CONNECT WITH US  

ದೀಪಕ್‌ ಶವ ಗೌಪ್ಯವಾಗಿ ಮನೆಗೆ; ಗ್ರಾಮಸ್ಥರ ಆಕ್ರೋಶ 

​​​​​​​ಪೊಲೀಸರ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶ, ಉದ್ವಿಗ್ನ ಸ್ಥಿತಿ 

ಮಂಗಳೂರು: ಸುರತ್ಕಲ್‌ ಸಮೀಪದ ಕಾಟಿಪಳ್ಳದ ಕೈಕಂಬದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್‌ ರಾವ್‌ ಅವರ ಶವವನ್ನು ಗುರುವಾರ  ಪೊಲೀಸರು ಗೌಪ್ಯವಾಗಿ ಮನೆಗೆ ರವಾನಿಸಿದ್ದು ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 

ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಇಡಲಾಗಿದ್ದ ಶವವನ್ನು ಹಿಂಬಾಗಿಲಿನಿಂದ ಗೌಪ್ಯವಾಗಿ  ಮನೆಗೆ ರವಾನಿಸಲಾಯಿತು. ಆದರೆ ಮನೆಯ ಎದುರು ಜಮಾಯಿಸಿದ್ದ ಸಾವಿರಾರು ಮಂದಿ ಅಂಬುಲೆನ್ಸ್‌ ತಡೆದು ಶವವನ್ನು ಆಸ್ಪತ್ರೆಗೆ ವಾಪಾಸ್‌ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದರು. ಈ ವೇಳೆ ಪೊಲೀಸ್‌ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ ಉಂಟಾಯಿತು.

 

ಆಸ್ಪತ್ರೆಯ ಮುಂದು ಹಾರಮತ್ತು ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಶವಯಾತ್ರೆ ನಡೆಸಲು ಸಜ್ಜಾಗಿದ್ದ ಸಾವಿರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಕ್ರಮದ ವಿರುದ್ಧ ಕೆಂಡ ಕಾರಿದ್ದಾರೆ. 

ಮೆರವಣಿಗೆ ನಡೆಸಲು ಅವಕಾವ ನೀಡದೆ ಇರುವುದು ಹಿಂದೂ ವಿರೋಧಿ ನೀತಿಯಾಗಿದೆ . ಕಾಂಗ್ರೆಸ್‌ ಸರ್ಕಾರದ ಆದೇಶದಂತೆ ಕಾನೂನನ್ನೂ ಮೀರಿ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಬುಧವಾರ ಮಧ್ಯಾಹ್ನ ದೀಪಕ್‌ ರಾವ್‌ (28) ಅವರನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಘಟನೆ ನಡೆದಮೂರೂವರೆ ತಾಸುಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲ್ಕಿಯ ನೌಷಾದ್‌,ರಿಜ್ವಾನ್‌, ಪಿಂಕಿ ನವಾಜ್‌ ಮತ್ತು ನಿರ್ಷಾನ್‌ ಬಂಧಿತರು. 

 ಸುರತ್ಕಲ್‌ ಪರಿಸರದಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಜಾರಿ  ಮಾಡಲಾಗಿದೆ.  ಹೆಚ್ಚುವರಿ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. 

ಸುರತ್ಕಲ್‌ ಪರಿಸರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. 


Trending videos

Back to Top