CONNECT WITH US  

ಪೊಲೀಸ್‌ ಇಲಾಖೆಗಾಗಿಯೇ ರಾಜ್ಯದಲ್ಲಿ ಪ್ರತ್ಯೇಕ ವಿವಿ

ವಿಧಾನಪರಿಷತ್ತು: ಅಪರಾಧ ಪ್ರಕರಣಗಳ ಪತ್ತೆ ಹಾಗೂ ತನಿಖೆ, ವಿಧಿ ವಿಜ್ಞಾನ ಪ್ರಯೋಗಾಲಯದ ಉನ್ನತೀಕರಣ, ಕಾನೂನು-ಸುವ್ಯವಸ್ಥೆ ನಿರ್ವಹಣೆಯಲ್ಲಿ ಅತ್ಯಾಧುನಿಕ ತಂತ್ರ ಜ್ಞಾನದ ಅಳವಡಿಕೆ ಮತ್ತು ಕಲಿಕೆಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಇಲಾಖೆ ವತಿಯಿಂದ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಬಿಜೆಪಿಯ ತಾರಾ ಅನೂರಾಧ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ರೀತಿಯ ವಿಶ್ವವಿದ್ಯಾಲಯ ಪುಣೆ ಮತ್ತಿತರ ಕಡೆ ಇದೆ. ಅಲ್ಲೆಲ್ಲ ಹಿರಿಯ ಅಧಿಕಾರಿಗಳು ಹೋಗಿ ಕಾರ್ಯ ನಿರ್ವಹಣೆ ಬಗ್ಗೆ ಅಧ್ಯಯನ ಮಾಡಿ ಕೊಂಡು ಬಂದಿದ್ದಾರೆ. ವಿವಿಯ ಸ್ಥಾಪನೆ ಕುರಿತು ಮುಂದಿನ ಬಜೆಟ್‌ ವೇಳೆ ಪ್ರಸ್ತಾವನೆ ಮಂಡಿಸಲಾ ಗುವುದು ಎಂದರು. ಅಪರಾಧ ಪ್ರಕರಣಗಳ ತನಿಖೆಗೆ ಮತ್ತು ಪೊಲೀಸ್‌ ವ್ಯವಸ್ಥೆ ನಿರ್ವಹಣೆಗೆ ಸಾಧ್ಯವಿರುವ ಎಲ್ಲ ರೀತಿಯ ಹೊಸ ತಂತ್ರಜ್ಞಾನ ಹಾಗೂ ವಿಧಾನಗಳನ್ನು ಬಳಸಿ 
ಕೊಳ್ಳಲಾಗುತ್ತಿದೆ. 30 ಕೋಟಿ ರೂ. ವೆಚ್ಚದಲ್ಲಿ ಎಫ್‌ಎಸ್‌ ಎಲ್‌ ಉನ್ನತೀಕರಣ ಹಾಗೂ 80 ಕೋಟಿ ರೂ.ವೆಚ್ಚದಲ್ಲಿ
ಕಮಾಂಡ್‌ ಕಂಟ್ರೋಲ್‌ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪೊಲೀಸ್‌ ಕಾನ್‌ಸ್ಟೆಬಲ್‌ ದರ್ಜೆಯಿಂದ ಐಪಿಎಸ್‌ ವೃಂದದ ಅಧಿಕಾರಿಗಳವರೆಗೆ ಎಲ್ಲ ಸಿಬ್ಬಂದಿಗೆ ಕಾಲ-ಕಾಲಕ್ಕೆ ಸೈಬರ್‌ ಅಪರಾಧಗಳ ತನಿಖೆ, ಅಪರಾಧ ಪ್ರಕರಣಗಳ ವೈಜ್ಞಾನಿಕ ತನಿಖೆ, ಡಿಜಿಟಲ್‌ ಸಾಕ್ಷಗಳ ಸಂಗ್ರಹಣೆ, ಸಂರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು. 

ಸೈಬರ್‌ ಕ್ರೈಂ, ಮೊಬೈಲ್‌ ಫೂರೆನ್ಸಿಕ್‌, ಗುಪ್ತಚರ ಮಾಹಿತಿ ಸಂಗ್ರಹಣೆ ಮತ್ತು ವಿಚಾರಣೆ ತಂತ್ರಗಾರಿಕೆ, ಸಂಚಾರ ನಿರ್ವಹಣೆಯ ಜತೆಗೆ ಆಧುನಿಕ ಅಪರಾಧಗಳ ಪತ್ತೆಗೆ ನೆರ ವಾಗುವಂತಹ ತರಬೇತಿಗಳಿಗೆ ಪೊಲೀಸ್‌ ಸಿಬ್ಬಂದಿ ಮತ್ತು ಆಧಿಕಾರಿಗಳನ್ನು ನಿಯೋಜಿ ಸಲಾಗುತ್ತಿದೆ. ವಿದೇಶದಲ್ಲಿ ನಡೆಯುವ ತರಬೇತಿಗಳಲ್ಲೂ ಪಾಲ್ಗೊಳ್ಳಲು ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸರ್ಕಾರ
ಅನುಮತಿ ನೀಡುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ವರ್ಷ 7,563 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 2018-19ರಲ್ಲಿ 4,357 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.

ಪೊಲೀಸ್‌ ನೀತಿ ಜಾರಿಗೆ ತನ್ನಿ: ತಾರಾ ಪೊಲೀಸ್‌ ಕೆಲಸಕ್ಕೆ ಸೇರಿ ಸಮಾಜದ ಸೇವೆ ಮಾಡುವ ಕನಸು ಹೊತ್ತು ಬರುವವರಿಗೆ ಹಿರಿಯ ಅಧಿಕಾರಿಗಳ ಮನೆ ಚಾಕರಿ ಮಾಡಿಸುವ ಅನಿಷ್ಠ ಆರ್ಡರ್ಲಿ ಪದ್ಧತಿ ರದ್ದು ಪಡಿಸಿ. ಗೃಹ ಸಚಿವರಾಗಿ ನೀವು ಬೆಂಗಾವಲು ವಾಹನ, ಹೆಚ್ಚುವರಿ ಭದ್ರತಾ ಸಿಬ್ಬಂದಿ, ಶೂನ್ಯ ಸಂಚಾರ ಸೌಲಭ್ಯ ಈ ರೀತಿ ಯಾವುದನ್ನೂ ಬಳಸಿಕೊಳ್ಳುವುದಿಲ್ಲ. ಇದೇ ಆದರ್ಶವನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪಾಲಿಸುವಂತೆ ಹೇಳಿ. ಪೊಲೀಸ್‌ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಯೋಜನೆಗಳನ್ನು ರೂಪಿಸುವುದು ಬಿಟ್ಟು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್‌ ನೀತಿ ಜಾರಿಗೆ ತನ್ನಿ ಎಂದು ತಾರಾ ಅನೂರಾಧ ಸಲಹೆ ನೀಡಿದರು.

ಪೀಕ್‌ ಅವರ್ನಲ್ಲಿ ವಾಹನ ತಪಾಸಣೆ ಮಾಡದಂತೆ ಸೂಚನೆ
ವಿಧಾನಪರಿಷತ್ತು: ಸಂಚಾರ ದಟ್ಟಣೆ  ಹೆಚ್ಚಿರುವ ಬೆಳಗ್ಗೆ ಮತ್ತು ಸಂಜೆ ವೇಳೆ (ಪೀಕ್‌ ಅವರ್) ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕಾಂತ ರಾಜು ಮಾತನಾಡಿ, ಪೀಕ್‌ ಅವರ್ಗಳಲ್ಲಿ ಸಂಚಾರ ನಿರ್ವಹಣೆ ಮಾಡುವ ಬದಲು ಪೊಲೀಸರು ವಾಹನ ತಪಾಸಣೆ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದರು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿನಲ್ಲಿ ಈ ಸಮಸ್ಯೆ ಹೆಚ್ಚು. ಆದ್ದರಿಂದ ಪೀಕ್‌ ಅವರ್ ಗಳಲ್ಲಿ ವಾಹನ ತಪಾಸಣೆ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡುವಂತೆ ಆಯುಕ್ತರಿಗೆ ನಿರ್ದೇಶನ ನೀಡುತ್ತೇನೆ ಎಂದರು.


Trending videos

Back to Top