CONNECT WITH US  

ಎಲ್ಲಾ ಆಹಾರ ಪದಾರ್ಥಕ್ಕೂ ಜಿಎಸ್‌ಟಿ ಹೇರಿಕೆ?

ಬ್ರ್ಯಾಂಡ್‌ ಇಲ್ಲದೆ ಆಹಾರ ಪದಾರ್ಥಗಳ ಮಾರಾಟ ಕಷ್ಟ

ಬೆಂಗಳೂರು: ಜಿಎಸ್‌ಟಿ ಜಾರಿಯಾಗಿ ಎರಡೂವರೆ ತಿಂಗಳಾದರೂ ಖರೀದಿ ವಸ್ತುವಿನ ದರದ ಬಗ್ಗೆ ಜನಸಾಮಾನ್ಯರಿಗೆ ಸ್ಪಷ್ಟತೆ ಇಲ್ಲದೆ ಗೊಂದಲ ಮುಂದುವರಿದಿದೆ. ಈ ಮಧ್ಯೆ, ಜನ ಸಾಮಾನ್ಯರ ನಿತ್ಯೋಪಯೋಗಿ ಆಹಾರ ಪದಾರ್ಥಗಳೂ ಜಿಎಸ್‌ಟಿಯಡಿ ಶೇ.5ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದೆ.

ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಬ್ರ್ಯಾಂಡ್‌ ವಸ್ತುಗಳು, ಬ್ರ್ಯಾಂಡ್‌ ನೋಂದಣಿ ವೇಳೆ ತಮ್ಮ ಉತ್ಪನ್ನವೆಂ ಕ್ಲೇಮ್‌ ಹೊಂದಿರುವ ಆಹಾರ ಪದಾರ್ಥಗಳಿಗೂ ಶೇ.5ರಷ್ಟು ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ, ಬಹುತೇಕ ಪದಾರ್ಥಗಳು ತೆರಿಗೆ ವ್ಯಾಪ್ತಿಗೆ ಒಳಪಡಲಿದ್ದು ಸಹಜವಾಗಿ ಸಾಮಾನ್ಯರಿಗೆ ತೆರಿಗೆ ಹೊರೆ ಬೀಳಲಿದೆ. ಇದನ್ನು ವಾಣಿಜ್ಯ ತೆರಿಗೆ ಇಲಾಖೆಯೂ ದೃಢೀಕರಿಸಿದೆ.

ಅಂದರೆ, ನಿರ್ದಿಷ್ಟ ಬ್ರ್ಯಾಂಡ್‌ ಬೇಡವೆಂದರೂ, ಉತ್ಪಾದಕರು ಪದಾರ್ಥವನ್ನು ಮಾರಾಟ ಮಾಡಲು ಗುಣಮಟ್ಟದ ಪರವಾನಗಿ ಪಡೆಯಬೇಕು. ಈ ಸಂದರ್ಭದಲ್ಲಿ ಉತ್ಪಾದಕರು ನೀಡುವ ವಿಳಾಸ ಮತ್ತು ಮಾಹಿತಿಯೇ ಜಿಎಸ್‌ಟಿ ಜಾಲದೊಳಗೆ ಬೀಳಿಸುತ್ತದೆ ಎಂಬ ವಾದ ಕೇಳಿಬಂದಿದೆ.

ಸೆ.9 ರ ಜಿಎಸ್‌ಟಿ ಕೌನ್ಸಿಲ್‌ ಸಭೆಯ ನಿರ್ಣಯ ಹೀಗಿದೆ. 2017ರ ಮೇ 15ಕ್ಕೆ ಬ್ರ್ಯಾಂಡ್‌ ನೋಂದಣಿಯಾದ ಆಹಾರ ಪದಾರ್ಥಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ. ಜತೆಗೆ ತಮ್ಮ ಉತ್ಪನ್ನದ ಹೆಸರಿನಲ್ಲಿ ದುರ್ಬಳಕೆಯಾದಾಗ ಕ್ರಮ ಜರುಗಿಸಲು (ಆ್ಯಕ್ಷನೆಬಲ್‌ ಕ್ಲೇಮ್‌) ಮುಂದಾಗುವಂತಿದ್ದರೆ ಅಥವಾ ತಮ್ಮದೇ ವಿಶೇಷ ಉತ್ಪನ್ನ (ಎಕ್ಸ್‌ಕ್ಲೂಸಿವಿಟಿ) ಎಂದು ಪರಿಗಣಿಸಿದರೆ ಆಗಲೂ ತೆರಿಗೆ ಪಾವತಿ ಅನಿವಾರ್ಯ. 

ಬ್ರ್ಯಾಂಡ್‌ ಇಲ್ಲವೇ ಈ ರೀತಿಯ "ಆ್ಯಕ್ಷನೆಬಲ್‌ ಕ್ಲೇಮ್‌', ಎಕ್ಸ್‌ಕ್ಲೂಸಿವಿಟಿ' ಇಲ್ಲದ ಆಹಾರ ಪದಾರ್ಥಗಳು ತೀರಾ ಕಡಿಮೆ ಇರುವ ಕಾರಣ ಬಹುತೇಕ ಆಹಾರ ಪದಾರ್ಥಗಳು ತೆರಿಗೆ ವ್ಯಾಪ್ತಿಗೆ ಬರಲಿವೆ ಎಂದು ಆರ್ಥಿಕ ತಜ್ಞರ ವಾದ.

ಪರೋಕ್ಷ ತೆರಿಗೆ ಹೇಗೆ?: ಬ್ರ್ಯಾಂಡ್‌ ನೋಂದಣಿಯಾಗದ, ತಮ್ಮದೇ ಉತ್ಕೃಷ್ಟ ಉತ್ಪನ್ನವೆಂದು ಹೇಳಿಕೊಳ್ಳದ, ಯಾವುದೇ ವಿಶೇಷ ಸಂಕೇತವಿಲ್ಲದ ಆಹಾರ ಧಾನ್ಯ, ಪದಾರ್ಥಗಳಿಗೆ ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ಇದೆ. ಆದರೂ ಕೆಲವೊಮ್ಮೆ ತೆರಿಗೆ ವ್ಯಾಪ್ತಿಗೆ ಬರಲಿವೆ.

ಭಾರತೀಯ ಆಹಾರ ಮತ್ತು ಮಾಪನ ಪ್ರಾಧಿಕಾರದ ನಿಯಮದಡಿ ಉತ್ಪಾದಕರು ತಮ್ಮ ಉತ್ಪನ್ನದ ಗುಣಮಟ್ಟದ ಪರವಾನಗಿ ಪಡೆಯಬೇಕು. ಆಗ ಉತ್ಪಾದಕರ ವಿಳಾಸ, ಮಾಹಿತಿ ನೀಡಲೇಬೇಕು. ಇದು ತಮ್ಮದೇ ಉತ್ಪನ್ನವೆಂದು ಹೇಳಿಕೊಂಡರೆ ಶೇ.5ರಷ್ಟು ತೆರಿಗೆ ಪಾವತಿ ಅನಿವಾರ್ಯವೇ ಎಂಬ ಸ್ಪಷ್ಟತೆಯಿಲ್ಲ. ವಾಣಿಜ್ಯ ತೆರಿಗೆ ಇಲಾಖೆಗಳು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ, ಟ್ರೇಡ್‌ ಮಾರ್ಕ್‌ ನೋಂದಣಿ ಇಲಾಖೆ ತೆರಿಗೆ ಅನ್ವಯವಾಗಲಿದೆ ಎನ್ನುತ್ತಿರುವುದರಿಂದ ಜಿಎಸ್‌ಟಿ ಗೊಂದಲ ಸೃಷ್ಟಿಸಿದೆ.

ಬ್ರ್ಯಾಂಡ್‌, ವಿಶೇಷ ಸಂಕೇತವಿಲ್ಲದಿದ್ದರೂ ಮುಂದೆ ಬೇರೊಂದು ಸಂಸ್ಥೆ ತಮ್ಮದೇ ಸಂಸ್ಥೆಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ಆಕ್ಷೇಪಿಸಿದರೆ ಆಗುವ ಅನಾಹುತಕ್ಕೆ ದಂಡ ತೆರಬೇಕಾಗುತ್ತದೆ. ಬ್ರ್ಯಾಂಡ್‌, ಸಂಕೇತವನ್ನು ಮತ್ತೂಬ್ಬರು ಬಳಸಿದರೂ ಆಕ್ಷೇಪವಿಲ್ಲ ಎನ್ನುವವರು ತೆರಿಗೆ ಪಾವತಿಸಬೇಕಿಲ್ಲ. ಆದರೆ ತನ್ನ ಉತ್ಪನ್ನ ವಿಶೇಷವೆಂದು ಕ್ಲೇಮ್‌ ಮಾಡಿದರೆ ಆಗ ತೆರಿಗೆ ವ್ಯಾಪ್ತಿಗೆ ಒಳಪಡಬೇಕಾಗುತ್ತದೆ. ಆಗಲೂ ಪೂರ್ವಾನ್ವಯವಾಗುವಂತೆ ತೆರಿಗೆ ಪಾವತಿಸಬೇಕಾಗುತ್ತದೆ.

ಬ್ರ್ಯಾಂಡ್‌ ನೋಂದಣಿಯಾಗದ ಯಾವುದೇ ಆಹಾರ ಧಾನ್ಯ, ಪದಾರ್ಥದ ಉತ್ಪಾದಕರು ತಮ್ಮ ಹೆಸರನ್ನು ಮತ್ತೂಬ್ಬರು ಬಳಸುವಂತಿಲ್ಲ, ಬಳಸಿಕೊಂಡರೆ ನ್ಯಾಯಾಲಯದ ಮೆಟ್ಟಿಲೇರುವ ಸ್ಥಿತಿಯಲ್ಲಿದ್ದರೆ ಜಿಎಸ್‌ಟಿಯಡಿ ಶೇ.5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಬ್ರಾಂಡ್‌ ಅಥವಾ ತಮ್ಮ ಹೆಸರು ಇತರೆ ವಿಶೇಷತೆಗಳ ಬಗ್ಗೆ ಕ್ಲೇಮ್‌ ಹೊಂದಿದ್ದರೆ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ. ಸದ್ಯ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನವಾಗಿದ್ದು, ಅಂತಿಮ ಅಧಿಸೂಚನೆ ಬಳಿಕ ಸ್ಪಷ್ಟತೆ ಸಿಗಲಿದೆ.
-ರಿತ್ವಿಕ್‌ ಪಾಂಡೆ, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ

ಬ್ರಿಟಿಷರ ಕಾಲದಲ್ಲೇ ತೆರಿಗೆ ವಿನಾಯ್ತಿಯಿದ್ದ ಆಹಾರ ಪದಾರ್ಥಗಳ ಮೇಲೂ ಪರೋಕ್ಷವಾಗಿ ತೆರಿಗೆ ವಿಧಿಸಲು ಕೇಂದ್ರ ಮುಂದಾಗಿದೆ. ಸ್ವಾತಂತ್ರಾé ನಂತರ ಮೊದಲ ಬಾರಿಗೆ ಜನ ಬಳಸುವ ಅಕ್ಕಿ, ರಾಗಿ, ಜೋಳ, ಸಜ್ಜೆಯನ್ನು ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ. ಇದರಿಂದ ಜನರಿಗೆ ಭಾರಿ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಖೀಲ ಭಾರತ ಮಟ್ಟದಲ್ಲಿ ಮುಷ್ಕರ ನಡೆಸಲು ಮಾತುಕತೆ ನಡೆದಿದೆ.
- ಶ್ರೀನಿವಾಸ್‌ ಎನ್‌. ರಾವ್‌, ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಪ್ರಧಾನ ಕಾರ್ಯದರ್ಶಿ

ಆಹಾರ ಪದಾರ್ಥಗಳಿಗೆ ಜಿಎಸ್‌ಟಿಯಡಿ ತೆರಿಗೆ ವಿಧಿಸುವ ವಿಚಾರದಲ್ಲಿ ಸಾಕಷ್ಟು ಗೊಂದಲವಿದೆ. ಎಫ್ಎಸ್‌ಎಸ್‌ಎಐ ನಿಯಮದಂತೆ ತೂಕ ಮತ್ತು ಅಳತೆ ಇಲಾಖೆಯಡಿ ದೃಢೀಕರಣಕ್ಕೆ ಉತ್ಪಾದಕರ ಹೆಸರು, ವಿಳಾಸ ನಮೂದಿಸಿದರೆ ತೆರಿಗೆ ಪಾವತಿಸಬೇಕೆ, ಬೇಡವೇ ಎಂಬ ಬಗ್ಗೆ ಸ್ಪಷ್ಟತೆ ಬೇಕಿದೆ.
- ಸಿ. ವೆಂಕಟಸುಬ್ರಹ್ಮಣ್ಯಂ, ಪೇಟೆಂಟ್‌-ಟ್ರೇಡ್‌ ಮಾರ್ಕ್‌ ತಜ್ಞ

- ಎಂ.ಕೀರ್ತಿಪ್ರಸಾದ್‌

Trending videos

Back to Top