CONNECT WITH US  

ಸಿಎಂ ವಿರುದ್ಧ ಪರಂ ಮುನಿಸು?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೂ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗೀಕರಿಸದೇ ಇಟ್ಟುಕೊಂಡಿ ರುವ ಬಗ್ಗೆ ಪರಮೇಶ್ವರ್‌ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ, ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ ಸೋಮವಾರ ಪರಮೇಶ್ವರ್‌ ಅವರ 
ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳುಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಹೈಕಮಾಂಡ್‌ ಸೂಚನೆ ಮೇರೆಗೆ ಜೂ.3 ರಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿದ್ದರು. ಆದರೆ, ಅಧಿವೇಶನ
ಇರುವುದರಿಂದ ವಿಧಾನ ಪರಿಷತ್ತಿನ ಸಭಾನಾಯಕರಾಗಿ ಕಾರ್ಯ ನಿರ್ವಹಿಸಲು ಸಮರ್ಥರು ಇಲ್ಲ ಎಂಬ ಕಾರಣಕ್ಕೆ
ಅವರಿಗೇ ಮುಂದುವರಿಯುವಂತೆ ಸಿಎಂ ಸೂಚಿಸಿದ್ದರು. ಈಗ ಅಧಿವೇಶನ ಮುಗಿದ ಮೇಲೆಯೂ ಮುಖ್ಯಮಂತ್ರಿ 
ರಾಜೀನಾಮೆ ಅಂಗೀಕರಿಸಿಲ್ಲ. ಗುರುವಾರವೇ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ
ಅಂಗೀಕಾರಕ್ಕೆ ಕಳುಹಿಸಿ ಕೊಡುತ್ತಾರೆ ಎಂಬ ಕಾರಣಕ್ಕೆ ಸಂಪುಟ ಸಭೆಗೂ ಪರಮೇಶ್ವರ್‌ ಹಾಜರಾಗಿರಲಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಪರಮೇಶ್ವರ್‌ ರಾಜೀನಾಮೆ ಸಲ್ಲಿಸಿದ ನಂತರ ಗೃಹ ಇಲಾಖೆಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಮುಖ್ಯಮಂತ್ರಿಯೇ ತೆಗೆದುಕೊಳ್ಳುತ್ತಿದ್ದಾರೆ. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಮೂಲಕ ಎಲ್ಲ ಕೆಲಸಗಳನ್ನು ಮಾಡಿಸುತ್ತಿದ್ದು, ತಾವು ಅಧಿಕಾರದಲ್ಲಿದ್ದರೂ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿಲ್ಲ. ಹೀಗಿದ್ದಾಗ ನಾಮ್‌ ಕಾವಾಸ್ತೆಗೆ ಯಾಕೆ ಗೃಹ ಸಚಿವರಾಗಿರಬೇಕು. ಶೀಘ್ರವೇ ರಾಜೀನಾಮೆ ಅಂಗೀಕರಿಸಿದರೆ ಸಾಕು ಎಂದು ಪರಮೇಶ್ವರ್‌ ಬಯಸಿದ್ದಾರೆ ಎನ್ನಲಾಗುತ್ತಿದೆ.

ನಾಡಿದ್ದು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ರವಾನೆ?
ಸಿಎಂ ಸಿದ್ದರಾಮಯ್ಯ ಅವರು ಅಧಿವೇಶನ ಮುಗಿದ ತಕ್ಷಣವೇ ಸಂಪುಟ ಪುನಾರಚನೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಎಐಸಿಸಿ ಉಪಾಧ್ಯಕ್ಷರು ವಿದೇಶ ಪ್ರವಾಸದಲ್ಲಿರುವುದರಿಂದ ಅವರು ಭಾರತಕ್ಕೆ ಮರಳಿ ಬಂದ ನಂತರ ಮುಖ್ಯಮಂತ್ರಿ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸಂಪುಟಕ್ಕೆ ಹೊಸಬರ ಆಗಮನದವರೆಗೂ ಪರಮೇಶ್ವರ್‌ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸದೇ ಇರಬಹುದು ಎನ್ನಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಕಚೇರಿ ಮೂಲಗಳ ಪ್ರಕಾರ ಸೋಮವಾರ ಪರಮೇಶ್ವರ್‌ ಅವರ ರಾಜೀನಾಮೆಯನ್ನು ರಾಜ್ಯಪಾಲರಿಗೆ ಕಳುಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

ಸಂಪುಟ ವಿಸ್ತರಣೆ ಮಾಹಿತಿ ಇಲ್ಲ
ಬೆಂಗಳೂರು: "ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಸೋಮವಾರ
ಸಂಪುಟ ವಿಸ್ತರಣೆ ಮಾಡುತ್ತಾರೆ ಎನ್ನುವ ಬಗ್ಗೆಯೂ ನನಗೆ ಯಾವುದೇ ಮಾಹಿತಿಯಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ
ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. "ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ, ಪಕ್ಷದ
ರಾಜ್ಯಾಧ್ಯಕ್ಷನಾಗಿ ಅವರೊಂದಿಗೆ ಮಾತುಕತೆ ನಡೆಸಿಲ್ಲ. ನಾನು ಗೃಹ ಖಾತೆಗೆ ರಾಜೀನಾಮೆ ನೀಡಿದ್ದೇನೆ. ನನ್ನ ರಾಜೀನಾಮೆ ಕೂಡ ಇನ್ನೂ ಅಂಗೀಕಾರವಾಗಿಲ್ಲ' ಎಂದು ತಿಳಿಸಿದರು. "ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಡೈರಿ ಪ್ರಕರಣದಲ್ಲಿ ಈಗಾಗಲೇ ಅವರು ಎಲ್ಲ ದಾಖಲೆಗಳನ್ನು ಐಟಿ ಇಲಾಖೆಗೆ ನೀಡಿದ್ದಾರೆ. ಐಟಿ ಇಲಾಖೆಯ ಅಧಿಕಾರಿಗಳ ಎದುರು ಗೋವಿಂದರಾಜು ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ. ಊಹಾಪೋಹಗಳಿಗೆ ನಾನು ಉತ್ತರಿಸುವುದಿಲ್ಲ' ಎಂದರು.


Trending videos

Back to Top