CONNECT WITH US  

Teacher Post:ದೂರ ಶಿಕ್ಷಣ ಪದವೀಧರರಿಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ

ಅರ್ಹತೆ ಇದ್ದರೂ ಅನರ್ಹ ಎನ್ನುತ್ತಿದೆ ಆನ್‌ಲೈನ್‌ ತಂತ್ರಾಂಶ

ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯದ ಅಂಚೆ ತೆರಪಿ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ಮೂಲಕ ಬಿ.ಎಸ್ಸಿ. ಪದವಿ ಪಡೆದ ನೂರಾರು ಅರ್ಹ ಅಭ್ಯರ್ಥಿಗಳು ವಿಜ್ಞಾನ ಮತ್ತು ಗಣಿತ ಪದವೀಧರ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲಾಗದೆ ಕಂಗಾಲಾಗಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಯ 6ರಿಂದ 8ನೇ ತರಗತಿಯಲ್ಲಿ ಖಾಲಿ ಇರುವ ವಿವಿಧ ವಿಷಯದ ಪದವೀಧರ ಶಿಕ್ಷಕರ ಹುದ್ದೆಗೆ ಶಿಕ್ಷಣ ಇಲಾಖೆ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಯಾ ವಿಷಯವಾರು ಅರ್ಜಿ ಸಲ್ಲಿಸುತ್ತಿದ್ದಾರೆ. ದೂರಶಿಕ್ಷಣ ಅಥವಾ ಅಂಚೆ ತೆರಪಿ ಶಿಕ್ಷಣದ ಮೂಲಕ ಪದವಿ ಪಡೆದಿರುವ ಅಭ್ಯರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯದ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಸ್ವೀಕಾರವಾಗುತ್ತಿಲ್ಲ. ಎಲ್ಲ ರೀತಿಗಳ ಶೈಕ್ಷಣಿಕ ಅರ್ಹತೆ ಇದ್ದರೂ ನೀವು ಗಣಿತ ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಹರಾಗಿಲ್ಲ ಎಂಬ ಸಂದೇಶ ಬರುತ್ತಿದೆ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅರ್ಹತೆಯೇನು?
ಸರಕಾರದ ನಿಯಮದ ಪ್ರಕಾರ ಪ್ರಾಥಮಿಕ ಶಾಲೆಯ ಪದವೀಧರ ಗಣಿತ ಮತ್ತು ವಿಜ್ಞಾನ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಪದವಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಮೂರು ವರ್ಷವೂ ಅಧ್ಯಯನ ಮಾಡಿರಬೇಕು. ಪ್ರತಿ ವಿಷಯದಲ್ಲಿ ಕನಿಷ್ಠ ಶೇ. 50ರಷ್ಟು ಅಂಕ ಪಡೆದಿರಬೇಕು.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಮತ್ತು ಅಂಗವಿಕಲ ಅಭ್ಯರ್ಥಿಗಳು ಮೂರೂ ವಿಷಯಗಳಲ್ಲಿ ಶೇ. 45ರಷ್ಟು ಅಂಕ ಪಡೆದಿದ್ದರೆ ಸಾಕು. ಹಾಗೆಯೇ ಶಿಕ್ಷಣದಲ್ಲಿ ಡಿಪ್ಲೊಮಾ ಅಥವಾ ಪದವಿ ಹಂತಗಳಲ್ಲಿ  ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಬೋಧನಾ ವಿಷಯವಾಗಿ (ಮೆಥಡಾಲಜಿ) ಅಭ್ಯಾಸ ಮಾಡಿರಬೇಕು ಎಂಬ ಷರತ್ತು ವಿಧಿಸಿದೆ. ಹಾಗೆಯೇ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಇಲಾಖೆ ಸೂಚಿಸಿದ ಈ ಎಲ್ಲ ಅರ್ಹತೆ ಇದ್ದರೂ ದೂರಶಿಕ್ಷಣ ನಿರ್ದೇಶನಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ನಿಗದಿತ ವೆಬ್‌ಸೈಟ್‌ನ ಲಿಂಕ್‌ನಲ್ಲಿ ಅರ್ಜಿ ಭರ್ತಿ ಮಾಡುವಾಗ ಮೊದಲ ಹಂತದಲ್ಲಿ ಎಲ್ಲ ಮಾಹಿತಿ ಸ್ವೀಕಾರವಾಗುತ್ತದೆ. 2ನೇ ಹಂತದಲ್ಲಿ ಶೈಕ್ಷಣಿಕ ವಿದ್ಯಾರ್ಹತೆಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ದೂರಶಿಕ್ಷಣ ಎಂದು ನಮೂದಿಸಿದ್ದೇವೆ. ಪದವಿಗೆ ದಾಖಲಾದ ವರ್ಷ, ಉತ್ತೀರ್ಣರಾದ ವರ್ಷ, ಪಡೆದ ಪದವಿ, ವಿಶ್ವವಿದ್ಯಾಲಯ ಹಾಗೂ ಯಾವ ಮಾಧ್ಯಮದ ಕಾಲಂ ಕೂಡ ಭರ್ತಿ ಮಾಡಿದ್ದೇವೆ. ಈ ಎಲ್ಲ ಮಾಹಿತಿಗಳ ಜತೆಗೆ 3 ವರ್ಷಗಳ ಒಟ್ಟು ಅಂಕ ಮತ್ತು ಪಡೆದ ಅಂಕ, ಶೇಕಡಾವಾರು ಫ‌ಲಿತಾಂಶ ಎಲ್ಲವನ್ನು ಸೂಚನೆಯಂತೆ ನೀಡಿದ್ದೇವೆ. ಆದರೆ, ಸಬಿ¾ಟ್‌ ಮಾಡುವಾಗ ನೀವು ಅರ್ಹರಲ್ಲ ಎಂಬ ಸಂದೇಶ ಬರುತ್ತಿದೆ ಎಂದು ಪಾವಗಡ ಮೂಲಕ ಶಿಕ್ಷಕ ಅಭ್ಯರ್ಥಿಯೊಬ್ಬರು ತಮ್ಮ ನೋವು ಹೇಳಿಕೊಂಡರು.

ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಗಣಿತ ಮತ್ತು ವಿಜ್ಞಾನದ 4,233, ಆಂಗ್ಲ ಭಾಷೆಯ 4,531 ಹಾಗೂ ಸಮಾಜ ಪಾಠದ 1,236 ಹುದ್ದೆ ಸಹಿತ 10 ಸಾವಿರ ಪದವೀಧರ ಶಿಕ್ಷಕ ಹುದ್ದೆಗಳ ಭರ್ತಿ ಕಾರ್ಯ ನಡೆಯುತ್ತಿದೆ. ಅರ್ಜಿ ಸಲ್ಲಿಸಲು ಸೆ. 25 ಕೊನೆಯ ದಿನವಾ ಗಿದೆ. ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆ ಸಹಿತ ಯಾವುದೇ ಗೊಂದಲಕ್ಕೆ ಪರಿಹಾರ ಕೇಳಿ ಕೇಂದ್ರೀಕೃತ ದಾಖಲಾತಿ ಘಟಕ (ಸಿಎಸಿ)ಕ್ಕೆ ಕರೆ ಮಾಡಿದರೇ ಸ್ವೀಕರಿಸುವವರೇ ಇಲ್ಲ. ಕರೆ ಸ್ವೀಕರಿಸಿದರೂ ತಾಳ್ಮೆಯಿಂದ ಉತ್ತರ ನೀಡುತ್ತಿಲ್ಲ. ಎಲ್ಲವನ್ನು ವೆಬ್‌ಸೈಟ್‌ನಲ್ಲೇ ನೋಡಿಕೊಳ್ಳಿ ಎಂಬ ಬೇಜವಾಬ್ದಾರಿಯ ಉತ್ತರ ನೀಡುತ್ತಿದ್ದಾರೆ ಎಂದು ಆಕಾಂಕ್ಷಿಗಳು ಆರೋಪಿಸಿದ್ದಾರೆ.

ರಾಜು ಖಾರ್ವಿ ಕೊಡೇರಿ

Trending videos

Back to Top