CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವರ್ಷಾಂತ್ಯಕ್ಕೆ ಕಾಂಗ್ರೆಸ್‌ ಸಾಧನಾ ಯಾತ್ರೆ

ಬೆಂಗಳೂರು: ರಾಜ್ಯ ಬಿಜೆಪಿ ನವೆಂಬರ್‌ನಲ್ಲಿ ಹಮ್ಮಿಕೊಂಡಿರುವ ಪರಿವರ್ತನಾ ಯಾತ್ರೆಗೆ ಪರ್ಯಾಯವಾಗಿ ಕೆಪಿಸಿಸಿವತಿಯಿಂದ ಕಾಂಗ್ರೆಸ್‌ ಸಾಧನಾ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಗುರುವಾರ ದೆಹಲಿಯಲ್ಲಿ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾಧನಾ ಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ.

ಕರ್ನಾಟಕದ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಎಲ್ಲರೂ ಒಟ್ಟಾಗಿ ಹೋಗಿ ಗೊಂದಲಗಳು ಆಗದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹಿಮಾಚಲ ಮತ್ತು ಗುಜರಾತ್‌ ಚುನಾವಣೆ ನಂತರ ರಾಹುಲ್‌ ಗಾಂಧಿ ಕರ್ನಾಟಕದ ನಾಯಕರೊಂದಿಗೆ ಮತ್ತೂಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಹುಲ್‌ ಗಾಂಧಿ ಜೊತೆಗಿನ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ತಲುಪಿಸಲು ಡಿಸೆಂಬರ್‌ ಮತ್ತು ಜನವರಿಯಲ್ಲಿ  ಸಾಧನಾ ಯಾತ್ರೆ ಕೈಗೊಂಡು ಜನರಿಗೆ ಸರ್ಕಾರದ ಸಾಧನೆಗಳನ್ನು ತಲುಪಿಸಲಾಗುವುದು ಎಂದು  ಹೇಳಿದರು. ನನ್ನ ನೇತೃತ್ವದಲ್ಲಿಯೇ 2018 ರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಾರಿ ಆದಷ್ಟು ಬೇಗ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತಂತೆಯೂ ಚರ್ಚೆ ನಡೆದಿದೆ.ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.  224 ಕ್ಷೇತ್ರಗಳಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ನಾನೇ ಯಾತ್ರೆ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ 54 ಸಾವಿರ ಬೂತ್‌ ಕಮಿಟಿಗಳನ್ನು ಮಾಡಿದ್ದು, ಮನೆ ಮನೆಗೂ ಕಾಂಗ್ರೆಸ್‌ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸರ್ಕಾರದ ಸಾಧನೆಗಳನ್ನು ಒಳಗೊಂಡಿರುವ ಒಂದೂವರೆ ಕೋಟಿ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಬೂತ್‌ ಮಟ್ಟದ ಕಾರ್ಯಕರ್ತರು ಜನರಿಗೆ ಪುಸ್ತಕಗಳನ್ನು ಹಂಚುವ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂಪ್ಪ ವಿರುದ್ಧ ಹರಿಹಾಯ್ದಿದ್ದು, ಜೈಲಿಗೆ ಹೋಗಿ ಬಂದಿರುವ ಅಮಿತ್‌ ಷಾ ಮತ್ತು ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ. ಅಮಿತ್‌ ಷಾ ಮತ್ತು ರಾಜ್ಯ ಬಿಜೆಪಿ ನಾಯಕರು ಹತಾಶರಾಗಿ ರಾಜ್ಯ ಸರ್ಕಾರದ ವಿರುದ್ಧ ಆಧಾರ ರಹಿತ ಆರೋಪ ಆರೋಪ ಮಾಡುತ್ತಿದ್ದಾರೆ. ಅವರು ಆರೋಪ ಮಾಡಿದ್ದಾರೆ ಎಂದು ಈಗಿನ ಕೇಂದ್ರ ಸರ್ಕಾರ ಭ್ರಷ್ಟ ಸರ್ಕಾರ ಎಂದು ದಾಖಲೆ ಇಲ್ಲದೇ ಆರೋಪ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಸುಳ್ಳು ಹೇಳುವುದನ್ನೇ ಕೆಲಸ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಡಿ ನೊಟಿಫಿಕೇಶನ್‌ ಮಾಡಿಲ್ಲ. ರಾಜ್ಯ ಸರ್ಕಾರ ಎಸಿಬಿಯನ್ನು ದುರುಪಯೋಗ ಮಾಡಿಸಿಕೊಂಡಿದೆ ಎನ್ನುವ ಬಗ್ಗೆ ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.

ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ: ಮಹದಾಯಿ ವಿವಾದ ಬಗೆ ಹರಿಸಲು ಬಿಜೆಪಿ ನಾಯಕರು ಮುಂದಾಗುತ್ತಿಲ್ಲ ಎಂದು ಸಿಎಂ ದೂರಿದ್ದಾರೆ. ಗೋವಾ ಮುಖ್ಯಮಂತ್ರಿಗೆ ಹಲವಾರು ಬಾರಿ ಪತ್ರ ಬರೆದು ಮಾತುಕತೆ ನಡೆಸಲು ಮನವಿ ಮಾಡಿದ್ದೆ. ರಾಜ್ಯ ಬಿಜೆಪಿ ನಾಯಕರು ಅವರೊಂದಿಗೆ ಮಾತುಕತೆ ನಡೆಸಿ ಒಪ್ಪಿಸುವುದಾಗಿ ಹೇಳಿದ್ದರು. ಬಹುಮತ ಪಡೆದ ಸರ್ಕಾರ ಅಲ್ಲಿನ ಪ್ರತಿಪಕ್ಷವನ್ನು ಒಪ್ಪಿಸುವ ಕೆಲಸ ಮಾಡಬೇಕು. ಅದನ್ನೇ ಕಾರಣ ಮಾಡಿಕೊಳ್ಳಬಾರದು ಎಂದು ಹೆಳಿದರು.

ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಾದ ಎಸ್‌.ಆರ್‌. ಪಾಟೀಲ್‌, ದಿನೇಶ್‌ ಗುಂಡೂರಾವ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಂಸದರಾದ ಎಂ.ವೀರಪ್ಪ ಮೋಯಿಲಿ, ಆಸ್ಕರ್‌ ಫ‌ರ್ನಾಂಡಿಸ್‌ ಪಾಲ್ಗೊಂಡಿದ್ದರು.

ಸಿಎಂ ನೇತೃತ್ವದಲ್ಲಿ ಚುನಾವಣೆ:ಪರಮೇಶ್ವರ್‌
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲು ಹೈ ಕಮಾಂಡ್‌ ಸೂಚಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಳಿದ್ದಾರೆ. ರಾಹುಲ್‌ ಗಾಂಧಿ ಜೊತೆಗಿನ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನಾಯಕತ್ವವನ್ನು ನಾವು ಒಪ್ಪಿಕೊಂಡಿದ್ದೇವೆ. ಹಾಲಿ ಶಾಸಕರಿಗೆ ಟಿಕೆಟ್‌ ನೀಡುವುದು ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವ ಕುರಿತಂತೆ ಚರ್ಚೆ ನಡೆದಿಲ್ಲ. ಎರಡು ತಿಂಗಳ ನಂತರ ಮತ್ತೂಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರಮೇಶ್ವರ್‌ ಹೇಳಿದರು.

Back to Top