CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಸ್ಥಿತಿ ಗಂಭೀರ

ಬೆಂಗಳೂರು: ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ತಪಾಸಣೆಗಾಗಿ ಮೂರು ದಿನಗಳ ಹಿಂದೆ ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ಅವರಿಗೆ ಬುಧವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ವೈದ್ಯರು ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದಾರೆ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಎಂ.ಎಸ್‌. ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾ.ನರೇಶ್‌, "ಪಾರ್ವತಮ್ಮ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. ವೆಂಟಿಲೇಟರ್‌ನಿಂದ ಹೊರಬರುವವರೆಗೆ ಪರಿಸ್ಥಿತಿ ಸ್ವಲ್ಪ ಗಂಭೀರವಾಗಿರುತ್ತದೆ. ಅದು ಬಿಟ್ಟರೆ ಬಿಪಿ, ಪಲ್ಸ್‌ನಲ್ಲಿ ಸುಧಾರಣೆ ಕಾಣುತ್ತಿದೆ. ಅವರಿಗೆ ಕಿಡ್ನಿಯ ಸಮಸ್ಯೆಯೂ ಇದ್ದು, ಅಗತ್ಯಬಿದ್ದರೆ ಡಯಾಲೀಸಿಸ್‌ ಮಾಡುತ್ತೇವೆ. ಅದು ಬಿಟ್ಟರೆ ಆತಂಕಪಡುವ ಅಗತ್ಯವಿಲ್ಲ' ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜಕುಮಾರ್‌, "ವೆಂಟಿಲೇಟರ್‌ ಎಂದಾಕ್ಷಣ ಎಲ್ಲರಿಗೂ ಒಂದು ಭಯ, ಗಾಬರಿ ಇದ್ದೇ ಇರುತ್ತದೆ. ನಾವು ಅವರ ಮಕ್ಕಳು ಆ ಭಯ ನಮಗೂ ಇದೆ. ಆದರೆ, ಬೇರೆ ತರಹದ ನ್ಯೂಸ್‌ ಹರಡಬೇಡಿ. ಎಲ್ಲಾ ವೈದ್ಯರು ಅಮ್ಮನ ಬಗ್ಗೆ ಕೇರ್‌ ತೆಗೆದುಕೊಳ್ಳುತ್ತಿದ್ದಾರೆ' ಎಂದರು. ಅಮ್ಮನ ಆರೋಗ್ಯದ ಬಗ್ಗೆ ಮಾತನಾಡಿದ ಪುತ್ರ ರಾಘವೇಂದ್ರ ರಾಜಕುಮಾರ್‌, 
"ವೈದ್ಯರ ತಂಡ ಅಮ್ಮನಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡುತ್ತಿದೆ.ಈಗ ಅಮ್ಮ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಬೇಕು. ಎಲ್ಲರ ಪ್ರಾರ್ಥನೆಯ ಅಗತ್ಯವಿದೆ' ಎಂದರು.

ಪಾರ್ವತಮ್ಮ ಅವರ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗುತ್ತಿದ್ದಂತೆ ಅವರ ಕುಟುಂಬ ವರ್ಗ ಆಸ್ಪತ್ರೆಗೆ ಭೇಟಿ ನೀಡಿತು. ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಪುತ್ರಿಯರಾದ ಪೂರ್ಣಿಮ, ಲಕ್ಷ್ಮೀ, ಮೊಮ್ಮಕ್ಕಳು ಸೇರಿದಂತೆ ಅವರ ಕುಟುಂಬ ವರ್ಗ ಆಸ್ಪತ್ರೆಗೆ ಭೇಟಿ ನೀಡಿ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿತು. ಇನ್ನು, ಆಸ್ಪತ್ರೆಗೆ ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಸೇರಿದಂತೆ ಅನೇಕರು ಭೇಟಿ ನೀಡಿ, ಪಾರ್ವತಮ್ಮ ಅವರ ಆರೋಗ್ಯದ ಮಾಹಿತಿ ಪಡೆದರು.

ಚಿತ್ರರಂಗದಲ್ಲಿ ಆತಂಕದ ಛಾಯೆ: ಪಾರ್ವತಮ್ಮ ರಾಜಕುಮಾರ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಆತಂಕದ ಛಾಯೆ ಆವರಿಸಿತ್ತು. ಪಾರ್ವತಮ್ಮ ಅವರ ಅನಾರೋಗ್ಯದ ಕಾರಣದಿಂದ ಸಿನಿಮಾ ಪತ್ರಿಕಾಗೋಷ್ಠಿಯನ್ನೂ ಮುಂದೂಡಲಾಯಿತು. ಇನ್ನು, ಚಿತ್ರರಂಗದ ಅನೇಕ ಮಂದಿ ಆಸ್ಪತ್ರೆ ಭೇಟಿ ಕೊಟ್ಟು ಪಾರ್ವತಮ್ಮ ಅವರ ಆರೋಗ್ಯದ ಸ್ಥಿತಿಯನ್ನು ವಿಚಾರಿಸಿದರು. ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಟರಾದ ಜಗ್ಗೇಶ್‌, ಕೋಮಲ್‌, ವಿಜಯರಾಘವೇಂದ್ರ ಸೇರಿದಂತೆ ಅನೇಕರು ಆಸ್ಪತ್ರೆ ಧಾವಿಸಿ ಬಂದರು.

ಇನ್ನು, ಪಾರ್ವತಮ್ಮ ಅವರ ಆರೋಗ್ಯದ ಸ್ಥಿತಿ ಬಗ್ಗೆ ವದಂತಿಗಳು ಹಬ್ಬಿದ್ದರಿಂದ ಹಾಗೂ ಮಾಧ್ಯಮಗಳಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಡಿದ್ದರಿಂದ ಆಸ್ಪತ್ರೆ ಬಳಿ ಸಾಕಷ್ಟು ಮಂದಿ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಕೂಡಾ ಮಾಡಲಾಗಿತ್ತು.

ಬ್ರೆಸ್ಟ್‌ ಕ್ಯಾನ್ಸರ್‌ಗೆ ಒಳಗಾಗಿದ್ದ ಪಾರ್ವತಮ್ಮ ಅವರು ಅದರಿಂದ ಗುಣಮುಖರಾಗಿದ್ದರು ಕೂಡಾ. ಆದರೆ, ಇತ್ತೀಚಿನ ದಿನಗಳಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಗಾಗ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ತಪಾಸಣೆಗೆ ಹೋಗಿ ಬರುತ್ತಿದ್ದರು. ಅದರಂತೆ ಮೂರು ದಿನಗಳ ಹಿಂದೆಯೂ ಪಾರ್ವತಮ್ಮ ಅವರು ಪ್ರತಿ ತಿಂಗಳ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಆದರೆ, ವೈದ್ಯರು ಇವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದರು. ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಾ ಆಸ್ಪತ್ರೆಗೆ ತೆರಳಿ ಪಾರ್ವತಮ್ಮ ಅವರ ಅವರ ವಿಚಾರಿಸಿದ್ದರು. ಆದರೆ, ಬುಧವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. ಈಗ ಪಾರ್ವತಮ್ಮ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದರಿಂದ ಇಡೀ ಕುಟುಂಬ ಹಾಗೂ ಅಭಿಮಾನಿ ವರ್ಗದಲ್ಲಿ ಆತಂಕದ ಛಾಯೆ ಮೂಡಿದೆ.

Back to Top