CONNECT WITH US  

ಬಳ್ಳಾರಿ ಬಿಕ್ಕಟ್ಟು ಇತ್ಯರ್ಥಕ್ಕೆ ಸಮನ್ವಯ ಸಮಿತಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಮತ್ತೆ ಸರಣಿ ಸಭೆಗಳನ್ನು ಆರಂಭಿಸಿದ್ದಾರೆ. ಕಳೆದ ಬಾರಿ ಗೊಂದಲ ಉಂಟಾಗಿದ್ದ ಬಳ್ಳಾರಿ, ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಹಾಸನ ಜಿಲ್ಲಾ ಮುಖಂಡರ ಜೊತೆ
ಪ್ರತ್ಯೇಕ ಸಭೆ ನಡೆಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಲಾಡ್‌ ಸಹೋದರರ ಗೊಂದಲ ಇನ್ನೂ ಮುಂದುವರಿದಿದೆ. ಜಿಲ್ಲೆಯ ಶಾಸಕರು ಮತ್ತು ಮುಖಂಡರು,
ಸಚಿವ ಸಂತೋಷ್‌ ಲಾಡ್‌ ಕಾರ್ಯವೈಖರಿಯ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಪಕ್ಷದ ಹಾಲಿ ಶಾಸಕರಿಗೆ ಗೌರವ ನೀಡದೇ, ವಿರೋಧಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಹೀಗಾದರೆ, ಜಿಲ್ಲೆಯಲ್ಲಿ
ಪಕ್ಷವನ್ನು ಬಲಪಡಿಸುವುದು ಹೇಗೆ ಎಂದು ಶಾಸಕರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಸಹೋದರನಿಗೂ ಅಸಮಾಧಾನ:
ಸಹೋದರನ ಮೇಲೆ ಅನಿಲ್‌ ಲಾಡ್‌ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸಂತೋಷ್‌ ಲಾಡ್‌ ತಮ್ಮನ್ನು 
ಯಾವುದಕ್ಕೂ ಪರಿಗಣಿಸುವುದಿಲ್ಲ. ಜಿಲ್ಲೆಯ ಯಾವುದೇ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮದೇ ದಾರಿ ತುಳಿಯುತ್ತಿದ್ದಾರೆ. ಪಕ್ಷದಲ್ಲಿ ಶಾಸಕರನ್ನು ಗೌರವದಿಂದ ಕಾಣಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. 

ಭಿನ್ನಾಭಿಪ್ರಾಯ ಬಿಡಿ: ಎಲ್ಲರ ಮಾತುಗಳನ್ನು ಆಲಿಸಿರುವ ವೇಣುಗೋಪಾಲ್‌ ಪ್ರಮುಖವಾಗಿ ಲಾಡ್‌ ಸಹೋದರರಿಗೆ
ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದಾರೆ. ಏನೇ ಅಸಮಾಧಾನ ಇದ್ದರೂ ಬಹಿರಂಗ ಹೇಳಿಕೆ ನೀಡದೇ, ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಅಲ್ಲದೇ, ಜಿಲ್ಲೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮನ್ವಯ ಸಮಿತಿ ರಚಿಸಲು ನಿರ್ಧರಿಸಿದ್ದಾರೆಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ಸಭೆ ನಂತರ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ, ನಾಯಕರ
ನಡುವಿನ ಅಸಮಾಧಾನ ದೂರ ಇಡುವಂತೆ ಸೂಚಿಸಿದ್ದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ
ಜಿಲ್ಲೆಯ ಎಲ್ಲ ಕ್ಷೇತ್ರಗಳನ್ನು ಗೆಲ್ಲಿಸುವ ವಾತಾವರಣ ಸೃಷ್ಟಿ ಮಾಡಬೇಕು. ಏನೇ ಭಿನ್ನಾಭಿಪ್ರಾಯವಿದ್ದರೂ ಜಿಲ್ಲಾ 
ಸಮನ್ವಯ ಸಮಿತಿ ಸಭೆಯಲ್ಲಿಯೇ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆಂದು ಹೇಳಿದರು.

ನಂತರ ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಹಾಸನ ಜಿಲ್ಲಾ ಮುಖಂಡರ ಜೊತೆ ಚರ್ಚೆ ನಡೆಸಿದ್ದು, ಚುನಾವಣೆ ದೃಷ್ಟಿಯಿಂದ ನಾಯಕರು ಭಿನ್ನಾಭಿಪ್ರಾಯ ಮರೆತು, ಪಕ್ಷ ಸಂಘಟನೆಯತ್ತ ಗಮನ ನೀಡುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಇಂದು ಎಲ್ಲ ಘಟಕಗಳ ಪ್ರತ್ಯೇಕ ಸಭೆ ಪಕ್ಷದ ಎಲ್ಲ ಘಟಕಗಳನ್ನು ಚುನಾವಣೆಗೆ ಈಗಿನಿಂದಲೇ
ಸಿದಟಛಿಗೊಳಿಸಲು ಕೆ.ಸಿ.ವೇಣುಗೋಪಾಲ್‌ ಕಸರತ್ತು ಆರಂಭಿಸಿದ್ದಾರೆ. ಮುಂಚೂಣಿ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ರಾಹುಲ್‌ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾಗ ದೂರು ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮುಂಚೂಣಿ ಘಟಕಗಳ ಅಧ್ಯಕ್ಷರ ಜೊತೆ ಬುಧವಾರ ವೇಣುಗೋಪಾಲ್‌ ಇಡೀ ದಿನ ಸರಣಿ ಸಭೆ ನಡೆಸಲಿದ್ದಾರೆ.

ಮಹಿಳಾ ಘಟಕ, ಯುವ ಘಟಕ, ಕಾರ್ಮಿಕ, ಎಸ್ಸಿ,ಎಸ್ಟಿ, ಕಿಸಾನ್‌ ಘಟಕಗಳ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ 
ನಡೆಸಿ, ಮುಂದಿನ ಚುನಾವಣೆಗೆ ಆಯಾ ಘಟಕಗಳಿಗೆ ಜವಾಬ್ದಾರಿ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರತಿ ಘಟಕದವರೂ ತಮ್ಮ ಘಟಕಗಳಿಗೆ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ
ಮಾಡಲು ನಿರ್ಧರಿಸಿವೆ. ಮಹಿಳಾ ಘಟಕದಿಂದ 2018ರ ಚುನಾವಣೆಗೆ ಮಹಿಳೆಯರಿಗೆ ಪ್ರತಿ ಜಿಲ್ಲೆಗೂ ಒಬ್ಬ ಮಹಿಳೆಗೆ
ಟಿಕೆಟ್‌ ನೀಡಬೇಕು. ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿಗೆ ಟಿಕೆಟ್‌
ನೀಡಬೇಕೆಂಬ ಬೇಡಿಕೆ ಮುಂದಿಡಲು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ತೀರ್ಮಾನಿಸಿದ್ದಾರೆ.

ಚುನಾವಣೆಗೆ ಸಿದ್ದತೆ ನಡೆದಿದೆ: ಪರಮೇಶ್ವರ್‌ 
ಪಕ್ಷವನ್ನು 2018 ರ ಚುನಾವಣೆಗೆ ಅಣಿಗೊಳಿಸಲು ಈಗಿನಿಂದಲೇ ಸಿದ್ದತೆ ನಡೆದಿದೆ. ಕಳೆದ ಬಾರಿ ಜಿಲ್ಲಾ ಮುಖಂಡರ ಸಭೆ ನಡೆಸಿದ ಸಂದರ್ಭದಲ್ಲಿ ನಾಲ್ಕು ಜಿಲ್ಲೆಗಳ ಸಭೆ ಮಾಡುವುದು ಬಾಕಿ ಉಳಿದಿತ್ತು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ನೇತೃತ್ವದಲ್ಲಿ ಬಳ್ಳಾರಿ, ಚಿಕ್ಕಬಳ್ಳಾಪುರ, ವಿಜಯಪುರ ಹಾಗೂ ಹಾಸನ ಜಿಲ್ಲಾ ಮುಖಂಡರ ಸಭೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಇಂದೂ ಸಭೆ: ಬುಧವಾರ ಮಹಿಳಾ ಘಟಕ, ಒಬಿಸಿ, ಎಸ್ಸಿ, ಎಸ್ಟಿ ಸೇರಿದಂತೆ ಪಕ್ಷದ 16 ಘಟಕಗಳ ಮುಖಂಡರ ಜೊತೆ
ಸಭೆ ನಡೆಸಲಾಗುವುದು. ಗುರುವಾರ ಬಾಗಲಕೋಟೆಯ ಕೂಡಲಸಂಗಮದಲ್ಲಿ ಆಯೋಜಿಸಿರುವ ಬೃಹತ್‌ ಸಮಾವೇಶದಲ್ಲಿ ಎಸ್‌.ಆರ್‌.ಪಾಟೀಲ್‌ ಕಾರ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವರು. ಜೂನ್‌ 30ರಂದು ಬೆಳಗಾವಿಯಲ್ಲಿ, ಜುಲೈ 3ರಂದು ಮಂಗಳೂರು, ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಸಮಾವೇಶ ನಡೆಸಲಾಗುವುದು. ಜುಲೈ 11ರಂದು ಕಲಬುರಗಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Trending videos

Back to Top