CONNECT WITH US  

ಆರ್‌ಟಿಇ ಅರ್ಜಿಯಲ್ಲಿ ಶಾಲೆಯ ಆಯ್ಕೆ ಮಿತಿ ಸಡಿಲ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ. 25ರಷ್ಟು ಸೀಟಿಗೆ ಒಂದೇ ಅರ್ಜಿಯಲ್ಲಿ ಎಷ್ಟು ಶಾಲೆಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಸೀಟು ಹಂಚಿಕೆ ಮಾತ್ರ ಆನ್‌ಲೈನ್‌ ಲಾಟರಿ ಪ್ರಕ್ರಿಯೆಯಲ್ಲೇ ನಡೆಯಲಿದೆ. ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಗ್ರಾಮದ ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ಹಾಗೂ ನಗರ ಪ್ರದೇಶದಲ್ಲಿ ವಾರ್ಡ್‌ ವ್ಯಾಪ್ತಿಯ ಖಾಸಗಿ ಶಾಲೆಗೆ ಆರ್‌ಟಿಇಯಡಿ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ಈ ಹಿಂದೆ ಇತ್ತು. ಹಾಗೆಯೇ ಅರ್ಜಿಯಲ್ಲಿ 5ಕ್ಕಿಂತ ಅಧಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ಈ ವರ್ಷ ನಿಯಮದಲ್ಲಿ ಸ್ವಲ್ಪ ಸಡಿಲ ಮಾಡಲಾಗಿದ್ದು, ಆರ್‌ಟಿಇ ಅಡಿ ಅರ್ಜಿ ಸಲ್ಲಿಸುವವರು ಒಂದೇ ಅರ್ಜಿಯಲ್ಲಿ ಎಷ್ಟು ಶಾಲೆಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.

ಎ. 15ರವರೆಗೆ ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ರಾಜ್ಯದ 11,800 ಖಾಸಗಿ ಶಾಲೆಯಲ್ಲಿ ಲಭ್ಯವಿರುವ 1.30 ಲಕ್ಷ ಆರ್‌ಟಿಇ ಸೀಟುಗಳಿಗೆ ಈಗಾಗಲೇ 1.93 ಲಕ್ಷ ಅರ್ಜಿ ಬಂದಿದ್ದು, ಒಂದೇ ಅರ್ಜಿಯಲ್ಲಿ 65 ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವ ನಿದರ್ಶನ ಕೂಡ ಶಿಕ್ಷಣ ಇಲಾಖೆಗೆ ಸಿಕ್ಕಿದೆ. ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಆಧಾರ್‌ ಸಂಖ್ಯೆ ಕಡ್ಡಾಯವಾಗಿರುತ್ತದೆ. ಆಧಾರ್‌ ಇಲ್ಲದೇ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಆರ್‌ಟಿಇ ವಿಭಾಗದ ಅಧಿಕಾರಿ ಪಾಲಾಕ್ಷಯ್ಯ ಅವರು ಮಾಹಿತಿ ನೀಡಿದ್ದಾರೆ.

ನಕಲಿ ಅರ್ಜಿಗೆ ಅವಕಾಶವಿಲ್ಲ
ಮನೆ ವಿಳಾಸ ಅಥವಾ ಇನ್ಯಾವುದೋ ನಕಲಿ ದಾಖಲೆ ನೀಡಿ ಆರ್‌ಟಿಇ ಅಡಿ ಅರ್ಜಿ ಸಲ್ಲಿಸಲು ಈ ವರ್ಷ ಸಾಧ್ಯವಿಲ್ಲ. ಆಧಾರ್‌ ಸಂಖ್ಯೆ ಕಡ್ಡಾಯವಾಗಿರುವುದರಿಂದ ಆಧಾರ್‌ನಲ್ಲಿರುವ ವಿಳಾಸವನ್ನೇ ನೀಡಬೇಕಾಗುತ್ತದೆ. ತಪ್ಪು ವಿಳಾಸ ನೀಡಿ ಭರ್ತಿ ಮಾಡಿದ ಅರ್ಜಿಯನ್ನು ಆ ಕ್ಷಣವೇ ತಿರಸ್ಕರಿಸಲಾಗುತ್ತದೆ. ಅಲ್ಲದೇ ಈ ಸಂಬಂಧ ಪಾಲಕರ ಮೊಬೈಲ್‌ಗೆ ಸಂದೇಶ ರವಾನಿಸಲಾಗುತ್ತದೆ. ಇಲಾಖೆ ಅಧಿಕಾರಿಗಳಿಗೆ ಅರ್ಜಿ ಪರಿಶೀಲನೆಯೂ ಸುಲಭವಾಗಿರುತ್ತದೆ.


Trending videos

Back to Top