CONNECT WITH US  

6 ವಿವಿಗಳಲ್ಲಿ ಕುಲಪತಿಗಳ ಹುದ್ದೆ ಖಾಲಿ..ಖಾಲಿ..!

ಬೆಂಗಳೂರು: ರಾಜ್ಯದ ಪ್ರಮುಖ ಆರು ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳಿಲ್ಲದೆ ಹಂಗಾಮಿ ಕುಲಪತಿಗಳೇ ಆಡಳಿತ ಯಂತ್ರ ನಡೆಸುತ್ತಿದ್ದಾರೆ. ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಹಗ್ಗ- ಜಗ್ಗಾಟದಿಂದಾಗಿ ಕುಲಪತಿ ನೇಮಕ ಪ್ರಕ್ರಿಯೆ
ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಪಟ್ಟಿಗೆ ರಾಜ್ಯಪಾಲರು ಸಹಿ ಹಾಕುತ್ತಿಲ್ಲ. ಹಾಗೆಯೇ ರಾಜ್ಯಪಾಲರು ವಾಪಸ್‌ ಕಳುಹಿಸಿದ ಹೆಸರನ್ನೇ ಸರ್ಕಾರ ಮತ್ತೆ ಮತ್ತೆ ಸಲ್ಲಿಸುತ್ತಿದೆ.

ಬೆಂಗಳೂರು, ಮೈಸೂರು ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಸಂಬಂಧ ಪ್ರತ್ಯೇಕ ಶೋಧನಾ ಸಮಿತಿ ರಚನೆ ಮಾಡಲಾಗಿದೆ. ಮೂರು ಶೋಧನಾ ಸಮಿತಿಗಳು ಪ್ರತ್ಯೇಕವಾಗಿ ಸಭೆ ಸೇರಿ, ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಜೇಷ್ಠತೆಯ ಆಧಾರದಲ್ಲಿ ಅರ್ಹತಾ ಪಟ್ಟಿಯನ್ನು ಸರ್ಕಾರಕ್ಕೆ ಶಿಫಾರಸಿನ
ಮೂಲಕ ಸಲ್ಲಿಸಿವೆ. ಸರ್ಕಾರವು ಆ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದೆ. ಆದರೆ, ರಾಜ್ಯಪಾಲರು ಸರ್ಕಾರ ಸಲ್ಲಿಸಿರುವ ಯಾವ ಪಟ್ಟಿಗೂ ಹಸಿರು ನಿಶಾನೆ ತೋರಿಲ್ಲ. ಬೇರೆ ಪಟ್ಟಿಯನ್ನು ನೀಡುವಂತೆ ಸೂಚಿಸಿದ್ದಾರೆ. ಬೇರೆ ಪಟ್ಟಿ ಯಾಕೆ ಸಲ್ಲಿಸಬೇಕು ಎಂಬುದು ಸರ್ಕಾರದ ಧೋರಣೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ
ನಡುವೆ ಪತ್ರ ವ್ಯವಹಾರ ಕೂಡ ನಡೆದಿದೆ.

ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪೂರ್ಣಕಾಲಿಕ ಕುಲಪತಿ, ಕುಲಸಚಿವ ಹಾಗೂ ಮೌಲ್ಯಮಾಪನ ಕುಲಸಚಿವರಿಲ್ಲದೆ ಎರಡು ವರ್ಷ ಕಳೆದಿದೆ. ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗಳು ತೆರವುಗೊಂಡು ವರ್ಷ ಕಳೆದಿದೆ. ಮೂರ್‍ನಾಲ್ಕು ತಿಂಗಳಿಂದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿ ಬಿದ್ದಿದೆ. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿಯಾಗಿ
ಒಂದೂವರೆ ತಿಂಗಳು ಕಳೆದಿದೆ. ಇನ್ನು, ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಮಾನ್ಯತೆ ನೀಡುವ, ಅದರ ನಿರ್ವಹಣೆ ಮಾಡುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ತಿಂಗಳಿಂದ ಕುಲಪತಿ ಹುದ್ದೆಗೆ ಕಾಯಂ ನೇಮಕಾತಿಯಾಗಿಲ್ಲ.

ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಹಂಗಾಮಿ ಕುಲಪತಿಗಳೇ ಕಾರ್ಯಭಾರ ನಡೆಸುತ್ತಿದ್ದಾರೆ. ಆಡಳಿತಾತ್ಮಕವಾದ ಯಾವುದೇ ನಿರ್ಧಾರವನ್ನು ಹಂಗಾಮಿ ಕುಲಪತಿಗಳು ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿವಿಯ ಸಿಂಡಿಕೇಟ್‌ ಹಾಗೂ ವಿದ್ಯಾವಿಷಯಕ ಪರಿಷತ್‌ ಸಭೆ ಕೂಡ ಕುಲಪತಿ ಅನುಪಸ್ಥಿತಿಯಲ್ಲೇ ನಡೆಯುತ್ತಿದೆ.

ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ: ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ಸೇರಿ ರಾಜ್ಯದಲ್ಲಿ 48 ವಿಶ್ವವಿದ್ಯಾಲಯಗಳಿವೆ. ಸರ್ಕಾರಿ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರೇ ಕುಲಾಧಿಪತಿಗಳಾಗಿರುತ್ತಾರೆ. ಕುಲಪತಿ ನೇಮಕಕ್ಕೂ ಅಂತಿಮ ಸಹಿ ರಾಜ್ಯಪಾಲರೇ ಹಾಕಬೇಕು. ಆದರೆ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಕುಲಾಧಿಪತಿ, ಕುಲಪತಿ ನೇಮಕ
ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಸೇರಿ ರಾಜ್ಯದ ಪ್ರಮುಖ 6 ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳೇ ಇಲ್ಲದಿರುವುದರಿಂದ ಶೈಕ್ಷಣಿಕ ಗುಣಮಟ್ಟಕ್ಕೂ ಇದು ಹೊಡೆತ ಬೀಳುವ ಸಾಧ್ಯತೆ ಇದೆ.

Trending videos

Back to Top