CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗೌರಿ ಲಂಕೇಶ್‌ ಕುಟುಂಬದ ಹೇಳಿಕೆ ಪಡೆದ ಎಸ್‌ಐಟಿ

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ
ಇಂದ್ರಜಿತ್‌ ಮತ್ತು ಸಹೋದರಿ ಕವಿತಾ, ತಾಯಿ ಇಂದಿರಾ ಲಂಕೇಶ್‌ ಅವರಿಂದ ಎಸ್‌ಐಟಿ ತಂಡ ಬುಧವಾರ ಹೇಳಿಕೆ ದಾಖಲಿಸಿಕೊಂಡಿದೆ.

ಬುಧವಾರ ಮಧ್ಯಾಹ್ನ 3 ಗಂಟೆಗೆ ಕೋರ ಮಂಗಲದಲ್ಲಿರುವ ಇಂದ್ರಜಿತ್‌ ಮನೆಗೆ ಹೋಗಿದ್ದ ಎಸ್‌ಐಟಿ ತಂಡವನ್ನು ಕಂಡ ಇಂದ್ರಜಿತ್‌, "ಇಲ್ಲಿಗೇಕೆ ಬಂದಿದ್ದೀರಿ' ಎಂದು ಪ್ರಶ್ನಿಸಿದರು.ಬಳಿಕ ತನಿಖಾಧಿಕಾರಿಗಳು ವಿಚಾರಣೆಗೆ ಸಹಕರಿಸುವಂತೆ ಮನವಿ ಮಾಡಿದಾಗ ಒಪ್ಪಿದರು. ಬಳಿಕ ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ದ ಅಧಿಕಾರಿಗಳುಸುದೀರ್ಘ‌ ಐದಾರು ತಾಸು ಹೇಳಿಕೆ ಪಡೆದಿದ್ದಾರೆಎಂದು ತಿಳಿದು ಬಂದಿದೆ.

ಆರಂಭದಲ್ಲಿ ಎಸ್‌ಐಟಿ ವಿಚಾರಣೆಗೆ ಇಂದ್ರಜಿತ್‌ ಲಂಕೇಶ್‌ ಸಹಕಾರ ನೀಡಲಿಲ್ಲ. ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದರು. ಬಳಿಕ ತೀವ್ರ ವಿಚಾರಣಣೆಗೊಳಪಡಿಸಿದ್ದು, 2005ರಲ್ಲಿ ನಿಮ್ಮ ಮತ್ತು ಗೌರಿ ನಡುವೆ ಗಲಾಟೆ ನಡೆದದ್ದು ಯಾವ ಕಾರಣಕ್ಕೆ? ಗೌರಿ ಅವರ ಹಣೆಗೆ ಪಿಸ್ತೂಲ್‌ ಇಟ್ಟು ಬೆದರಿಕೆ ಹಾಕಲು ಕಾರಣವೇನು? ಆ ಪಿಸ್ತೂಲ್‌ ಎಲ್ಲಿಂದ ಬಂತು. ಪರವಾನಿಗೆ ಇದೆಯೇ? ಪಿಸ್ತೂಲ್‌ನಿಂದ ಹೆದರಿಸುವಂತಹ ಹೇಳಿಕೆಯನ್ನು ಗೌರಿ ಏನು ಹೇಳಿದ್ದರು ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಇಂದ್ರಜಿತ್‌, ಇದು ಹಳೇ ವಿಚಾರ ಈಗ್ಯಾಕೆ ಪ್ರಶ್ನಿಸುತ್ತಿದ್ದೀರಿ ಎಂದು ಭಾವುಕರಾದ ಅವರು, ಈ ಹಿಂದೆ ತಮ್ಮ ತಂದೆಯವರ ಒಡೆತನದ ಲಂಕೇಶ್‌ ಪತ್ರಿಕೆ ಒಡೆತನದ ವಿಚಾರವಾಗಿ ಗಲಾಟೆಯಾಗಿತ್ತು. ಆ ವೇಳೆ ಆವೇಶಗೊಂಡು ಪರವಾನಿಗೆ ಪಡೆದಿದ್ದ ಪಿಸ್ತೂಲ್‌ನಿಂದಲೇ ಹಲ್ಲೆಗೆ ಮುಂದಾಗಿದ್ದೆ. ಆದರೆ, ಆ ಪಿಸ್ತೂಲ್‌ಗೆ ಪರವಾನಿಗೆ ಇದೆ. ಆದರೀಗ ಅದು ಕಳೆದು ಹೋಗಿದೆ. ಅಲ್ಲದೇ ಗಲಾಟೆಯಾದ ಕೆಲ ತಿಂಗಳಲ್ಲೇ ಹಿರಿಯರ ಸಮ್ಮುಖದಲ್ಲಿ ಎಲ್ಲವನ್ನು ಬಗೆಹರಿಸಿಕೊಂಡಿದ್ದೇವೆ. ನಂತರ ಇಬ್ಬರ ನಡುವೆ ಉತ್ತಮ ಸಂಬಂಧ ವೃದ್ಧಿಯಾಗಿತ್ತು. ಯಾವುದೇ ವೈಷಮ್ಯ ಇರಲಿಲ್ಲ ಎಂದು ಉತ್ತರಿಸಿದ್ದಾರೆ. ಈ ಮಧ್ಯೆ ಎಸ್‌ಐಟಿ ಕೇಳಿದ ಇತರೆ ಪ್ರಶ್ನೆಗಳಿಗೆ ಇಂದ್ರಜಿತ್‌ ಸೂಕ್ತ ರೀತಿಯಲ್ಲಿ ಉತ್ತರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿ ಪ್ರಕರಣದಲ್ಲೂ ವಿಚಾರಣೆ ನಡೆಸುವಂತೆ ಈ ಪ್ರಕರಣದಲ್ಲೂ ಕೊಲೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗಿದೆ. ಅದರಂತೆ ಇಂದ್ರಜಿತ್‌ಗೂ ನೋಟಿಸ್‌ ಕೊಟ್ಟು ವಿಚಾರಣೆಗೆ ಸಹಕಾರ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ವಿಚಾರಣೆ ನಡೆಸಿದ್ದೇವೆ. ಇಂದ್ರಜಿತ್‌ ಮೇಲಿನ ಅನುಮಾನದಿಂದಲ್ಲ.  ಹೇಳಿಕೆ ಸಂದರ್ಭದಲ್ಲಿ ಯಾವುದಾದರು ಸುಳಿವು ಸಿಗಬಹುದೆಂಬ ಭರವಸೆಯಿಂದ ವಿಚಾರಣಾ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಇಂದ್ರಜಿತ್‌ ಅವರ ಉತ್ತರಗಳು ಸಮಂಜಸವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮತ್ತೂಂದೆಡೆ ಗೌರಿ ಸಹೋದರಿ ಕವಿತಾ ಲಂಕೇಶ್‌ ಅವರನ್ನು ಕೂಡ ವಿಚಾರಣೆ ನಡೆಸಿದ್ದು, ಎಲ್ಲ ಪ್ರಶ್ನೆಗಳಿಗೆ ಸಮಪರ್ಕ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಪತ್ರಕರ್ತರು, ಸಾಹಿತಿ ಪಿ.ಲಂಕೇಶ್‌ ನಿಧನರಾದ ಬಳಿಕ 2005ರಲ್ಲಿ "ಲಂಕೇಶ್‌' ವಾರ ಪತ್ರಿಕೆಯ ವಾರಸುದಾರ ಯಾರಾಗಬೇಕೆಂಬ ಬಗ್ಗೆ ಇಂದ್ರಜಿತ್‌ ಮತ್ತು ಗೌರಿ ನಡುವೆ ಜಗಳವಾಗಿತ್ತು. ಆಕ್ರೋಶಗೊಂಡಿದ್ದ ಇಂದ್ರಜಿತ್‌ ಗೌರಿ ಹಣೆಗೆ (ಪಿನ್‌ಪಾಯಿಂಟ್‌) ತಮ್ಮ ಬಳಿಯಿದ್ದ ಪಿಸ್ತೂಲ್‌ ಇಟ್ಟು ಪ್ರಾಣ ಬೆದರಿಕೆ ಹಾಕಿದ್ದರು. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಗೌರಿ ದೂರು ದಾಖಲಿಸಿದ್ದರು. ಇದಾದ ಬಳಿಕ ಇಂದ್ರಜಿತ್‌, "ಲಂಕೇಶ್‌' ಪತ್ರಿಕೆಯನ್ನು ಮುಂದುವರಿಸಿದ್ದು, ಇದಕ್ಕೆ ಪರ್ಯಾಯವಾಗಿ ಗೌರಿ, ತಮ್ಮ ಸಾರಥ್ಯದಲ್ಲಿ ಮತ್ತೂಂದು "ಲಂಕೇಶ್‌' ವಾರ ಪತ್ರಿಕೆ ಆರಂಭಿಸಿದರು.

ಕೈದಿಗಳ ಬೆರಳಚ್ಚು, ಮಾಹಿತಿ ಸಂಗ್ರಹ
ತನಿಖೆಗೆ ಸಂಬಂಧಿಸಿದಂತೆ ಬುಧವಾರ ಎಸ್‌ಐಟಿ ತಂಡ ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹ, ಬಳ್ಳಾರಿ, ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ಜೈಲುಗಳಿಗೆ ಭೇಟಿ ನೀಡಿದೆ. ಈ ವೇಳೆ ಹೈಪ್ರೋಫೈಲ್‌ ಪ್ರಕರಣಗಳಲ್ಲಿ ಜೈಲು ಸೇರಿರುವ ಅಪರಾಧಿಗಳ ಬೆರಳಚ್ಚು, ಭಾವಚಿತ್ರ ಹಾಗೂ  ಕೃತ್ಯದ ಮಾದರಿಯನ್ನು ಸಂಗ್ರಹಿಸುತ್ತಿದ್ದಾರೆ. ಜತೆಗೆ ಪಿಸ್ತೂಲ್‌ ಮಾರಾಟ ಪ್ರಕರಣ, ಪಿಸ್ತೂಲ್‌ನಿಂದ ಕೊಲೆ, ಸುಪಾರಿ ಹಂತಕರ ಬಗ್ಗೆಯೂ ಆರೋಪಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಗೌರಿ ಲಂಕೇಶ್‌ ಹತ್ಯೆ ಕುರಿತು ಎಸ್‌ಐಟಿಯಿಂದ ತನಿಖೆ ನಡೆಯುತ್ತಿದೆ. ಆದರೆ, ಇದುವರೆಗೂ ವಿಧಿವಿಜ್ಞಾನ ಪರೀûಾ ಕೇಂದ್ರದಿಂದ ಯಾವುದೇ ವರದಿ ತನಿಖಾ ತಂಡಕ್ಕೆ ಬಂದಿಲ್ಲ. ಇದೊಂದು ಸೂಕ್ಷ್ಮ ಪ್ರಕರಣವಾದ್ದರಿಂದ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಎಫ್ಎಸ್‌ಎಲ್‌ಗೆ ಮನವಿ ಮಾಡಿದ್ದೇವೆ. ಈಗಾಗಲೇ ಹತ್ತಾರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ತಂಡದಲ್ಲಿರುವ ಎಲ್ಲ ಅಧಿಕಾರಿಗಳಿಗೆ ಯಾರು ಯಾರು ಯಾವ ಕೆಲಸ ಮಾಡಬೇಕೆಂದು ಸೂಚಿಸಿದ್ದೇನೆ. ಅದರಂತೆ ತನಿಖೆ ನಡೆಯುತ್ತಿದೆ.
-ಬಿ.ಕೆ.ಸಿಂಗ್‌, ಎಸ್‌ಐಟಿ ಮುಖ್ಯಸ್ಥ

Back to Top