CONNECT WITH US  

ಮಳೆ ಕಣ್ಣಾಮುಚ್ಚಾಲೆ: ರೈತರಿಗೆ ಬರ-ನೆರೆ ಭೀತಿ!

ಬಾಗಲಕೋಟೆಯ ಹಲವೆಡೆ ಈರುಳ್ಳಿ ಬೆಳೆ ಹಾಳಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕಣ್ಣಾಮುಚ್ಚಾಲೆಯಿಂದ ರೈತರಿಗೆ ಈ ಬಾರಿ ಎರಡೆರಡು ಬರೆ ಬಿದ್ದಿದೆ. ಒಂದು ಬರದ ರೂಪದಲ್ಲಿ ಮತ್ತೂಂದು ನೆರೆ ಹಾವಳಿ!

ಮುಂಗಾರು ಹಂಗಾಮಿನ ಮೊದಲೆರಡು ತಿಂಗಳು ಬರಕ್ಕೆ ತುತ್ತಾದ ರೈತರು, ಸ್ವಲ್ಪ ಮಳೆಯಿಂದ ಚೇತರಿಸಿ ಕೊಳ್ಳುವಷ್ಟರಲ್ಲಿ ನೆರೆಗೆ ತುತ್ತಾಗಿದ್ದಾರೆ. ಹಾಗಾಗಿ ಈ ಸಲ ಬರ ಮತ್ತು ನೆರೆ ಎರಡೂ ಕಡೆಯಿಂದ ಹೊಡೆತ ಬಿದ್ದಿದ್ದು, ಇದು ಕೃಷಿ ಉತ್ಪಾದನೆ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.

ಜೂನ್‌-ಜುಲೈನಲ್ಲಿ ಮಳೆ ಕೈಕೊಟ್ಟಿದ್ದರಿಂದ ಕೃಷಿ ವಿಜ್ಞಾನಿಗಳ ಸಲಹೆ ಮೇರೆಗೆ ರೈತರು ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಪರ್ಯಾಯ ಬೆಳೆಗಳತ್ತ ಮುಖ ಮಾಡಿದರು. ಲಕ್ಷಾಂತರ ಹೆಕ್ಟೇರ್‌ ಪ್ರದೇಶಗಳಲ್ಲಿ ಪರ್ಯಾಯ ಬೆಳೆ ಬಿತ್ತನೆ ಮಾಡಲಾಯಿತು. ಆದರೆ, ಈಗ ರಾಜ್ಯದ ಅನೇಕ ಭಾಗಗಳಲ್ಲಿ ಅತಿವೃಷ್ಟಿಯಿಂದ ಸುಮಾರು 15 ಸಾವಿರ ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದ ಬೆಳೆ ನೆರೆಗೆ ತುತ್ತಾಗಿದೆ.

ಬೆಳಗಾವಿ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ರಾಯಚೂರು ಸೇರಿ ಹಲವಾರು ಜಿಲ್ಲೆಗಳಲ್ಲಿ ಭತ್ತ, ಹತ್ತಿ, ಮುಸುಕಿನಜೋಳ ಅತಿವೃಷ್ಟಿಗೆ ತುತ್ತಾಗುವ ಭೀತಿಯಲ್ಲಿವೆ. ಮಳೆ ಇನ್ನೂ ಒಂದು ವಾರ ಇದೇ ರೀತಿ ಮುಂದುವರಿದರೆ, ಸಂಪೂರ್ಣ ಬೆಳೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಸುಮಾರು 62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಪೈಕಿ 10.60 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ಮಳೆ ಅಭಾವದಿಂದ ಬಾಧಿತವಾಗಿತ್ತು. ಮಳೆ ಕೊರತೆಯಿಂದ ಶೇ. 20ರಿಂದ 25ರಷ್ಟು ಉತ್ಪಾದನೆ ಕುಂಠಿತವಾಗುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿತ್ತು. ಆದರೆ, ಈಗ ಅತಿಯಾದ ಮಳೆಯಿಂದ 15 ಸಾವಿರ ಹೆಕ್ಟೇರ್‌ ಪ್ರದೇಶ ನೆರೆ ಹಾನಿ ಭೀತಿ ಎದುರಿಸುತ್ತಿದೆ.

ದೀರ್ಘಾವಧಿ ಮುನ್ಸೂಚನೆ ನಿಖರವಾಗಿಲ್ಲ: ಸಾಮಾನ್ಯವಾಗಿ ದೀರ್ಘಾವಧಿ, ಮಧ್ಯಮಾವಧಿ ಮತ್ತು ಅಲ್ಪಾವಧಿ ಎಂಬ 3 ಪ್ರಕಾರಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗುತ್ತದೆ. ದೀರ್ಘಾವಧಿ ಮುನ್ಸೂಚನೆಯ ನಿಖರತೆ ಶೇ.50ರಷ್ಟು ಮಾತ್ರ. ಆದರೆ, ಈ ಮುನ್ಸೂಚನೆ ಮೇಲೆಯೇ ದೇಶದ ಬಹುತೇಕ ಕೃಷಿ ಚಟುವಟಿಕೆ ನಿರ್ಧಾರವಾಗುತ್ತದೆ. ಭಾರತ ಶೇ.80ರಷ್ಟು ಸಮುದ್ರದಿಂದ ಆವೃತವಾಗಿದೆ. ಹವಾಮಾನ ವೈಪರೀತ್ಯಗಳು ನಡೆಯುವುದು ಸಮುದ್ರದ ಮೇಲೆ. ಆದರೆ, ನಮ್ಮಲ್ಲಿ ಸಮುದ್ರದಲ್ಲಿ ಹವಾಮಾನ ವ Þಪನ ಕೇಂದ್ರಗಳು ಮತ್ತು ಅದರ ಮಾಹಿತಿ ನಿರೀಕ್ಷಿತ ಮಟ್ಟದಲ್ಲಿ ನಿಖರವಾಗಿ ಸಿಗುವುದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ಒಪ್ಪಿಕೊಳ್ಳುತ್ತಾರೆ. 

ಮಳೆಗೆ ನೆಲಕಚ್ಚಿದ ಬೆಳೆ
ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಜನ ಜೀವನ ತತ್ತರಗೊಂಡಿದೆ. ಮಳೆಯ ನೀರು ವಿವಿಧೆಡೆ ರೈತರ ಜಮೀನಿಗೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ಹಾನಿಗೀಡಾಗಿದೆ. ಹಲವು ಮನೆಗಳು ನೆಲ ಕಚ್ಚಿವೆ. ಮಳೆಯ ಅವಾಂತರ ಜನರನ್ನು ತಲ್ಲಣಗೊಳ್ಳುವಂತೆ ಮಾಡುತ್ತಿದ್ದು, ಇನ್ನೂ ಆರ್ಭಟ ನಿಂತಿಲ್ಲ. ಕಳೆದ 3 ವರ್ಷ ಬರದ ಬಿಸಿ ಅನುಭವಿಸಿದ್ದ ರೈತರು ಈ ವರ್ಷ ಉತ್ತಮ ಬೆಳೆ ಕಂಡಿದ್ದರು. ಫಸಲು ಕೈಗೆ ಬರುವ ಹಂತಕ್ಕೆ ಬಂದಿರುವಾಗ ಹಿಂಗಾರು ಮಳೆಗಳ ಆರ್ಭಟದಿಂದ ಬೆಳೆ ನೆಲ ಕಚ್ಚಿದೆ.

ಅರ್ಧ ಗಂಟೆ ನಿಂತ ರೈಲು: ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ರಾಣಿಬೆನ್ನೂರ ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ಬಳಿ ರೈಲ್ವೆ ಹಳಿಯ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ಪರಿಣಾಮ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟ ಪ್ಯಾಸೆಂಜರ್‌ ರೈಲು ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತಿತ್ತು. 

ಕೃಷಿ ಬೆಳೆಗೆ ತಕ್ಕಂತೆ ಮಳೆ ಬರುವ ಕಾಲ ಈಗ ಮುಗಿದಿದೆ. ಮಳೆ ಕ್ಯಾಲೆಂಡರ್‌ ನೋಡಿಕೊಂಡು ಕೃಷಿ ಚಟುವಟಿಕೆಗಳನ್ನು
ಕೈಗೆತ್ತಿಕೊಳ್ಳುವ ಕಾಲ ಈಗಿಲ್ಲ. ಮಳೆ ಬಂದಾಗ ಅದನ್ನು ಹಿಡಿದಿಟ್ಟುಕೊಂಡು ನೀರಿನ ಲಭ್ಯತೆಗೆ ತಕ್ಕಂತೆ ನಾವು ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವ ಅವಶ್ಯಕತೆ ಇದೆ.

- ಡಾ.ಪ್ರಕಾಶ ಕಮ್ಮರಡಿ,
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ

- ವಿಜಯಕುಮಾರ್‌ ಚಂದರಗಿ


Trending videos

Back to Top