಕಾಶ ಕೋರಿ ಕೆಜೆಪಿಯ ಬಿ.ಆರ್‌.ಪಾಟೀಲ್‌ ಹಾಗೂ ಇತರೆ ಸದಸ್ಯರು ನೀಡಿದ್ದ ಪ್ರಸ್ತಾವನೆಯಡಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವಕಾಶ ನೀಡಿದರು. ಕಲಾಪ ಕಾರ್ಯಸೂಚಿ ಪ್ರಕಾರ ಪ್ರಶ್ನೋತ್ತರ ನಂತರ ಬಜೆಟ್‌ ಮೇಲಿನ ಚರ್ಚೆ ನಂತರ ನಿಗದಿಯಾಗಿತ್ತಾದರೂ ಪ್ರಶ್ನೋತ್ತರ, ಶೂನ್ಯ ವೇಳೆ ಆದ ತಕ್ಷಣ ಚರ್ಚೆಗೆ ಅವಕಾಶ ಕೊಡಲಾಯಿತು. ಅದೇ ವೇಳೆ ಪರಿಷತ್‌ನಲ್ಲಿ ನಿಯಮ 330 ರಡಿ ಬಿಜೆಪಿಯ ತಾರಾ ಅನುರಾಧ ಹಾಗೂ ಇತರೆ ಸದಸ್ಯರು ನೀಡಿದ ಪ್ರಸ್ತಾವನೆಯಡಿ ಸಭಾಪತಿ ಶಂಕರಮೂರ್ತಿ ಚರ್ಚೆಗೆ ಅವಕಾಶ ಕೊಟ್ಟರು.

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಾರ್ವಜನಿಕರ ವೈಯಕ್ತಿಯ ಸಂಗತಿಗಳು ವ್ಯಾಪಕವಾಗಿ ಪ್ರಸಾರವಾಗುತ್ತಿರುವುದರಿಂದ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದೆ. ಇದನ್ನು ತಡೆಗಟ್ಟಲು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಅಗತ್ಯವಿದೆ
– ತಾರಾ ಅನುರಾಧ, ಬಿಜೆಪಿ ಶಾಸಕಿ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆ ಪತ್ರಿಕಾರಂಗವೂ ಹಾದಿ ತಪ್ಪಿದೆ. ನಾನೂ ಮಾಧ್ಯಮದಿಂದ ತೇಜೋವಧೆಗೆ ಗುರಿಯಾದವನು. ತಪ್ಪು ಸುದ್ದಿ ಪ್ರಸಾರಕ್ಕೆ ಕ್ಷಮೆ ಕೇಳುವ ವ್ಯವಸ್ಥೆಯೂ ಇಲ್ಲದಿರುವುದು ವಿಷಾದನೀಯ
– ರಮೇಶ್‌ಕುಮಾರ್‌, ಆರೋಗ್ಯ ಸಚಿವ

ಮಾಧ್ಯಮದವರಿಗೆ ತಾವು ಕಾನೂನು, ಸಂವಿಧಾನಕ್ಕಿಂತ ಅತೀತರು ಎಂಬ ಭಾವನೆ ಇದೆ. ಮಾಧ್ಯಮದವರ ಭ್ರಷ್ಟಾಚಾರ ಬಹಿರಂಗವಾಗುವುದೇ ಇಲ್ಲ.
 – ವಿ ಎಸ್‌ ಉಗ್ರಪ್ಪ, ಕಾಂಗ್ರೆಸ್‌ ಸದಸ್ಯ

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.