CONNECT WITH US  

ತಂತ್ರಜ್ಞಾನ ಸದ್ಬಳಕೆಗೆ ಅತ್ಯುನ್ನತ ಕೇಂದ್ರ ಸ್ಥಾಪನೆ

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಬಳಕೆಗೆ ಸೂಕ್ತವಾದ ವೃತ್ತಿಪರ ಮಾನವ 
ಸಂಪನ್ಮೂಲವನ್ನು ರೂಪಿಸಲು ಪ್ರತಿಷ್ಠಿತ ಐಟಿ ಸಂಬಂಧಿತ ಕಂಪನಿಗಳ ಸಹಯೋಗದಲ್ಲಿ ದೇಶದಲ್ಲೇ ಪ್ರಥಮವೆನಿಸಿದ
ಅತ್ಯುನ್ನತ ಕೇಂದ್ರವನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಮುಂದಿನ ಪೀಳಿಗೆ ತಂತ್ರಜ್ಞಾನಕ್ಕೆ ತಕ್ಕಂತೆ ಕಂಪನಿಗಳು ಬಯಸುವ ವೃತ್ತಿಪರರನ್ನು ರೂಪಿಸಲು, ಆ ಮೂಲಕ  
ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಹಾಗೂ ನವೋದ್ಯೋಗಕ್ಕೆ ಪ್ರೋತ್ಸಾಹ ನೀಡಲು ಅತ್ಯುನ್ನತ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ ಕಾರ್ಯ ಚುರುಕಾಗಿ ನಡೆದಿದೆ. ನಿರೀಕ್ಷೆಯಂತೆ ಎಲ್ಲವೂ ನಡೆದರೆ ಮಾಸಾಂತ್ಯದಲ್ಲಿ ಪ್ರತಿಷ್ಠಿತ ಕಂಪನಿಗಳೊಂದಿಗೆ ಒಡಂಬಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಜ್ಜಾಗಿದೆ.

ಎರಡು ದಶಕಗಳಿಂದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ "ಸರ್ವಿಸ್‌ ಕ್ಷೇತ್ರ'ದ ಸೇವೆಯನ್ನಷ್ಟೇ ರಾಜ್ಯದಿಂದ
ಯಥೇತ್ಛವಾಗಿ ಪೂರೈಸಲಾಗುತ್ತಿದೆ. ಆದರೆ ಸುಧಾರಿತ ತಂತ್ರಜ್ಞಾನದ ಅಳವಡಿಕೆ, ಸೂಕ್ತ ತರಬೇತಿಯಿಲ್ಲದ ಕಾರಣ
ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸುಧಾರಿತ ತಂತ್ರಜ್ಞಾನ, ಮುಂದಿನ ಪೀಳಿಗೆಯ
ತಂತ್ರಜ್ಞಾನದ ಬಳಕೆ ಬಗ್ಗೆ ಸೂಕ್ತ ತರಬೇತಿ ಕೊಡಿಸಿ ವೃತ್ತಿಪರರನ್ನು ರೂಪಿಸಿ ಉದ್ಯೋಗ ಕಲ್ಪಿಸಲು ರಾಜ್ಯ
ಸರ್ಕಾರ ಚಿಂತಿಸಿದೆ. 

ಪ್ರತಿ ವರ್ಷ ಪದವೀಧರರಾಗುತ್ತಿರುವವರ ಪೈಕಿ ಶೇ.7ರಿಂದ ಶೇ.10ರಷ್ಟು ಮಂದಿಯಷ್ಟೇ ಉದ್ಯೋಗ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಹೊಸ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳಲ್ಲಿ ಉದ್ಯೋಗಗಳಿದ್ದರೂ ವೃತ್ತಿಪರರ ಕೊರತೆ ಇದೆ. ಈ ಎರಡೂ ಕ್ಷೇತ್ರದ ನಡುವಿನ ಅಂತರ ನಿವಾರಿಸಿ ಕೈಗಾರಿಕೆಗಳಿಗೆ ಅಗತ್ಯವಾದ ವೃತ್ತಿಪರರನ್ನು ಪಡೆಯಲು ಅಗತ್ಯವಾದ ತರಬೇತಿಯನ್ನು ಕಂಪನಿಗಳಿಂದಲೇ ಕೊಡಿ ಸುವ ವ್ಯವಸ್ಥೆ ಕಲ್ಪಿಸಲು ರೂಪುರೇಷೆ ಸಿದ್ಧಪಡಿಸಿದೆ. ಅನಿಮೇಷನ್‌, ಬಿಗ್‌ ಡೇಟಾ, ಗೇಮಿಂಗ್‌, ಆರ್ಟಿμ ಷಿಯಲ್‌ ಇಂಟೆಲಿಜೆನ್ಸ್‌, ಸೈಬರ್‌ ಸುರಕ್ಷತೆ ಸೇರಿ ಇತರೆ ಕ್ಷೇತ್ರಗಳು ಮುಂದಿನ ಪೀಳಿಗೆಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿವೆ. ಮುಂದೆ ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದ್ದು, ಅದಕ್ಕೆ ಸ್ಥಳೀಯರನ್ನೇ ಸಜ್ಜುಗೊಳಿಸುವುದು ಇಲಾಖೆ ಉದ್ದೇಶ.

ನವೋದ್ಯೋಗ- ಸಂಶೋಧನೆಗೂ ಒತ್ತು: ಜಿಇ, ಒರಾಕಲ್‌, ನೋಕಿಯಾ ಸೇರಿ ಪ್ರತಿಷ್ಠಿತ ಕಂಪನಿಗಳು ತಮ್ಮ ಸಂಶೋ
ಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ರಾಜ್ಯದಲ್ಲಿ ತೆರೆದಿವೆ. ಇದರಿಂದ ಸಂಶೋಧನೆಗೆ ಅಗತ್ಯವಾದ ವೃತ್ತಿಪರರು, ತಜ್ಞ
ಮಾನವ ಸಂಪನ್ಮೂಲ ಲಭ್ಯವಿದೆ ಎಂಬುದು ಸ್ಪಷ್ಟವಾಗ ಲಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ತರಬೇತಿ
ಅಗತ್ಯ. ಹಾಗಾಗಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿ ಕೊಂಡು ತರಬೇತಿ ಕೊಡಿಸಿ ಉದ್ಯೋಗ ಕಲ್ಪಿಸುವ ಪ್ರಯತ್ನ
ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಮೂರು ತಿಂಗಳಲ್ಲಿ ಆರಂಭ
ಮಾಹಿತಿ ತಂತ್ರಜ್ಞಾನ ಸಂಬಂಧಿತ ಕ್ಷೇತ್ರಕ್ಕೆ ವೃತ್ತಿಪರರನ್ನು ರೂಪಿಸಲು ಪ್ರತಿಷ್ಠಿತ ಕಂಪನಿಗಳಿಂದಲೇ ಕೌಶಲ್ಯ ತರಬೇತಿ ಕೊಡಿಸಿ ಉದ್ಯೋಗ ಕಲ್ಪಿಸುವ ಸಲುವಾಗಿ ಡೇಟಾ ಅನಾಲಿಸ್ಟಿಕ್ಸ್‌, ಮೆಷಿನ್‌ ಲರ್ನಿಂಗ್‌, ಆಲ್ಟರ್ನೇಟಿವ್‌ ಇಂಟೆಲಿಜೆನ್ಸ್‌ ಸೇರಿದಂತೆ ಇತರೆ ಆಯ್ದ ಸೇವೆಗೆ ಸಂಬಂಧಪಟ್ಟಂತೆ ದೇಶದಲ್ಲೇ ಮೊದಲ ಬಾರಿಗೆ ಅತ್ಯುನ್ನತ ಕೇಂದ್ರ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು. ಈ ಪ್ರಯತ್ನಕ್ಕೆ ಕೈಜೋಡಿಸಲು ಪ್ರತಿಷ್ಠಿತ ಮೈಕ್ರೋಸಾಫ್ಟ್, ಐಬಿಎಂ, ಇಂಟೆಲ್‌ ಇತರೆ ಕಂಪನಿಗಳು ಆಸಕ್ತಿ ತೋರಿವೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರತಿಷ್ಠಿತ ಕಂಪನಿಗಳ ಸಹಕಾರದೊಂದಿಗೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ನಡೆದಿದೆ. ಕೌಶಲ್ಯ ತರಬೇತಿಗೆ ಆಯ್ಕೆ, ಉದ್ಯೋಗ ಸೃಷ್ಟಿ ಇತರೆ ಅಂಶಗಳ ಬಗ್ಗೆ ಚರ್ಚಿಸಿ ಅಂತಿಮಗೊಳಿಸಬೇಕಿದೆ. 

ಮಾಸಾಂತ್ಯದೊಳಗೆ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮೂರು ತಿಂಗಳಲ್ಲಿ ಆರಂಭಿಸಲು ಚಿಂತಿಸಲಾಗಿದೆ. ಇದರಿಂದ ಹಲವು ಪ್ರಯೋಜನಗಳಿವೆ. ಒಂದೆಡೆ ಕಂಪನಿಗಳಿಗೆ ಅಗತ್ಯವಾದ ವೃತ್ತಿಪರರು ದೊರೆತರೆ, ಇನ್ನೊಂದೆಡೆ ಯುವಜನತೆಗೆ ಉದ್ಯೋಗಾವಕಾಶ ಸಿಗಲಿದೆ. ಜತೆಗೆ ನವೋದ್ಯೋಗ, ಸಂಶೋಧನೆಗೂ ಒತ್ತು ಸಿಗುವಂತಾಗಲಿದೆ. ಆ ಮೂಲಕ ಪರೋಕ್ಷವಾಗಿ ಬಂಡವಾಳ ಹೂಡಿಕೆಗೂ ನೆರವಾಗಲಿದೆ ಎಂದು ಹೇಳಿದರು.

ಎಂ. ಕೀರ್ತಿಪ್ರಸಾದ್‌
 

Trending videos

Back to Top