CONNECT WITH US  

ಕೊನೆಗೂ ಸಾಲಮನ್ನಾ ಭಾಗ್ಯ, ಪಾಲಿಟಿಕ್ಸ್ ಶುರು!

ಬಿಜೆಪಿ ಆಡಳಿತದ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ರೈತರ ಸಾಲಮನ್ನಾ, ಕಾಂಗ್ರೆಸ್ ಆಡಳಿತದ ಪಂಜಾಬ್ ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯಾದ ನಂತರ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳು ತೀವ್ರವಾಗಿ ಆಗ್ರಹಿಸಿದ್ದವು. ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುಧವಾರ ವಿಧಾನಸಭೆ ಕಲಾಪದಲ್ಲಿ ರೈತರ ಅಲ್ಪಾವಧಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಸಹಕಾರಿ ಬ್ಯಾಂಕ್ ಗಳಲ್ಲಿನ 50 ಸಾವಿರ ರೂ.ವರೆಗಿನ ರೈತರ ಸಾಲ ಮನ್ನಾ. ಇದರಿಂದಾಗಿ ರಾಜ್ಯದ 22, 27, 506 ರೈತರಿಗೆ
ಅನುಕೂಲವಾಗಲಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 8,167 ಕೋಟಿ ರೂಪಾಯಿ ನಷ್ಟವಾಗಲಿದೆ. ಅಲ್ಪಾವಧಿ ಸಾಲಮನ್ನಾ ಘೋಷಣೆಯಿಂದ ಬರದಿಂದ ಕಂಗೆಟ್ಟಿದ್ದ ರಾಜ್ಯದ ರೈತರಿಗೆ ತುಸು ನಿರಾಳತೆ ತಂದಂತಾಗಿದೆ. ಮತ್ತೊಂದೆಡೆ ಬಿಜೆಪಿ ಮುಖಂಡರು ತಾವು ನಿರಂತರವಾಗಿ ಒತ್ತಾಯಿಸಿದ್ದರಿಂದ ರಾಜ್ಯ ಸರ್ಕಾರ ರೈತರ ಅಲ್ಪಾವಧಿ ಸಾಲ ಮನ್ನಾ ಮಾಡಿದೆ. ಆದರೆ ರಾಜ್ಯ ಸರ್ಕಾರ ಕನಿಷ್ಠ 1 ಲಕ್ಷ ರೂಪಾಯಿ ಸಾಲವನ್ನಾದರೂ ಮನ್ನಾ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಅದೇ ರೀತಿ ಸಾಲ ಮನ್ನಾ ಮಿತಿ ಹೆಚ್ಚಿಸಬೇಕು, ಬೇರೆ, ಬೇರೆ ರಾಜ್ಯಗಳಲ್ಲಿ ಸಾಲಮನ್ನಾದ ಮಿತಿ ಹೆಚ್ಚಿದೆ ಎಂಬುದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ. ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಎಂದು ಕುಮಾರಸ್ವಾಮಿ
ಅಖಾಡಕ್ಕಿಳಿದಿದ್ದರು. ರಾಜ್ಯ ಸರ್ಕಾರ ಸಾಲಮನ್ನಾ ಮಾಡಲೇಬೇಕು ಎಂದು ಬಿಜೆಪಿ ಹಠಕ್ಕೆ ಬಿದ್ದಿತ್ತು. ಇದೀಗ ಸಿದ್ದರಾಮಯ್ಯನವರು ರೈತರ ಅಲ್ಪಾವಧಿ ಸಾಲಮನ್ನಾ ಮಾಡುವ ಮೂಲಕ ಪ್ರತಿಪಕ್ಷಗಳ ಸಾಲಮನ್ನಾದ ಅಸ್ತ್ರವನ್ನು ಕಿತ್ತುಕೊಂಡಂತಾಗಿದೆ. ಅಷ್ಟೇ ಅಲ್ಲ ವಾಣಿಜ್ಯ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಮಾಡಿಸುವ ಹೊಣೆ ಬಿಜೆಪಿಯದ್ದಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ವಾದ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ನೂರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಇದೀಗ ಮುಂದಿನ ಚುನಾವಣೆ  ದೃಷ್ಟಿಕೋನದಲ್ಲಿಟ್ಟುಕೊಂಡು ರೈತರಸಾಲ
ಮನ್ನಾ ಮಾಡಲಾಗಿದೆ. ಹಾಗಾಗಿ ರೈತರ ಸಾಲಮನ್ನಾ ವಿಚಾರ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್  ಗೆ ರಾಜಕೀಯದ ಅಳಿವು, ಉಳಿವಿನ ಪ್ರಶ್ನೆಯಾಗಿದೆ.

Trending videos

Back to Top