CONNECT WITH US  

ಜಲ ವಿವಾದ:ಅಮಿತ್‌ ಶಾ ಭೇಟಿ ವೇಳೆ ಸಭೆ ಕರೆದಿದ್ದಕ್ಕೆ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಮಹದಾಯಿ ಮತ್ತು ಕಾವೇರಿ ನೀರಿನ ಹಂಚಿಕೆ ಕುರಿತ ವಿವಾದ ಬಗೆಹರಿಸಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು  ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉಭಯ ಸದನಗಳ ನಾಯಕರು, ಪ್ರತಿಪಕ್ಷ ಮುಖಂಡರು ಹಾಗೂ ಆ ಭಾಗದ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗ ಣದಲ್ಲಿ ಬೆಳಗ್ಗೆ 10 ಗಂಟೆಗೆ ಕಳಸಾ ಬಂಡೂರಿ ಯೋಜನೆ, ಮಹದಾಯಿ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ ಹಂಚಿಕೆ ಕುರಿತಂತೆ ಹಾಗೂ ಮಧ್ಯಾಹ್ನ 12 ಗಂಟೆಗೆ ಕಾವೇರಿ ನೀರಿನ ವಿಚಾರ ಕುರಿತಂತೆ ಈ ಸಭೆ ನಡೆಯಲಿದೆ. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯ ಪ್ರವಾಸದಲ್ಲಿ ಇರುವ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಭೆ ಕರೆದಿರುವುದು ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಅಸಮಾಧಾನ ಉಂಟು ಮಾಡಿದೆ. ಪಕ್ಷದ ಬಗ್ಗೆ ಜನರಲ್ಲಿ ತಪ್ಪು ಭಾವನೆ ಮೂಡಿಸಲು ಉದ್ದೇಶಪೂರ್ವಕವಾಗಿಯೇ ಮುಖ್ಯಮಂತ್ರಿಗಳು ಈ ಸಭೆ ಕರೆದಿದ್ದಾರೆ ಎಂಬ ಆರೋಪ ಬಿಜೆಪಿ ಕಡೆಯಿಂದ ಕೇಳಿಬಂದಿದೆ.

ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಗೋವಾ ವಿರೋಧಿಸುತ್ತಿದೆ. ನ್ಯಾಯಾಧಿಕರಣದ ಮೂಲಕವೇ ವಿವಾದ ಬಗೆಹರಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದಿದೆ. ಇನ್ನೊಂದೆಡೆ ಮಹದಾಯಿ ನೀರಿಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ತೀವ್ರಗೊಳ್ಳುವ ಲಕ್ಷಣ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮಹದಾಯಿ ನದಿ  ಯಿಂದ ಯೋಜನೆಗೆ ನೀರು ತರಿಸಿಕೊಳ್ಳಲು ಏನೇನು ಮಾಡಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ರಾಜ್ಯದಲ್ಲಿ ಈ ಬಾರಿ ಶೇ.50 ಕ್ಕಿಂತ ಕಡಿಮೆ ಮಳೆಯಾಗಿ ಬರಗಾಲದ ಛಾಯೆ ಆವರಿಸಿದೆ. ಕೆಆರ್‌ಎಸ್‌, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹವಿದೆ.

ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ನೀರಿಲ್ಲ. ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕೆರೆಕಟ್ಟೆಗಳಿಗೆ ಬಿಡಲಾಗುತ್ತಿದ್ದು, ಇದಕ್ಕೂ ತಮಿಳುನಾಡು ತಗಾದೆ ತೆಗೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಕೊರತೆ ಇದ್ದರೂ ತಮಿಳುನಾಡು ಬೆಳೆಗಳಿಗೆ ನೀರು ಕೇಳುತ್ತಿದೆ. ಈ ಸಂದರ್ಭದಲ್ಲಿ ಕಾನೂನು ಹೋರಾಟ ಹೇಗೆ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಪ್ರವಾಸದ ವೇಳೆಯೇ ಈ ಸಭೆ ಕರೆದಿರುವುದು ಮುಖ್ಯಮಂತ್ರಿಗಳ ರಾಜಕೀಯ ನಡವಳಿಕೆಯನ್ನು ತೋರಿಸುತ್ತದೆ. ನಮಗೆ ರಾಜ್ಯದ ಜನರ ಹಿತ ಮುಖ್ಯ. ಸರ್ಕಾರ ಕರೆದಿರುವ ಎರಡೂ ಸಭೆಗಳಿಗೆ ಹಾಜರಾಗಿ ಬಳಿಕ ಮತ್ತೆ ಅಮಿತ್‌ ಶಾ ಅವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇವೆ.
ಜಗದೀಶ್‌ ಶೆಟ್ಟರ್‌, ವಿಧಾನಸಭೆ ವಿಪಕ್ಷ ನಾಯಕ

Trending videos

Back to Top