CONNECT WITH US  

ನಾಳೆಯಿಂದ ಹಾಲು, ಮೊಸರು ತುಟ್ಟಿ

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹಾಲು ಮತ್ತು ಮೊಸರು ಬೆಲೆ ಹೆಚ್ಚಳ ಮಾಡಿದ್ದು, ಶನಿವಾರದಿಂದಲೇ ಎಲ್ಲ ಮಾದರಿಯ ಹಾಲು, ಮೊಸರು ಲೀಟರ್‌ಗೆ ದಕ್ಷಿಣ ಕರ್ನಾಟಕದಲ್ಲಿ 2 ರೂ. ಹಾಗೂ ಉತ್ತರ ಕರ್ನಾಟಕದಲ್ಲಿ 1 ರೂ. ಹೆಚ್ಚಳವಾಗಲಿದೆ.

ಏಪ್ರಿಲ್‌ 1 ರಿಂದ ಎಲ್ಲಾ ಮಾದರಿಯ ಪ್ರತಿ ಲೀಟರ್‌ ನಂದಿನಿ ಹಾಲು ಮತ್ತು ಮೊಸರಿಗೆ ದರ ಹೆಚ್ಚಿಸಿ ಕೆಎಂಎಫ್ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಇರುವುದರಿಂದ ಹಾಲು ಉತ್ಪಾದಕರಿಗೆ ಮೇವು ಮತ್ತು ನೀರು ಸಂಗ್ರಹಿಸುವುದು ಕಷ್ಟವಾಗಿರುವುದರಿಂದ ಹೆಚ್ಚಳ ಮಾಡಿರುವ ದರವನ್ನು ಪೂರ್ಣ ವಾಗಿ ಹಾಲು ಉತ್ಪಾದಕರಿಗೆ ಮೊದಲ ದಿನ ದಿಂದಲೇ ನೀಡಲಾಗುವುದು ಎಂದು ಕರ್ನಾಟಕ
ಹಾಲು ಮಹಾ ಮಂಡಳ ತಿಳಿಸಿದೆ.  

ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ, ಬೆಳಗಾವಿ, ಬಳ್ಳಾರಿ, ಧಾರವಾಡ ಹಾಲು ಒಕ್ಕೂಟ ಸೇರಿದಂತೆ ಐದು ಒಕ್ಕೂಟಗಳ ವ್ಯಾಪ್ತಿಯಲ್ಲಿ ಬರುವ 13 ಜಿಲ್ಲೆಗಳಿಗೆ 1 ರೂ. ಹೆಚ್ಚಳ ಮಾಡಲಾಗಿದ್ದು, ದಕ್ಷಿಣ ಕರ್ನಾಟಕ ಉಳಿದ ಜಿಲ್ಲೆಗಳಿಗೆ ಪ್ರತಿ ಲೀಟರ್‌ ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದಕ್ಷಿಣ ಕರ್ನಾಟಕದ ಭಾಗಕ್ಕಿಂತಲೂ ಈಗಾಗಲೇ ಪ್ರತಿ ಲೀಟರ್‌ಗೆ ಒಂದು ರೂ. ಹೆಚ್ಚಿಗೆ ಇರುವುದರಿಂದ ರಾಜ್ಯಾದ್ಯಂತ ಏಕ ರೂಪದ ದರ ಜಾರಿಗೆ ತರಲು ಕೆಎಂಎಫ್ ಈ ತೀರ್ಮಾನ ಮಾಡಿದೆ. ರಾಜ್ಯದಲ್ಲಿ 
ಸದ್ಯ 60 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಕಳೆದ ವರ್ಷಕ್ಕಿಂತ 1 ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಕಡಿಮೆಯಾಗಿದೆ.
ಹಾಲು ಮಾರಟಗಾರರ ಕಮಿಷನ್‌ ಹೆಚ್ಚಿಸದಿರಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಎಲ್ಲ ಹಾಲಿನ ಒಕ್ಕೂಟಗಳು ಲಾಭದಲ್ಲಿದ್ದು, ರೈತರಿಗೆ ಹಾಲು ಉತ್ಪಾದನೆಯಲ್ಲಿ ಸಂಕಷ್ಟ ಇರುವುದರಿಂದ ಅವರ ನೆರವಿಗೆ 
ಬರಲು ದರ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಮಂಡಳಿಗೆ ಹೆಚ್ಚಿನ ಲಾಭಾಂಶ ದೊರೆಯುವುದಿಲ್ಲ ಎಂದು ಕೆಎಂಎಫ್
ನಿರ್ಗಮಿತ ಅಧ್ಯಕ್ಷ ನಾಗರಾಜ್‌ ತಿಳಿಸಿದ್ದಾರೆ.

Trending videos

Back to Top