CONNECT WITH US  

ಜೆಡಿಎಸ್‌ ಎಬಿಸಿ ಕೆಟಗರಿ ತಂತ್ರ

ಮುಂಬರುವ ಚುನಾವಣೆಯಲ್ಲಿ 114 ಗುರಿ ತಲುಪಲು ಹೊಸ ತಂತ್ರಗಾರಿಕೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ನಿಟ್ಟಿನಲ್ಲಿ ಜೆಡಿಎಸ್‌ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳನ್ನು ಎ,ಬಿ,ಸಿ ಎಂದು ವಿಂಗಡಿಸಿ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

ಎ ಕೆಟಗರಿ ಎಂದರೆ ಗೆದ್ದೇ ಗೆಲ್ಲುವ ಕ್ಷೇತ್ರ, ಬಿ ಕೆಟಗರಿ ಎಂದರೆ ಶ್ರಮ ಹಾಕಿದರೆ ಗೆಲ್ಲಬಹುದಾದ ಕ್ಷೆತ್ರ, ಸಿ ಕೆಟಗರಿ ಎಂದರೆ ಪಕ್ಷ ಸಂಘಟನೆಗಾಗಿ ಸ್ಪರ್ಧೆ ಮಾಡಬೇಕಾದ ಕ್ಷೇತ್ರ ಎಂದು ಪರಿಗಣಿಸಲಾಗಿದ್ದು,  ಎ ಕೆಟಗರಿಯಲ್ಲಿ 105 ಕ್ಷೇತ್ರ, ಬಿ ಕೆಟಗರಿಯಲ್ಲಿ 65 ಕ್ಷೇತ್ರ, ಸಿ ಕೆಟಗರಿಯಲ್ಲಿ 54 ಕ್ಷೇತ್ರಗಳನ್ನು ಗುರುತಿಸಲಾಗಿದೆ.

ಬುಧವಾರ ಪಕ್ಷದ ಕಚೇರಿಯಲ್ಲಿ ತುಮಕೂರು ಜಿಲ್ಲಾ ಅಭ್ಯರ್ಥಿಗಳ ಆಯ್ಕೆ ಕುರಿತ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಕಳೆದ ಹತ್ತು ವರ್ಷಗಳಲ್ಲಿ ಎರಡು ಚುನಾವಣೆಗಳಲ್ಲಿ ಆದ ಹಿನ್ನೆಡೆ ಹಾಗೂ ಅನುಭವದ ಆಧಾರದ ಮೇಲೆ 224 ಕ್ಷೇತ್ರಗಳಲ್ಲಿ ಶ್ರಮ ಹಾಕುವುದಕ್ಕಿಂತ ಗೆಲ್ಲಬಹುದಾದ ಕ್ಷೇತ್ರಗಳ ಬಗ್ಗೆ ಹೆಚ್ಚು ಒತ್ತು ಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

2008 ಹಾಗೂ 2013 ರ ಚುನಾವಣೆಗಳಲ್ಲಿ ನಮಗೆ ಹಿನ್ನೆಡೆಯಾಗಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿಕೊಂಡಿದ್ದೇವೆ. ಹೀಗಾಗಿ, ಎ,ಬಿ,ಸಿ ಎಂದು ಕ್ಷೇತ್ರಗಳನ್ನು ಪಟ್ಟಿ ಮಾಡಿ  ಈ ಬಾರಿ ಪ್ರಚಾರ ನಡೆಸಲಾಗುವುದು ಎಂದು ಹೇಳಿದರು.

105 ಕ್ಷೇತ್ರಗಳಲ್ಲಿ 70 ರಿಂದ 80 ಸ್ಥಾನ ಗೆಲ್ಲಲೇಬೇಕಿದೆ.  ಈಗಾಗಲೇ ಅರವತ್ತರಿಂದ ಎಪ್ಪತ್ತು ಕ್ಷೇತ್ರಗಳಲ್ಲಿ ಗೆಲ್ಲುವ ವಾತಾವರಣ ಇದೆ. 30ರಿಂದ 35 ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ಪೈಪೋಟಿಯಿದೆ. ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿದರೆ ಕನಿಷ್ಠ 25 ಕ್ಷೇತ್ರ ಗೆದ್ದಂತೆ ಎಂದು ತಿಳಿಸಿದರು.

ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ತಲುಪುವುದು ನಮ್ಮ ಗುರಿ. 114 ಸ್ಥಾನ ಗೆದ್ದರಷ್ಟೇ ರಾಜ್ಯಪಾಲರು ನಮಗೆ ಅವಕಾಶ ನೀಡುತ್ತಾರೆ. ಬೇರೆ ಪಕ್ಷದ ಬಾಗಿಲು ತಟ್ಟಲು ನಮಗೆ ಇಷ್ಟ ಇಲ್ಲ. ಸಮ್ಮಿಶ್ರ ಸರ್ಕಾರ ಬಂದರೆ ನಮ್ಮ ಪಕ್ಷದ ಪ್ರಣಾಳಿಕೆ ಯಲ್ಲಿನ ಕಾರ್ಯಕ್ರಮ ಗಳನ್ನು ಜಾರಿ ತರೋದು ಕಷ್ಟ ಎಂದರು. ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಆದರೆ ಎಲ್ಲೆಡೆ ಹೋದರೆ ಎಲ್ಲ ಕಡೆ ಗೆಲ್ಲಲು  ಸಾಧ್ಯವಿಲ್ಲ. 114 ನಮ್ಮ ಟಾರ್ಗೆಟ್‌. ಅಷ್ಟು ಬಂದರೆ ಮಾತ್ರ ನಮಗೆ  ರಾಜ್ಯಪಾಲರು ನಮಗೆ ಗೇಟ… ಓಪನ್‌ ಮಾಡ್ತಾರೆ ಎಂದರು.

ಗುಜರಾತ್‌ ಚುನಾವಣೆ ಫ‌ಲಿತಾಂಶದ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ರಾಷ್ಟ್ರೀಯ ಪಕ್ಷಗಳಿಂದ ಹಲವರು ಜೆಡಿಎಸ್‌ ಸೇರಬಹುದು. ಫ‌ಲಿತಾಂಶ ಕ್ಕಾಗಿ ಕೆಲವರು ಕಾಯುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ನುಡಿದರು.

ಹಳೇ ಮೈಸೂರು ಭಾಗದಲ್ಲಿ ಗರಿಷ್ಠ ಸೀಟು ಗೆಲ್ಲುತ್ತೇವೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಹಾವೇರಿ , ಗದಗ ಸೇರಿ ಮುಂಬೈ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಸಂಘಟನೆಯಾಗಬೇಕಿದೆ.  ಆ ಭಾಗದಲ್ಲಿ ಪಕ್ಷ ಬಲಪಡಿಸಲು ಶ್ರಮ ಹಾಕುತ್ತೇವೆ ಎಂದು ಹೇಳಿದರು.

ಈ ಸರ್ಕಾರದಲ್ಲಿ ಎಲ್ಲವೂ ನಡೆಯುತ್ತದೆ. ಮಾರ್ಕ್ಸ್ಕಾರ್ಡ್‌ ಹಗರಣಕ್ಕೆ ಸಂಬಂಧಿಸಿದಂತೆ ಎನ್‌ಎಸ್‌ಯುಐ ಘಟಕದವರೇ ಕಾಂಗ್ರೆಸ್‌ ಉಸ್ತುವಾರಿಗೆ ದೂರು ನೀಡಿದ್ದಾರೆ. ನಾನು ಅದಾನಿ ಕಂಪನಿಯನ್ನು ಬ್ಲಾಕ್‌ ಲಿಸ್ಟ್‌ ಮಾಡಿದ್ದೆ. ಈಗ ಅಂತಹ ಕಂಪನಿಗೆ  ಸಿದ್ದರಾಮಯ್ಯ ಮಣೆ ಹಾಕಿದ್ದಾರೆ.
- ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Trending videos

Back to Top