CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಣಜದಲ್ಲಿ ಕಾಯ್ದೆಗೆ ಕನ್ನಡ ರೂಪ

ಕೇಂದ್ರ, ರಾಜ್ಯದ 233 ಕಾಯ್ದೆ ಈಗಾಗಲೇ ಭಾಷಾಂತರ

ಬೆಂಗಳೂರು: ಕಾನೂನುಗಳನ್ನು ಜನಸಾಮಾನ್ಯರು ಓದಿ ಅರ್ಥೈಸಿಕೊಂಡು ಪಾಲಿಸಿದಾಗ ಮಾತ್ರ ಕಾನೂನು ಆಶಯ ಸಂಪೂರ್ಣ ಈಡೇರಿದಂತೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿನಿಯಮಗಳ ಕನ್ನಡ ಅವತರಣಿಕೆಯನ್ನು "ಕಣಜ' ಜಾಲತಾಣದಲ್ಲಿ ಒಂದೇ ಕ್ಲಿಕ್‌ನಲ್ಲಿ ಪಡೆಯಬಹುದಾಗಿದೆ.

ಕೇಂದ್ರ ಸರ್ಕಾರದ 112 ಅಧಿನಿಯಮಗಳು ಮತ್ತು ರಾಜ್ಯ ಸರ್ಕಾರದ 121 ಅಧಿನಿಯಮಗಳು ಸೇರಿ ಒಟ್ಟು 233 ಅಧಿನಿಯಮಗಳನ್ನು "ಕಣಜ' ವೆಬ್‌ಸೈಟ್‌ನಲ್ಲಿ ಪಿಡಿಎಫ್ ಮಾದರಿಯಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಶತಮಾನಗಳ ಹಿಂದೆ ರೂಪುಗೊಂಡ ಕಾಯ್ದೆಗಳ ಮಾಹಿತಿಯೂ ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದು ವಿಶೇಷ.

ಕನ್ನಡದಲ್ಲಿ ಎಲ್ಲ ಜ್ಞಾನ ಪ್ರಕಾರಗಳನ್ನು ಒಂದೇ ಕಡೆ ಒದಗಿಸಬೇಕೆಂಬ ಮೂಲ ಆಶಯಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ "ಕಣಜ'ದಲ್ಲಿ ಈ ಅಧಿನಿಯಮಗಳನ್ನು ಪ್ರಕಟಿಸುವ ಮೂಲಕ ಹೊಸ ಸೇವೆಗೆ ವಿಸ್ತರಿಸಿಕೊಂಡಿದೆ.
ದೇಶದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಮತ್ತು ಪ್ರಸ್ತುತ ಜಾರಿಗೊಂಡಿರುವ ಅಧಿನಿಯಮಗಳು, ಹೊಸ ತಿದ್ದುಪಡಿಗಳನ್ನು ಕಣಜದಲ್ಲಿ ಅಳವಡಿಸಲಾಗಿವೆ. ಬಂದಿಗಳ ಅಧಿನಿಯಮ(1900), ನ್ಪೋಟಕ ಪದಾರ್ಥಗಳ ಅಧಿನಿಯಮ (1908), ಸಹಕಾರಿ ಸಂಘಗಳ ಅಧಿನಿಯಮ (1912), ಔಷಧ ಮತ್ತು ಪ್ರಸಾಧನ ಸಾಮಗ್ರಿ ಅಧಿನಿಯಮ (1940), ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ (1956), ಹಿಂದು ವಿವಾಹ ಅಧಿನಿಯಮ (1955), ಸಿನಿಮಾ ಕೆಲಸಗಾರರ ಕಲ್ಯಾಣ ನಿಧಿ ಅಧಿನಿಯಮ(1981), ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಧಿನಿಯಮಗಳ ಸಂಪೂರ್ಣ ಮಾಹಿತಿ "ಕಣಜ'ದಲ್ಲಿ ಲಭ್ಯವಿದೆ.

ಅಂತೆಯೇ ರಾಜ್ಯ ಸರ್ಕಾರದ ಕೃಷಿ, ಎಪಿಎಂಸಿ, ಪಶುರೋಗಗಳು, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ(1977), ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ, ಬ್ರೋಸ್ಟಲ್‌ ಶಾಲೆಗಳ ಅಧಿನಿಯಮ, ವಿದ್ಯುತ್ಛಕ್ತಿ, ಗೃಹ ನಿರ್ಮಾಣ ಮಂಡಳಿ ಹೀಗೆ ರಾಜ್ಯ ಸರ್ಕಾರ ಹೊರಡಿಸಿದ ಅಧಿನಿಯಮಗಳು ಕನ್ನಡದಲ್ಲಿಯೇ ಅತ್ಯಂತ ಸುಲಭವಾಗಿ ಓದುಗರಿಗೆ ಸಿಗುತ್ತಿವೆ.

ಕನ್ನಡದಲ್ಲಿ ಅಧಿನಿಯಮ
ಕೇಂದ್ರ ಸರ್ಕಾರ ಜಾರಿಗಳಿಸುವ ಕಾಯ್ದೆಗಳು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಇರುತ್ತವೆ. ಇದರಿಂದ ಇಂಗ್ಲಿಷ್‌, ಹಿಂದಿ ಬರದವರು ಅಧಿನಿಯಮವನ್ನು ತಿಳಿಯಲು ಅನ್ಯರನ್ನು ಆವಲಂಬಿಸಬೇಕಾಗಿತ್ತು. ಸರ್ಕಾರಗಳ ಕಾಯ್ದೆಗಳನ್ನು ಓದುವುದೆಂದರೆ ಕಬ್ಬಿಣದ ಕಡಲೆಯಂತೆ ಭಾಸವಾಗುತ್ತಿತ್ತು. ಕನ್ನಡ ಆಡಳಿತ ಭಾಷೆಯಾಗಿದ್ದರೂ ಈ ಹಿಂದೆ ರಾಜ್ಯ ಸರ್ಕಾರದ ಅನೇಕ ಕಾಯ್ದೆಗಳು ಇಂಗ್ಲೀಷ್‌ನಲ್ಲಿ ಇರುತ್ತಿದ್ದವು (ಪ್ರಸ್ತುತ ಕನ್ನಡದಲ್ಲಿಯೇ ಅಧಿನಿಯಮಗಳನ್ನು ಜಾರಿಗೊಳ್ಳುತ್ತಿದೆ). ಇದೀಗ ಕಣಜದಲ್ಲಿ ಪ್ರಕಟಿಸಲಾಗಿರುವ ಎಲ್ಲ ಅಧಿನಿಯಮಗಳು ಕನ್ನಡ ಬಲ್ಲಂತಹ ಎಲ್ಲರಿಗೂ ಅತ್ಯಂತ ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವಂತೆ ಅಪ್‌ಲೋಡ್‌ ಮಾಡಲಾಗಿದೆ.

ಅಧಿನಿಯಮಗಳ ಇಂಗ್ಲಿಷ್‌ ಪಠ್ಯ ಗೊತ್ತಿದ್ದವರಿಗೆ ಹುಡುಕಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮೂಲ ಇಂಗ್ಲಿಷ್‌ನ ಅಕಾರಾಧಿಗಳಲ್ಲಿ ಇರುವಂತೆ ಎಲ್ಲಾ ಅಧಿನಿಯಮಗಳನ್ನು ಅಳವಡಿಸಲಾಗಿದೆ (ಅಡ್ವೋಕೆಟ್ಸ್‌ ವೆಲ್‌ಫೇರ್‌ ಫ‌ಂಡ್‌ ಆ್ಯಕ್ಟ್ - ನ್ಯಾಯವಾದಿಗಳ ಕ್ಷೇಮಾಭಿವೃದ್ಧಿ ನಿಧಿ ಅಧಿನಿಯಮ). ಹೀಗೆ ಎ ಇಂದ "ವಿ' ವರೆಗೂ ಇರುವಂತೆ ಅಧಿನಿಯಮಗಳನ್ನು ಆಲ್ಫಾಬೆಟಿಕ್‌ ಮಾದರಿಯಲ್ಲಿ ವೆಬ್‌ಸೈಟ್‌ಗೆ ಸೇರಿಸಲಾಗಿದೆ.

ಅನುಕೂಲಗಳು
ಈ ಹಿಂದೆ ಕಾನೂನು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಜನಸಾಮಾನ್ಯರು ಸರ್ಕಾರಗಳ ಕಾಯ್ದೆಗಳನ್ನು ತಿಳಿಯಲು ಕೇಂದ್ರ ಗ್ರಂಥಾಲಯಗಳಿಗೆ ಹೋಗಬೇಕಿತ್ತು. ಕೆಲವು ಸಂದರ್ಭಗಳಲ್ಲಿ ಗೆಜೆಟಿಯರ್‌ಗಳನ್ನು ಹುಡುಕುತ್ತಾ ಅಲೆಯುವಂತ ಸ್ಥಿತಿ ಇತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆಯಾ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಅಧಿಸೂಚನೆಗಳನ್ನಷ್ಟೇ ಪ್ರಕಟಿಸುತ್ತಿದ್ದವು. ಇದರಿಂದ ಎಲ್ಲ ಇಲಾಖೆಗಳ ಕಾಯ್ದೆಗಳು ಒಂದೆಡೆ ಸಿಗಲು ಸಾಧ್ಯವಾಗಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಣಜ ವೆಬ್‌ಸೈಟ್‌ನಲ್ಲಿ ಅಧಿಸೂಚನೆಗಳನ್ನು ಅಳವಡಿಸಿರುವುದು ಅತ್ಯುಪಯುಕ್ತವಾಗಿದೆ. ಮುಖ್ಯವಾಗಿ ಕನ್ನಡದಲ್ಲಿ ಕಾಯ್ದೆಗಳ ಲಭ್ಯತೆ ಖುಷಿ ಕೊಟ್ಟಿದೆ ಎನ್ನುತ್ತಾರೆ ಐದು ವರ್ಷದ ಕಾನೂನು ವಿದ್ಯಾರ್ಥಿ ವೇದಾವತಿ.

ವಿಶ್ವದೆಲ್ಲೆಡೆ ಕಣಜ ವೆಬ್‌ಸೈಟ್‌ ಮೂಲಕ ಜನಸಾಮಾನ್ಯನು ಕೂಡ ಅಧಿನಿಯಮಗಳನ್ನು ತೆರೆದು ಓದಬಹುದಾಗಿದೆ. ಈ ಮೂಲಕ ಕನ್ನಡ ಜ್ಞಾನಭಂಡಾರವಾದ ಕಣಜದಲ್ಲಿ ಹೊಸದಾಗಿ ಈ ಅಧಿನಿಯಮಗಳನ್ನು ಹಾಕುವ ಮೂಲಕ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಕಣಜ ತಂಡ ಶ್ರಮಿಸಿದೆ.

ವೆಬ್‌ಸೈಟ್‌ ವಿಳಾಸ
ಕಣಜ ವೆಬ್‌ಸೈಟ್‌ ಪ್ರವೇಶಿಸುವ ವಿಳಾಸ: www.kanaja.in/acts ಗೆ ಭೇಟಿ ನೀಡಿದ ಕೂಡಲೇ ಸರ್ಕಾರದ ಅಧಿನಿಯಮಗಳು ಎಂಬ ಪೇಜ್‌ ತೆರೆದುಕೊಳ್ಳುತ್ತದೆ. ಇದರ ಕೆಳಭಾಗದಲ್ಲಿಯೇ ಕೇಂದ್ರ ಸರ್ಕಾರದ ಅಧಿನಿಯಮಗಳು ಮತ್ತು ರಾಜ್ಯ ಸರ್ಕಾರದ ಅಧಿನಿಯಮಗಳು ಎಂಬ ವಿಭಾಗವಿದೆ. ಬೇಕಾದ ಅಧಿನಿಯಮದ ಮೇಲೆ ಕ್ಲಿಕ್‌ ಮಾಡಿದರೆ, ಪುಟ ತೆರೆದುಕೊಳ್ಳುತ್ತದೆ.

3 ದಿನಕ್ಕೆ 3 ಸಾವಿರ ಮಂದಿ ಭೇಟಿ
ಸೆ.6ರಂದು ಕಣಜ ವೆಬ್‌ಸೈಟ್‌ಗೆ ಅಧಿನಿಯಮಗಳ ಪಿಡಿಎಫ್ ಮಾದರಿಯನ್ನು ಅಪ್‌ಲೋಡ್‌ ಮಾಡಲಾಗಿದ್ದು, ಕೇವಲ ಮೂರು ದಿನಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು, ಮಾಹಿತಿ ವೀಕ್ಷಿಸಿದ್ದಾರೆ.

ಇಲಾಖೆಯಲ್ಲಿ ಲಭ್ಯವಿದ್ದಂತಹ ಅಧಿನಿಯಮಗಳನ್ನು ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಳವಡಿಸಲಾಗಿದೆ. ಹೊಸ ಅಧಿನಿಯಮಗಳು ಬಂದಂತೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, "ಕಣಜ' ತಂಡವು ಆ ಕಾರ್ಯವನ್ನು ನಿರ್ವಹಿಸಲಿದೆ.
- ವಿಶುಕುಮಾರ್‌, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ 

- ಸಂಪತ್‌ ತರೀಕೆರೆ

Back to Top