CONNECT WITH US  

ರಾಜ್ಯದ 2 ಸಾವಿರ ಹಳ್ಳಿಗಳಲ್ಲಿ ಪದವೀಧರರೇ ಇಲ್ಲ!

ಬೆಂಗಳೂರು: ಉನ್ನತ ಶಿಕ್ಷಣ ಕ್ಷೇತ್ರದ "ಹಬ್‌' ಎಂದು ಕರೆಸಿಕೊಳ್ಳುತ್ತಿರುವ ರಾಜ್ಯದ ಎರಡು ಸಾವಿರಕ್ಕೂ ಅಧಿಕ ಹಳ್ಳಿಗಳು ಇದುವರೆಗೂ ಒಬ್ಬರೇ ಒಬ್ಬ ಪದವೀಧರರನ್ನು ಕಂಡಿಲ್ಲ!

ಹೌದು, ಅಚ್ಚರಿಯಾದರೂ ಇದು ಸತ್ಯ ಎನ್ನುತ್ತಿದೆ ರಾಜ್ಯ ಸರ್ಕಾರದ ವರದಿ. ಸ್ವಾತಂತ್ರ್ಯ ನಂತರ ದೇಶದ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಕರ್ನಾಟಕದ ಪಾಲು ಹಿರಿದಾಗಿದ್ದು,  ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದಿ, ದೇಶ-ವಿದೇಶದಲ್ಲಿ ಖ್ಯಾತಿ ಪಡೆದವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ, "ದೀಪದ ಬುಡ ಕತ್ತಲು' ಎಂಬಂತೆ ರಾಜ್ಯದ ಎರಡು ಸಾವಿರಕ್ಕೂ ಅಧಿಕ ಹಳ್ಳಿಗಳು ಈವರೆಗೂ ಪದವೀಧರರನ್ನೇ ಕಂಡಿಲ್ಲ ಎಂಬ ಆಘಾತಕಾರಿ ಮಾಹಿತಿ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಪ್ರತಿ ಹಳ್ಳಿಯಲ್ಲಿ ಕನಿಷ್ಠ ಒಬ್ಬರನ್ನಾದರೂ ಪದವೀಧರರನ್ನಾಗಿ ಮಾಡಬೇಕು ಎಂದು ಪಣತೊಟ್ಟಿದೆ. ಅದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯು ಎಲ್ಲಾ 30 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ, ಪದವೀಧರರನ್ನು ಹೊಂದಿರುವ ಮತ್ತು ಹೊಂದಿಲ್ಲದ ಹಳ್ಳಿಗಳನ್ನು ಪಟ್ಟಿ ಮಾಡಿದೆ. ಆ ಪಟ್ಟಿಯಲ್ಲಿ 2000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪದವೀಧರರೇ ಇಲ್ಲ ಎಂದು ಹೇಳಲಾಗಿದೆ. ವಿಪರ್ಯಾಸದ ಸಂಗತಿ ಏನೆಂದರೆ, ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಅನೇಕ ಹಳ್ಳಿಗಳಲ್ಲೂ ಪದವೀಧರರಿಲ್ಲ. ಅಂದರೆ, ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆ ನಗರ ಪ್ರದೇಶವನ್ನು ಬಿಟ್ಟು, ಗ್ರಾಮೀಣ ಪ್ರದೇಶಕ್ಕೆ ಸಮರ್ಪಕವಾಗಿ ತಲುಪಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.

ಪದವೀಧರರಿಲ್ಲದ ಹಳ್ಳಿಗಳಿವು...:
ಕೋಲಾರ, ಚಿಕ್ಕಮಗಳೂರು, ತುಮಕೂರು, ಹಾಸನ, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ, ಬೆಳಗಾವಿ, ಚಾಮರಾಜನಗರ ಮೊದಲಾದ ಜಿಲ್ಲೆಗಳ 100ರಿಂದ 150ಕ್ಕೂ ಅಧಿಕ ಹಳ್ಳಿಗಳಲ್ಲಿ ಸರ್ಕಾರದ ಸಮೀಕ್ಷೆ ಪ್ರಕಾರ ಪದವೀಧರರೇ ಇಲ್ಲ. ಹಾಗೆಯೇ, ಬೀದರ್‌, ಬಳ್ಳಾರಿ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಹಾವೇರಿ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಉತ್ತರ ಕನ್ನಡ, ಯಾದಗಿರಿ ಮೊದಲಾದ ಜಿಲ್ಲೆಗಳಲ್ಲಿ 50ರಿಂದ 100 ಹಾಗೂ ಕೊಡಗು, ದಾವಣಗೆರೆ, ಬಾಗಲಕೋಟೆ, ಕಲಬುರಗಿ ಮೊದಲಾದ ಜಿಲ್ಲೆಗಳ 25ರಿಂದ50 ಹಳ್ಳಿಗಳಲ್ಲಿ ಪದವೀಧರು ಇಲ್ಲ ಎನ್ನುವುದು ಇದೇ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.

ಉನ್ನತ ಶಿಕ್ಷಣಕ್ಕೆ ಕೋಟ್ಯಂತರ ರೂ:
ಪ್ರತಿವರ್ಷ ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಮೀಸಲಿಡಲಾಗುತ್ತದೆ. 2013-14ರಲ್ಲಿ 3,243 ಕೋಟಿ, 2014-15ರಲ್ಲಿ 3,380 ಕೋಟಿ, 2015-16ರಲ್ಲಿ 3,896 ಕೋಟಿ, 2016-17ರಲ್ಲಿ 4,651 ಕೋಟಿ ಹಾಗೂ 2017-18ರಲ್ಲಿ 4,401 ಕೋಟಿ ಸೇರಿದಂತೆ ಕಳೆದ ಐದು ಬಜೆಟ್‌ಗಳಲ್ಲಿ ಉನ್ನತ ಶಿಕ್ಷಣಕ್ಕೆಂದೇ 19,571 ಕೋಟಿ ರೂ. ಒದಗಿಸಲಾಗಿದೆ. ಅದೇ ರೀತಿ ಸಾಕ್ಷರತೆಯಲ್ಲೂ ದೇಶದ ಸರಾಸರಿ ಅಂಕಿ ಅಂಶವನ್ನೇ ಮೀರಿಸುವಷ್ಟು ಸಾಧನೆ ಕರ್ನಾಟಕ ಮಾಡಿದೆ ದೇಶದ ಸಾಕ್ಷರತೆ ಪ್ರಮಾಣ ಶೇ.74.04ರಷ್ಟಿದ್ದರೆ, ರಾಜ್ಯದ ಪ್ರಮಾಣದ ಶೇ.75.60ರಷ್ಟಿದೆ. ಶೇ.82.85ರಷ್ಟು ಪುರುಷರು, ಶೇ.68.13ರಷ್ಟು ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ.68.86 ಮತ್ತು ನಗರದಲ್ಲಿ ಶೇ.86.21ರಷ್ಟು ಸಾಕ್ಷರತೆ ಇದ್ದರೂ, ಪದವೀಧರರಿಲ್ಲದ ಹಳ್ಳಿಗಳ ಸಂಖ್ಯೆಯೂ ಹೆಚ್ಚಿದೆ.

ಪದವೀಧರರನ್ನಾಗಿಸಲು ಕ್ರಮ
ಪದವೀಧರರೇ ಇಲ್ಲದ 2000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕನಿಷ್ಠ ಒಬ್ಬನನ್ನಾದರೂ ಪದವೀಧರರನ್ನಾಗಿ ಮಾಡಲು ರಾಜ್ಯ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ 30 ಜಿಲ್ಲೆಯ ಲೀಡ್‌ ಕಾಲೇಜುಗಳ ಪ್ರಾಂಶುಪಾಲರನ್ನು ಮುಖ್ಯ ನೋಡಲ್‌ ಅಧಿಕಾರಿಯಾಗಿ ನೇಮಿಸಿದೆ. ಪ್ರತಿ ತಾಲೂಕಿನ ಒಬ್ಬ ಪ್ರಾಂಶುಪಾಲ ತಾಲೂಕು ಮಟ್ಟದ ನೋಡಲ್‌ ಅಧಿಕಾರಿಯಾಗಿರುತ್ತಾರೆ. ಪದವೀಧರರು ಇಲ್ಲದ 200 ಹಾಗೂ ಇನ್ನೂರಕ್ಕಿಂತ ಅಧಿಕ ಜನಸಂಖ್ಯೆಯ ಹಳ್ಳಿಗೆ ಭೇಟಿ ನೀಡಲು ಪ್ರತಿ ಹಳ್ಳಿಗೆ ಒಬ್ಬರಂತೆ ಉಪನ್ಯಾಸಕರನ್ನು ನೇಮಿಸಲು ಸೂಚಿಸಿದೆ.

ಉಪನ್ಯಾಸಕರ ಕರ್ತವ್ಯ: ಸಂಬಂಧಪಟ್ಟ ಉಪನ್ಯಾಸಕರು ತಮಗೆ ನಿಗದಿಪಡಿಸಿದ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಉನ್ನತ ಶಿಕ್ಷಣ ಸ್ಥಿತಿಗತಿ ಪರಿಶೀಲಿಸಿ, ಪಿಯುಸಿ ಪಾಸಾದವರ ಸಂಖ್ಯೆ, ಅದರಲ್ಲಿ ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದವರನ್ನು ಪತ್ತೆಹಚ್ಚಬೇಕು. ಬಳಿಕ ಅಂಥವರಿಗೆ ಪದವಿ ಶಿಕ್ಷಣ ಮುಂದುವರಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು. ಅಲ್ಲದೆ, ಉಪನ್ಯಾಸಕರು ತಮ್ಮ ಕಾರ್ಯದ ವರದಿಯನ್ನು ಕಡ್ಡಾಯವಾಗಿ ತಾಲೂಕು ನೋಡಲ್‌ ಅಧಿಕಾರಿಗಳಿಗೆ ಲಿಖೀತ ರೂಪದಲ್ಲಿ ನೀಡಬೇಕು.

ವಿಡಿಯೋ ಕಾನ್ಪರೆನ್ಸ್‌:
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಪದವೀಧರರಿಲ್ಲದ ಹಳ್ಳಿಗಳ ಪಟ್ಟಿ  ಮಾಡಿದ್ದೇವೆ. ಆ ಎಲ್ಲಾ ಹಳ್ಳಿಗಳಲ್ಲಿ ಒಬ್ಬರನ್ನಾದರೂ ಪದವೀಧರರನ್ನಾಗಿ ಮಾಡುವ ಸಂಬಂಧ ಚರ್ಚಿಸಲು ಜು. 29ರಂದು ಎಲ್ಲಾ ಜಿಲ್ಲೆಗಳ ಪ್ರಾಂಶುಪಾಲರೊಂದಿಗೆ ವಿಡಿಯೋ ಕಾನ್ಪರೆನ್ಸ್‌  ಏರ್ಪಡಿಸಲಾಗಿದೆ. ಈ ಸಂಬಂಧ ಕೈಗೊಳ್ಳಬೇಕಾದ ಕಾರ್ಯದ ಬಗ್ಗೆಯೂ ಸೂಚನೆ ನೀಡಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು "ಉದಯವಾಣಿ'ಗೆ ಮಾಹಿತಿ ನೀಡಿದ್ದಾರೆ.

- ರಾಜು ಖಾರ್ವಿ ಕೊಡೇರಿ

Trending videos

Back to Top