CONNECT WITH US  

ಸಂಪುಟ ವಿಸ್ತರಣೆ: ಸಿಎಂ, ಪರಂ ಗೌಪ್ಯ ಮಾತುಕತೆ

ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿ ವೇಶನದ ಅನಂತರ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನ ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿರುವು ದರಿಂದ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಗರಿ ಗೆದರಿವೆ. ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನ ಭರ್ತಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಸದ್ಯದಲ್ಲೇ ದಿಲ್ಲಿಗೆ ತೆರಳಿ ಹೈಕಮಾಂಡ್‌ ಜತೆ ಚರ್ಚಿಸಿ ಪಟ್ಟಿ ಅಂತಿಮ ಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಸಂಪುಟದಲ್ಲಿ ಖಾಲಿ ಇರುವ ಸ್ಥಾನ ಗಳ ಭರ್ತಿ, ನೂತನ ಗೃಹ ಸಚಿವರ ನೇಮಕ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ರವಿವಾರ ರಹಸ್ಯ ಮಾತುಕತೆ ನಡೆಸಿದರು.
ಉಪಾಹಾರಕ್ಕಾಗಿ ಹೊಟೇಲ್‌ವೊಂದಕ್ಕೆ ತೆರಳಿದ್ದ ಸಿದ್ದರಾಮಯ್ಯ ಹಾಗೂ  ಪರಮೇಶ್ವರ್‌ ಒಂದು ಗಂಟೆಗೂ ಹೆಚ್ಚು ಕಾಲ ಪ್ರಸಕ್ತ ರಾಜಕೀಯ ವಿದ್ಯಮಾನ, ವಿಧಾನಪರಿಷತ್‌ ಸಭಾಪತಿ ಸ್ಥಾನದ ವಿಚಾರದಲ್ಲಿ ಪಕ್ಷಕ್ಕೆ ಆದ ಹಿನ್ನಡೆ, ಸಚಿವ ಸಂಪುಟದ ಮೂರು ಸ್ಥಾನ ಭರ್ತಿ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಅಧಿವೇಶನ ಮುಗಿದ ಅನಂತರ ದಿಲ್ಲಿಗೆ ತೆರಳಿ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಬಳಿ ಚರ್ಚಿಸಿ ಸಂಪುಟದ 3 ಸ್ಥಾನ ಭರ್ತಿ ಮಾಡುವ ಬಗ್ಗೆ ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ. ಅಧಿವೇಶನ ಬಳಿಕ ಸಂಪುಟ ವಿಸ್ತರಣೆ ಸುದ್ದಿ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಲಾಬಿ ಶುರು ಮಾಡಿದ್ದಾರೆ. ಕುರುಬ, ಲಿಂಗಾಯಿತ ಹಾಗೂ ದಲಿತ ಸಮುದಾಯಕ್ಕೆ ಒಂದೊಂದು ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದ್ದು, ಎಚ್‌.ವೈ.ಮೇಟಿ ಮತ್ತೆ ಸಂಪುಟಕ್ಕೆ ಸೇರಲು ಪ್ರಯತ್ನಿಸುತ್ತಿದ್ದು, ಸಿ.ಎಸ್‌.ಶಿವಳ್ಳಿ ಹಾಗೂ ಎಚ್‌.ಎಂ.ರೇವಣ್ಣ ಅವರು ಒತ್ತಡ ಹೇರುತ್ತಿದ್ದಾರೆ. ಲಿಂಗಾಯಿತ ಸಮುದಾಯದ ಕೋಟಾದಡಿ ಷಡಕ್ಷರಿ ಪ್ರಯತ್ನಿಸುತ್ತಿದ್ದು, ದಲಿತ ಸಮುದಾಯದ ಕೋಟಾದಡಿ ಪಿ.ಎಂ.ನರೇಂದ್ರಸ್ವಾಮಿ, ಆರ್‌.ಬಿ. ತಿಮ್ಮಾಪುರ್‌ ಅವರ ಹೆಸರು ಕೇಳಿಬರುತ್ತಿದೆ.

ಇದೇ ಸಮಯದಲ್ಲಿ ಪರಮೇಶ್ವರ್‌ ರಾಜೀನಾಮೆ ನೀಡಿರುವುದರಿಂದ ತೆರವಾಗಲಿರುವ ಗೃಹ ಸಚಿವ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿ ಇದ್ದು, ಡಿ.ಕೆ.ಶಿವಕುಮಾರ್‌, ರೋಶನ್‌ ಬೇಗ್‌, ಎಚ್‌.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್‌ ಹೆಸರು ಕೇಳಿಬರುತ್ತಿದೆೆ. ಈ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಚರ್ಚಿಸಿದ್ದು, ಗೃಹ ಖಾತೆಯನ್ನು ಅಲ್ಪಸಂಖ್ಯಾಕ ಅಥವಾ ದಲಿತ ಸಮುದಾಯದವರಿಗೆ ನೀಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಚುನಾವಣೆ ವರ್ಷವಾಗಿರುವುದರಿಂದ ಅಲ್ಪಸಂಖ್ಯಾಕರನ್ನು ಗೃಹ ಸಚಿವರಾಗಿ ಮಾಡಿದರೆ ಬಿಜೆಪಿಯವರು ಅನಗತ್ಯ ಸಮಸ್ಯೆ ಉಂಟು ಮಾಡುವ ಸಾಧ್ಯತೆಯೂ ಇರುವುದರಿಂದ ಹೈಕಮಾಂಡ್‌ ಅಭಿಪ್ರಾಯ ಪಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.


Trending videos

Back to Top