CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಲಿಂಗಾಯುತ ಸಭೆ ಮೂಡದ ಒಮ್ಮತ

ತಜ್ಞರ ಸಮಿತಿ ರಚನೆಗೆ ಮುಖಂಡರ ನಿರ್ಧಾರ 

ಸಭೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು.

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕತೆಯ ಗೊಂದಲ ನಿವಾರಣೆಗೆ ನಡೆದ ಸಮುದಾಯದ ಮುಖಂಡರ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ವಿಫ‌ಲವಾಗಿದ್ದು, ವಾರದಲ್ಲಿ ಮತ್ತೂಂದು ಸಭೆ ಕರೆಯಲು ನಿರ್ಧರಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಮುಂದಾಳತ್ವದಲ್ಲಿ ಬೆಂಗಳೂರಿನ ಅವರ ನಿವಾಸದಲ್ಲಿ ಬುಧವಾರ ಈ ಸಭೆ ನಡೆಯಿತು. ಅಖೀಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಿಸುವ ಬಸವರಾಜ ಹೊರಟ್ಟಿ ಮತ್ತು ಬಸವರಾಜ ರಾಯರಡ್ಡಿ ಸೇರಿದಂತೆ ಮುಂಚೂಣಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಇನ್ನೊಬ್ಬ ಮುಖಂಡ ಎಂ.ಬಿ. ಪಾಟೀಲ್‌ ಗೈರಾಗಿದ್ದರು.

ಸುಮಾರು ಎರಡೂವರೆ ಗಂಟೆ ನಡೆದ ಸಭೆಯಲ್ಲಿ ಎರಡೂ ಬಣದವರು ಸಭೆಯಲ್ಲಿ ತಮ್ಮದೇ ಆದ ವಾದ ಮಂಡಿಸಿದ್ದಾರೆ. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎನ್ನುವುದನ್ನು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮಾಡುವವರು ಪ್ರತಿಪಾದಿಸಿದ್ದಾರೆ. ಅಲ್ಲದೇ ವೀರಶೈವ ಪದ ಸೇರಿಸಿ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟರೆ ಮಾನ್ಯತೆ ದೊರೆಯುವುದಿಲ್ಲ ಎಂಬ ವಾದವನ್ನು ಅಲ್ಲಿಯೂ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಲಿಂಗಾಯತ ಪ್ರತ್ಯೇಕ ಹೋರಾಟಗಾರರ ವಾದಕ್ಕೆ ಮಹಾಸಭೆಯ ಮುಖಂಡರು ಪ್ರತ್ಯುತ್ತರವಾಗಿ ತಮ್ಮ ಬಳಿಯ ದಾಖಲೆಗಳನ್ನು ತೋರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತ್ಯೇಕ ಧರ್ಮದ ಬೇಡಿಕೆಯಲ್ಲಿ ವೀರಶೈವ ಪದ ಸೇರ್ಪಡೆ ಮಾಡಿರುವುದರಿಂದ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಲ್ಲ ಎಂಬ ವಾದವನ್ನು ಮಹಾಸಭೆಯ ಮುಖಂಡರು ಮಾಡಿದ್ದಾರೆ. ಹೀಗಾಗಿ ಎರಡೂ ಬಣದ ನಾಯಕರ ವಾದದಿಂದ ಯಾವುದೇ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಬುಧವಾರ ನಡೆದ ಸಭೆ ವಿಫ‌ಲವಾಗಿದೆ. ಸಭೆಯಲ್ಲಿ ಎಲ್ಲ ನಾಯಕರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿದ್ದರಿಂದ ಸಾಕಷ್ಟು ಸಮಯ ವ್ಯರ್ಥವಾಗಿದೆ. ಹೀಗಾಗಿ ಉಳಿದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದ್ದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಸಭೆಯನ್ನು ಮುಕ್ತಾಯಗೊಳಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಸಭೆಯಲ್ಲಿ ಆರೆಸ್ಸೆಸ್‌ ಹಾಗೂ ಬಿಜೆಪಿ ವಿರುದ್ಧವೂ  ಚರ್ಚಿಸಲಾಗಿದೆ. ಆರೆಸ್ಸೆಸ್‌ ನಮ್ಮನ್ನೂ ಹಿಂದೂ ಧರ್ಮದಲ್ಲಿಯೇ ಉಳಿಯುವಂತೆ ಮಾಡುತ್ತಿದೆ. ಲಿಂಗಾಯತರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಕೇಲವರು ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ.

ತಜ್ಞರ ಸಮಿತಿ: ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಎನ್ನುವುದನ್ನು ವಾದ ಮಾಡುತ್ತಿರುವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು, ಯಾವ ಹೆಸರಿಗೆ ದಾಖಲೆಗಳು, ಪುರಾವೆಗಳಿದ್ದಾವೆ ಎನ್ನುವುದನ್ನು ಪರಿಶೀಲಿಸಲು ಕಾನೂನು ಮತ್ತು ಧಾರ್ಮಿಕ ವಿಷಯದಲ್ಲಿ ಪ್ರಾವಿಣ್ಯತೆ ಪಡೆದಿರುವ ತಜ್ಞರ ಸಮಿತಿ ರಚಿಸುವಂತೆ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಮಹಾಸಭೆಯ ಮುಖಂಡರು ಒಪ್ಪಿಕೊಂಡಿದ್ದು, ಮುಂದಿನ ಸಭೆಯಲ್ಲಿ ತಜ್ಞರ ಸಮಿತಿ ನೇಮಕ ಮಾಡುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಮಹಾಸಭೆಗೆ ಶರಣು: ವೀರಶೈವ ಮಹಾಸಭೆಗೂ ಲಿಂಗಾಯತರಿಗೂ ಸಂಬಂಧ ಇಲ್ಲ ಎಂದು ಬಂಡಾಯ ಎದ್ದಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರು, ಎಲ್ಲರೂ ಒಂದಾಗಿ ಹೋಗುವ ಕುರಿತು ಮಹಾಸಭೆಯ ನಾಯಕರ ಮಾತುಗಳಿಗೆ ಬೆಲೆ ಕೊಡಲು ಒಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಲಿಂಗಾಯತ ಹೋರಾಟಗಾರರು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿರುವುದರಿಂದ ಅವುಗಳನ್ನು ತಕ್ಷಣಕ್ಕೆ ರದ್ದುಗೊಳಿಸಲು ಹಿಂದೇಟು ಹಾಕಿದ್ದಾರೆ. ಸಮಾವೇಶ ಆಯೋಜಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿ, ತಮ್ಮ ಪ್ರತ್ಯೇಕತೆಯ ಹೋರಾಟವನ್ನು ಇನ್ನೂ ಜೀವಂತವಾಗಿಡುವ ಸೂಚನೆ ನೀಡಿದ್ದಾರೆ.

ವೀರ-ಲಿಂಗಾಯತ ಎಂದ ರಾಯರೆಡ್ಡಿ: ವೀರಶೈವದಲ್ಲಿ ಶೈವ ಪದ ಬರುವುದರಿಂದ ಶೈವ ಪಂಥದ ಆಚರಣೆ ಆಗುತ್ತದೆ. ಅದು ಮತ್ತೆ ಹಿಂದೂ ಧರ್ಮವನ್ನೇ ಅನುಕರಣೆ ಮಾಡಿದಂತಾಗುತ್ತದೆ. ಹೀಗಾಗಿ ಹಿಂದೂ ಧರ್ಮದಿಂದ ಸಂಪೂರ್ಣ ಭಿನ್ನವಾಗಿರಬೇಕೆಂದರೆ, ಶೈವ ಆಚರಣೆಗಳನ್ನು ಬಿಡಬೇಕಾಗುತ್ತದೆ. ಅದಕ್ಕಾಗಿ ವೀರಶೈವದಲ್ಲಿರುವ "ಶೈವ' ಪದವನ್ನು ಕೈ ಬಿಟ್ಟು ವೀರ-ಲಿಂಗಾಯತ ಎಂದು ಹೆಸರಿಡಿ ಎಂದು ಸಲಹೆ ನೀಡಿದರು ಎಂದು ತಿಳಿದು ಬಂದಿದೆ.

Back to Top