CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಲಿಂಗಾಯತಕ್ಕಾಗಿ ಸಮಿತಿ ಮೊದಲ ಬಾರಿಗೆ ಸಭೆಯಲ್ಲಿ ಬಿಜೆಪಿ ಭಾಗಿ

ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಕುರಿತಂತೆ ಎರಡೂ ಬಣಗಳ ನಡುವೆ ಹೊಂದಾಣಿಕೆ ಮೂಡಿದ್ದು, ಸಭೆಗೆ ಬಿಜೆಪಿ ನಾಯಕರಾದ ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ ಹಾಗೂ ಶಂಕರ ಬಿದರಿ ಪಾಲ್ಗೊಂಡಿದ್ದು ಹೊಸ ತಿರುವು ಪಡೆದಂತಾಗಿದೆ.

ಗುರುವಾರ ಬೆಂಗಳೂರಿನ ಖಾಸಗಿ ಹೊಟೆಲ್‌ನಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಎರಡೂ ಬಣಗಳ ಕಾನೂನು ತಜ್ಞರು ಹಾಗೂ ಮುಖಂಡರು ಪಾಲ್ಗೊಂಡು ತಮ್ಮದೇ ವಾದ ಮಂಡಿಸಿದ್ದಾರೆ. ಆದರೆ, ಪ್ರತ್ಯೇಕ ಧರ್ಮದ ಬೇಡಿಕೆಗೆ ಲಿಂಗಾಯತ ಧರ್ಮ ಹೋರಾಟಗಾರರು ಅವಸರ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಕೋರೆ -ಎಂಬಿಪಿ ನಡುವೆ ಮಾತಿನ ಚಕಮಕಿ: ಲಿಂಗಾಯತ ,ವೀರಶೈವಕ್ಕಿಂತ ಹೇಗೆ ಭಿನ್ನ ಎನ್ನುವ ಕುರಿತಂತೆ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ್‌ ವಿವರಣೆ ನೀಡುವ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಆಕ್ಷೇಪ ಎತ್ತಿದರು ಎನ್ನಲಾಗಿದೆ. ಅವರ ಆಕ್ಷೇಪಕ್ಕೆ ಸಚಿವ ಎಂ.ಬಿ. ಪಾಟೀಲ್‌ ಏಕ ವಚನದಲ್ಲಿ ಮಾತನಾಡಿದ್ದಾರೆಂದು ಹೇಳಲಾಗಿದ್ದು, ಈ ಸಂದರ್ಭದಲ್ಲಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ತಿಳಿದು ಬಂದಿದೆ.

ಅವಸರ ಏಕೆ ? ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ ಆಗಬೇಕು ಎನ್ನುವುದರ ಬಗ್ಗೆ ಎರಡೇ ತಿಂಗಳಲ್ಲಿ ಆಗಬೇಕು ಎನ್ನುವ ಅವಸರ ಏಕೆ ಎಂದು ಕೋರೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಅವಸರದ ಹಿಂದೆ ಧರ್ಮ ಸ್ಥಾಪನೆಗಿಂತ ರಾಜಕೀಯ ಹಿತಾಸಕ್ತಿ ಇದೆ ಎಂದು ವಾದಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಎಂ.ಬಿ. ಪಾಟೀಲ್‌ ಸಮಜಾಯಿಷಿ ನೀಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸು ಮಾಡಲು ಎಲ್ಲರೂ ಒಗ್ಗಟ್ಟಾಗಿ ಬರುವಂತೆ ಹೇಳಿದ್ದಾರೆ. ಇದುವರೆಗೂ ಯಾವ ಮುಖ್ಯಮಂತ್ರಿಯೂ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿರಲಿಲ್ಲ. ಹೀಗಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಪ್ರಕರಣ ಇತ್ಯರ್ಥ ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ  ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಾರೆ ಎಂದು ಹೇಳಿದ್ದಾರೆ.

ಇದೇ ಮುಖ್ಯಮಂತ್ರಿ ಶಿಫಾರಸ್ಸು ಮಾಡಬೇಕೆಂಬ ಅವಸರ ಏಕೆ ? ಮುಂದೆ ಬರುವವರೂ ಶಿಫಾರಸ್ಸು ಮಾಡಬಹುದಲ್ಲ ಎಂದು ಕೋರೆ ಪ್ರಶ್ನಿಸಿದ್ದು, ನೀವು ಚುನಾವಣೆ ಅಜೆಂಡಾ ಇಟ್ಟುಕೊಂಡು ಈ ಹೋರಾಟ ಮಾಡುತ್ತಿದ್ದೀರಿ ಎಂದು ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಅವರ ಮಾತಿಗೆ ಎಂ.ಬಿ ಪಾಟೀಲ್‌ ಆಕ್ರೋಶಗೊಂಡಿದ್ದರು ಎನ್ನಲಾಗಿದ್ದು, ಇಬ್ಬರು ನಾಯಕರ ವಾದವನ್ನು ತಡೆಯಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌. ಪಾಟೀಲ್‌ ಮಧ್ಯ ಪ್ರವೇಶಿಸಿ ಶಾಂತಗೊಳಿಸಿದರು ಎಂದು ತಿಳಿದು ಬಂದಿದೆ.

ಗುರುವಾರ ನಡೆದ ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್‌, ವಿನಯ ಕುಲಕರ್ಣಿ, ಡಾ. ಶರಣ ಪ್ರಕಾಶ್‌ ಪಾಟೀಲ್‌, ಈಶ್ವರ ಖಂಡ್ರೆ, ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ತಿಪ್ಪಣ್ಣ, ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್‌, ನಿವೃತ್ತ ಅಧಿಕಾರಿಗಳಾದ ಎಸ್‌.ಎಂ. ಜಾಮದಾರ್‌, ಶಂಕರ ಬಿದರಿ, ಬಿ.ಎಸ್‌. ಪಾಟೀಲ್‌, ಶಿಕ್ಷಣ ತಜ್ಞರಾದ ಪ್ರೊ. ವೀರಣ್ಣ ರಾಜೂರ್‌, ಪ್ರೊ. ಚಂದ್ರಶೇಖರ, ಪ್ರೊ. ನಂದೀಶ್‌ ಅಂಚೆ, ಕಾನೂನು ತಜ್ಞರಾದ ಶಿವಕುಮಾರಸ್ವಾಮಿ ಹಾಗೂ ಸವದತ್ತಿ ಮಠ ಹಾಜರಿದ್ದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಗೈರು ಹಾಜರಾಗಿದ್ದರು.

ತಜ್ಞರ ಸಮಿತಿ ರಚನೆಗೆ ನಿರ್ಧಾರ
ವೀರಶೈವ ಮತ್ತು ಲಿಂಗಾಯತ ನಾಯಕರ ಎರಡೂ ಬಣಗಳು ಸತತ ನಾಲ್ಕು ಸಭೆಗಳನ್ನು ನಡೆಸಿ ಕಡೆಗೂ ವಾಸ್ತವಾಂಶ ತಿಳಿಯಲು ತಜ್ಞರ ಸಮಿತಿ ರಚನೆಗೆ ನಿರ್ಧರಿಸಿದ್ದಾರೆ. ಎರಡೂ ಬಣಗಳಿಂದ ತಲಾ ಐವರು ಕಾನೂನು, ಇತಿಹಾಸ, ಸಾಹಿತ್ಯ ಕ್ಷೇತ್ರದ ತಜ್ಞರನ್ನು ಒಳಗೊಂಡ ಹತ್ತು ಜನರ ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಸಮಿತಿಗೆ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮೂರು ದಿನದಲ್ಲಿ ತಜ್ಞರ ಸಮಿತಿ ರಚಿಸಿ ಹತ್ತು ದಿನದಲ್ಲಿ ಸಮಿತಿ ಪ್ರತ್ಯೇಕ ಧರ್ಮ ಬೇಡಿಕೆಗೆ ಕಾನೂನಿನ ಸಾಧ್ಯತೆಗಳು ಹಾಗೂ ವೀರಶೈವ ಮತ್ತು ಲಿಂಗಾಯತ ಹೆಸರಿನ ಪ್ರಸ್ತಾವನೆ ಮಾಡುವ ಕುರಿತಂತೆ ವರದಿ ನೀಡಲು ಸಮಿತಿಗೆ ಸೂಚಿಸಲು ನಿರ್ಧರಿಸಲಾಗಿದೆ.

ಸತತ ಮೂರು ಗಂಟೆಗಳ ಕಾಲ ಎಲ್ಲರೂ ಚರ್ಚೆ ಮಾಡಿ, ವೀರಶೈವ ಲಿಂಗಾಯತರು ಎಲ್ಲರೂ ಒಟ್ಟಾಗಿ ಹೋಗಬೇಕು, ಸಮಾಜ ಒಡೆಯದಂತೆ ನೋಡಿಕೊಳ್ಳಬೇಕು. ಪ್ರತ್ಯೇಕ ಧರ್ಮದ ಮಾನ್ಯತೆ ಕುರಿತಂತೆ ಹತ್ತು ಜನರ ತಜ್ಞರ ಸಮಿತಿ ರಚನೆ ಮಾಡಿ ಅವರ ವರದಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇಂದಿನ ಸಭೆಯಲ್ಲಿ ಯಾವುದೇ ಗೊಂದಲ ಇಲ್ಲ
- ಶಾಮನೂರು ಶಿವಶಂಕರಪ್ಪ, ವೀರಶೈವ ಮಹಾಸಭೆ ಅಧ್ಯಕ್ಷ. 

Back to Top