CONNECT WITH US  

ಕಾಂಗ್ರೆಸ್‌ನಿಂದ ಯಾತ್ರೆ ಮಾಡಲ್ಲ: ಜಿ.ಪರಮೇಶ್ವರ್‌

ಬೆಂಗಳೂರು: "ಬಿಜೆಪಿ, ಜೆಡಿಎಸ್‌ ಪಕ್ಷದವರು ಯಾತ್ರೆ ಮಾಡಿದಂತೆ ನಾವು ಯಾವುದೇ ಯಾತ್ರೆ ಮಾಡುವುದಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
ಜನಾಶೀರ್ವಾದ ಯಾತ್ರೆ ಹಾಗೂ ಪಕ್ಷದ ನಡುವೆ ಗೊಂದಲ ಇರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಕಾಂಗ್ರೆಸ್‌ ಯಾತ್ರೆ ಆಲೋಚನೆ ಬಿಟ್ಟು ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನೇ ಜನರಿಗೆ ತಲುಪಿಸುವ ಪ್ರಯತ್ನ ಮಾಡಲು ಮುಂದಾಗಿರುವುದಾಗಿ ಹೇಳಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾತ್ರೆ ಮಾಡಿದ ತಕ್ಷಣ ಚುನಾವಣೆ ಸಿದ್ಧತೆ ಅಂತೇನಿಲ್ಲ. ನಾವು ಯಾರನ್ನೂ
ಫಾಲೋ ಮಾಡುವುದಿಲ್ಲ. ನಮಗೆ ನಮ್ಮದೇ ಆದ ರಣತಂತ್ರವಿದೆ. ಸಿಎಂ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದ
ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಪಕ್ಷದ ವತಿಯಿಂದ ನಾವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಅಭ್ಯರ್ಥಿಗಳ ಆಯ್ಕೆ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಬೇರೆ ಮೂಲಗಳಿಂದ ಅಭಿಪ್ರಾಯ ಪಡೆಯುತ್ತಿದ್ದೇವೆ. ಮುಖ್ಯಮಂತ್ರಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಎಲ್ಲರೂ ಪ್ರತ್ಯೇಕವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ತೊಂದರೆ ಇರುವ ಅಭ್ಯರ್ಥಿಗಳನ್ನು ಕರೆದು ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡುತ್ತಿದ್ದೇವೆ ಎಂದರು. ಇನ್ನು, ಒಂದೇ ಕುಟುಂಬದ ಹಲವರಿಗೆ ಟಿಕೆಟ್‌ ಕೊಡಬಾರದೆಂಬ ನಿಯಮ ಪಕ್ಷದಲ್ಲಿದೆ. ಮೂರು ಬಾರಿ ಸೋತವರಿಗೆ ಟಿಕೆಟ್‌ ಇಲ್ಲ. ಆದರೆ, ಚುನಾವಣಾ ಸಮಿತಿ ಮತ್ತು ಹೈಕಮಾಂಡ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ನೋಡಬೇಕು ಎಂದು ಹೇಳಿದರು.

ಕೊರಟಗೆರೆ ಕ್ಷೇತ್ರದಿಂದ ತಾವು ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ಗೊಂದಲವಿಲ್ಲ. ಕೊರಟಗೆರೆಯಿಂದಲೇ ಸ್ಪರ್ಧಿಸುವುದಾಗಿ ಪರಮೇಶ್ವರ್‌ ಹೇಳಿದರು. ಮಾಜಿ ಸಂಸದೆ ರಮ್ಯಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತಂತೆ ಯಾವುದೇ ಮಾಹಿತಿ ಇಲ್ಲ.
ರಮ್ಯಾ ಜೊತೆ ಯಾರು ಸಂಪರ್ಕದಲ್ಲಿದ್ದಾರೋ ಗೊತ್ತಿಲ್ಲ. ನಾನು ಅವರ ಹುಟ್ಟುಹಬ್ಬಕ್ಕೆ ಫೋನ್‌ ಮಾಡಿ ವಿಷ್‌ ಮಾಡಿದ್ದೇನೆ ಎಂದು ಹೇಳಿದರು.

Trending videos

Back to Top