CONNECT WITH US  

ಭಟ್‌ಗೆ ಶಾಕ್‌: ಶ್ರೀರಾಮ ವಿದ್ಯಾ ಸಂಸ್ಥೆಯ ದತ್ತಿ ನಿಧಿಗೆ ಬ್ರೇಕ್‌!

ಬೆಂಗಳೂರು : ಮಹತ್ವದ ವಿದ್ಯಮಾನವೊಂದರಲ್ಲಿ  ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ನೀ‌ಡಲಾಗುತ್ತಿದ್ದ ದತ್ತಿ ನಿಧಿಯನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರಿಗೆ ಶಾಕ್‌ ನೀಡಿದೆ. 

ಮುಜರಾಯಿ ದೇಗುಲದಿಂದ ಶಾಲೆಗಳಿಗೆ ಅನುದಾನ ನೀಡುವಂತಿಲ್ಲ.ದೇವಾಲಯದ ಆಡಳಿತ ಮಂಡಳಿ  ಕಾನೂನು ಬಾಹಿರವಾಗಿ ದತ್ತಿ ನೀಡಿದೆ ಎಂದು ಸರ್ಕಾರ ದತ್ತಿಯನ್ನು ವಾಪಾಸ್‌ ಪಡೆದಿದೆ. 

ಅನುದಾನ ವಾಪಾಸ್‌ 
ಕಳೆದ 10 ವರ್ಷಗಳಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಗೆ  2.32 ಕೋಟಿ ಅನುದಾನ ವನ್ನು ಕೊಲ್ಲೂರು ಮೂಕಾಂಬಿಕಾ ಆಡಳಿತ ಮಂಡಳಿ ನೀಡಿತ್ತು. ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣ ಪ್ರಸಾದ್‌ ಅಡ್ಯಂತಾಯ ಅವರು ಈ ಅನುದಾನವನ್ನು ಮಂಜೂರು ಮಾಡಿದ್ದರು ಎಂದು ಹೇಳಲಾಗಿದೆ. 10 ವರ್ಷಗಳಲ್ಲಿ ನೀಡಿರುವ ಅನುದಾನವನ್ನೂ ವಾಪಸ್‌ ಪಡೆಯಲು ಸರ್ಕಾರ ಚಿಂತನೆ ನಡೆಸಿದ್ದು, ಇಡೀ ಪ್ರಕರಣವನ್ನು ತನಿಖೆ ನಡೆಸಲು ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. 

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಭಾಕರ್‌ ಭಟ್‌ 'ದೇಗುಲಗಳು ಸಹಾಯ ಮಾಡಲೆಂದೇ ಇರುವುದು. ನಮ್ಮದು ಬಡವರು, ದುರ್ಬಲರು ಕಲಿಯುವ ಶಾಲೆ. ಸರ್ಕಾರ ಬಂದು ನಾಲ್ಕು ವರ್ಷಗಳ ಬಳಿಕ ದತ್ತಿ ನೀಡಿರುವುದು ಗಮನಕ್ಕೆ ಬಂತೆ?. ಕರಾವಳಿಯಲ್ಲಿ ಆದ ಬೆಳವಣಿಗೆಗಳ ಹಿನ್ನಲೆಯಲ್ಲಿ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕ್ರಮ ಕೈಗೊಂಡಿದೆ' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ಪ್ರಭಾಕರ್‌ ಭಟ್‌ ಮುಂದಾಳತ್ವದಲ್ಲಿ ನಡೆಸಲಾಗುತ್ತಿರುವ ಶ್ರೀರಾಮ ವಿದ್ಯಾ ಸಂಸ್ಥೆಗೆ ದೇವಾಲಯದಿಂದ ದತ್ತಿ ನೀಡಿರುವ ಕುರಿತಾಗಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ದೂರು ನೀಡಿದ್ದರು ಎನ್ನಲಾಗಿದೆ. 

ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ. 

Trending videos

Back to Top