CONNECT WITH US  

ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್‌ ದಾಖಲೆ 

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಇತಿಹಾಸದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಡಾ. ಜಿ.ಪರಮೇಶ್ವರ್‌ ಯಶಸ್ವಿಯಾಗಿ ಏಳು ವರ್ಷ ಪೂರೈಸಿದ್ದಾರೆ. ಈ ಮೂಲಕ ಪಕ್ಷದ ಇತಿಹಾಸದಲ್ಲಿ ದಾಖಲೆ ಬರೆದಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸತತ 9 ವರ್ಷ ಅಧಿಕಾರದಿಂದ ವಂಚಿತವಾಗಿದ್ದ ಪಕ್ಷಕ್ಕೆ 2010ರ ಡಿಸೆಂಬರ್‌ 27ರಂದು ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್‌ ಅಧಿಕಾರ ವಹಿಸಿಕೊಂಡಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದವರು.

ಅಧಿಕಾರದಿಂದ ವಂಚಿತವಾಗಿದ್ದ ಪಕ್ಷಕ್ಕೆ ಮತ್ತೆ ಹುಮ್ಮಸ್ಸು ನೀಡಲು ಪರಮೇಶ್ವರ್‌ ಎಲ್ಲರನ್ನೂ ಒಟ್ಟುಗೂಡಿಸಿ ಕರೆದೊಯ್ಯಲು ಆರಂಭದಲ್ಲಿ ಅನೇಕ ಯಾತ್ರೆಗಳನ್ನು ಹಮ್ಮಿಕೊಂಡರು. ಕಾಂಗ್ರೆಸ್‌ ನಡಿಗೆ ಜನರ ಬಳಿಗೆ, ಕಾಂಗ್ರೆಸ್‌ ನಡಿಗೆ ಕೃಷ್ಣೆಯ ಕಡೆಗೆ, ಕಾಂಗ್ರೆಸ್‌ ನಡಿಗೆ ಸಾಮರಸ್ಯದ ಕಡೆಗೆ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡು 2013ರಲ್ಲಿ ಕಾಂಗ್ರೆಸ್‌ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದರು. ಆದರೆ, ತಾವೇ ಚುನಾವಣೆಯಲ್ಲಿ ಸೋತು ಅಧಿಕಾರದಿಂದ ವಂಚಿತರಾಗುವಂತಾಯಿತು.

ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಅವರ ಸಂಪುಟದಲ್ಲಿ ಪರಮೇಶ್ವರ್‌ ಸಚಿವರಾಗಲು ಸಾಕಷ್ಟು ಹೋರಾಟವನ್ನೇ ಮಾಡಬೇಕಾಯಿತು. ಕೆಪಿಸಿಸಿ ಅಧ್ಯಕ್ಷರಾದವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂಬ ಬೇಡಿಕೆ ಆರಂಭದಿಂದಲೇ ಕೇಳಿ ಬಂದರೂ, ಸಿಎಂ ಸಿದ್ದರಾಮಯ್ಯ ಜಾಣತನದಿಂದ ಮತ್ತೂಂದು ಶಕ್ತಿ ಕೇಂದ್ರ ಹುಟ್ಟಿಕೊಳ್ಳಬಾರದು ಎನ್ನುವ ಕಾರಣಕ್ಕೆ ಪರಮೇಶ್ವರ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯದಂತೆ ನೋಡಿಕೊಂಡರು.

ಪರಮೇಶ್ವರ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರೂ, ಪಕ್ಷದ ಮೇಲೆ ತಮ್ಮದೇ ಹಿಡಿತ ಸಾಧಿಸುವಷ್ಟು ಪ್ರಭಾವ ಬೆಳೆಸಿಕೊಳ್ಳಲಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ನೇರವಾಗಿ ಎದುರಿಸಲೂ ಆಗದೇ ಪಕ್ಷದ ಅಧ್ಯಕ್ಷರಾಗಿ ಅವರ ಮೇಲೆ ಹಿಡಿತ ಸಾಧಿಸುವಷ್ಟು ಶಕ್ತಿಯನ್ನೂ ಪಡೆಯಲಿಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಹೀನಾಯ ಸೋಲು ಕಾಂಗ್ರೆಸ್‌ ಹೈಕಮಾಂಡ್‌ ಶಕ್ತಿಯನ್ನೂ ಉಡುಗಿಸಿದ್ದರಿಂದ ಸಿಎಂ ಸಿದ್ದರಾಮಯ್ಯ ಕ್ರಮೇಣ ಸರ್ಕಾರದ ಮೇಲೆ ತಮ್ಮ ಹಿಡಿತ ಸಾಧಿಸಿ, ಪಕ್ಷವನ್ನು ಲೆಕ್ಕಕ್ಕೆ ಇಟ್ಟುಕೊಳ್ಳದಂತಾದರು. ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲದಂತಾಯಿತು ಎಂಬ ಆರೋಪ ಕೇಳಿ ಬಂದಾಗ
ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್‌ ಎಲ್ಲ ಸಚಿವರೂ ತಿಂಗಳಲ್ಲಿ ಒಂದು ಬಾರಿಯಾದರೂ ಕೆಪಿಸಿಸಿ ಕಚೇರಿಗೆ ಆಗಮಿಸಿ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಬೇಕೆಂದು ಸಚಿವರಿಗೆ 3 ಬಾರಿ ಪತ್ರ ಬರೆದರು. ಅದನ್ನು ಹಿರಿಯ ಸಚಿವರು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಪ್ರಥಮ ಬಾರಿ ಸಚಿವರಾದವರೂ ತಲೆ ಕೆಡಿಸಿಕೊಳ್ಳಲಿಲ್ಲ. ಜನಾರ್ದನ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನೇ ಕೆಪಿಸಿಸಿ ಕಚೇರಿಗೆ ಕರೆಯಿಸಿ, ಅರ್ಧ ಗಂಟೆ ಬಾಗಿಲು ಕಾಯುವಂತೆ ಮಾಡಿದ್ದರು.

ಪರಮೇಶ್ವರ್‌ಗೆ ಒಂದು ರೀತಿ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವಂತೆ ಅಧ್ಯಕ್ಷರಾಗಿದ್ದುಕೊಂಡೇ ಸರ್ಕಾರ ಸೇರುವ ಪ್ರಯತ್ನ ನಡೆಸಿ, ತಮಗರಿವಿಲ್ಲದೇ ತಾವೇ ಮುಖ್ಯಮಂತ್ರಿಯ ಅಡಿಯಲ್ಲಿ ಸಿಲುಕಿಕೊಳ್ಳುವಂತಾಯಿತು. ಅಧ್ಯಕ್ಷರಾಗಿದ್ದುಕೊಂಡೇ ಸರ್ಕಾರದಲ್ಲಿರುವವರನ್ನೂ ನಿಯಂತ್ರಿಸುವ ಶಕ್ತಿ ಬೆಳೆಸಿಕೊಂಡಿದ್ದರೆ, ಸಚಿವ ಸ್ಥಾನಕ್ಕಾಗಿ ಅಷ್ಟೊಂದು ಹರ ಸಾಹಸ ಪಡುವ ಪ್ರಮೇಯ ಬರುತ್ತಿರಲಿಲ್ಲ. ಗೃಹ ಸಚಿವರಾಗಿಯೂ ತಮ್ಮ ಸಲಹೆಗಾರರಾಗಿದ್ದ ಕೆಂಪಯ್ಯ ಅವರನ್ನು ಅಧಿಕಾರದಿಂದ ದೂರ ಇಡದಷ್ಟು ಅಸಹಾಯಕರಾಗಿ ಕಾರ್ಯ ನಿರ್ವಹಿಸಿದರು. ಆದರೆ, ಸೌಮ್ಯ ಸ್ವಭಾವದಿಂದಲೇ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿಗೂ ಬೇಸರವಾಗದಂತೆ ಕೆಂಪಯ್ಯರನ್ನು ದೂರ ಇಟ್ಟು ಸ್ವತಂತ್ರವಾಗಿ, ಗನ್‌ಮೆನ್‌ಗಳನ್ನೂ ಇಟ್ಟುಕೊಳ್ಳದೇ ಅಧಿಕಾರ ನಡೆಸುತ್ತಿರುವುದು. ರಾಜಕೀಯ ನಾಯಕನಿಗಿರುವ ಜಾಣತನವನ್ನು ತೋರಿಸುತ್ತದೆ.

ಈ ನಡುವೆ ದಲಿತ ಮುಖ್ಯಮಂತ್ರಿಯ ಕೂಗೆಬ್ಬಿಸಿ ಸಮುದಾಯದ ನಾಯಕರಂತೆ ಪ್ರತಿಬಿಂಬಿಸಿಕೊಳ್ಳುವ ಪ್ರಯತ್ನವನ್ನೂ ಸರಿಯಾಗಿ ನಿಭಾಯಿಸದೇ, ಅದೂ ದಾರಿ ತಪ್ಪುವಂತಾಯಿತು. 2018ರ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ರಾಜ್ಯಾಧ್ಯಕ್ಷರಾಗಿ
ಮುಂದುವರಿಯಲು ಗೃಹ ಸಚಿವರ ಹುದ್ದೆಯನ್ನೂ ಬಿಟ್ಟುಕೊಡುವಂತಾಯಿತು. ರಾಜ್ಯಾಧ್ಯಕ್ಷರಾಗಿಯೂ ಮುಂದುವರಿಯಲು ಮುಖ್ಯಮಂತ್ರಿಯ ಕೃಪೆಯೂ ಇದೆ ಎನ್ನಲಾಗುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಇಂಧನ ಸಚಿವ ಡಿ.ಕೆ.
ಶಿವಕುಮಾರ್‌ ರಾಜ್ಯಾಧ್ಯಕ್ಷರಾಗಿದರೆ, ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರೆ ಕಷ್ಟ ಎನ್ನುವ ಆತಂಕ ಅರಿತ ಸಿದ್ದರಾಮಯ್ಯ ಯಾವುದಕ್ಕೂ ಅಡ್ಡಿಯಾಗದ ಪರಮೇಶ್ವರ್‌ ಮುಂದುವರಿದರೆ ತಮಗೇನೂ ತೊಂದರೆಯಿಲ್ಲವೆಂಬ ಕಾರಣಕ್ಕೆ ಅವರನ್ನೇ
ಮುಂದುವರಿಸುವ ಪ್ರಸ್ತಾಪಕ್ಕೆ ಬೆಂಬಲಿಸಿದರು ಎನ್ನಲಾಗಿದೆ.

ಅಧ್ಯಕ್ಷರಾಗಿ ಅವರನ್ನೇ ಮುಂದುವರಿಸಿದರೂ, ಇಬ್ಬರು ಕಾರ್ಯಾಧ್ಯಕ್ಷರ ಹುದ್ದೆ ಸೃಷ್ಠಿಸಿ, ಉತ್ತರ ಮತ್ತು ದಕ್ಷಿಣ ಕರ್ನಾಟಕ ಭಾಗಕ್ಕೆ ಅವರನ್ನು ಉಸ್ತುವಾರಿ ಮಾಡಿರುವುದರಿಂದ ಅಧ್ಯಕ್ಷ ಹುದ್ದೆ ದಾಖಲೆಗಳಿಗೆ ಸಹಿ ಮಾಡುವುದಕಷ್ಟೇ ಸೀಮಿತ ಎನ್ನುವಂತಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ 7 ವರ್ಷ ದಾಖಲೆ ಬರೆದರೂ, ಪಕ್ಷದಲ್ಲಿ ತಮ್ಮನ್ನು ನಂಬಿದ ಕಾರ್ಯಕರ್ತರಿಗೆ, ಹಿಂಬಾಲಕರಿಗೆ ವಿಧಾನ ಪರಿಷತ್‌ ಸದಸ್ಯತ್ವ ಕೊಡಿಸುವಲ್ಲಿಯೂ ಪರದಾಡುವಂತಾಯಿತು. ತಮ್ಮನ್ನು ನಂಬಿದ ಶಾಸಕರಿಗೆ ಸಚಿವ ಸ್ಥಾನ ಕೊಡಿಸುವಲ್ಲಿಯೂ ಸೋತು ಪರಮೇಶ್ವರ್‌ ಅಸಹಾಯಕರಾಗಿ ಕುಳಿತುಕೊಳ್ಳುವಂತಾಯಿತು. 2013ರ ಚುನಾವಣೆಯಲ್ಲಿ ಸೋತು ಸಂಕಟ ಅನುಭವಿಸಿರುವ ಪರಮೇಶ್ವರ್‌ 2018ರ  ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಕೊರಟಗೆರೆಯಲ್ಲಿಯೇ ಸುತ್ತಾಡುತ್ತಿದ್ದಾರೆ. 

ಟಿಕೆಟ್‌ ಕೊಡಿಸುವ ಸ್ವಾತಂತ್ರ ಇದೆಯಾ?
ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಂತಲೂ ಪರಮೇಶ್ವರ್‌ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ, ಪಕ್ಷದ ಅಧ್ಯಕ್ಷರಾದವರು ತಾವಷ್ಟೇ ಗೆದ್ದು ಬಂದರೆ ಸಾಲದು. ತಮ್ಮ ನಾಯಕತ್ವಕ್ಕೆ ಜೈ ಎನ್ನಲು ಮೂವತ್ತು ಶಾಸಕರನ್ನಾದರೂ ಗೆಲ್ಲಿಸಿಕೊಂಡು ಬರಬೇಕು. ಆದರೆ, ಅಷ್ಟು ಜನರಿಗೆ ಟಿಕೆಟ್‌ ಕೊಡಿಸುವಷ್ಟು ಸ್ವಾತಂತ್ರ್ಯ ಪರಮೇಶ್ವರ್‌ ಅವರಿಗೆ ಇದೆಯಾ ಎನ್ನುವುದು ಕೂಡ ಪ್ರಶ್ನಾರ್ಹ. ಸುದೀರ್ಘ‌ ಅಧಿಕಾರದಲ್ಲಿದ್ದರೂ ಅಸಹಾಯಕತೆಯಿಂದಲೇ ದಾಖಲೆ ಮಾಡಿರುವುದು ವಿಪರ್ಯಾಸ. 

●ಶಂಕರ ಪಾಗೋಜಿ

Trending videos

Back to Top