CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಜ್ಯದ ವಿವಿಧೆಡೆ ಭೀಕರ ಅಪಘಾತಗಳು:13 ಕ್ಕೂ ಹೆಚ್ಚು ಬಲಿ

ಕರಾಳ ಶನಿವಾರ; ಹಾಸನ,ಕೋಲಾರ ಮತ್ತು ಕಾರವಾರಗಳಲ್ಲಿ ಭೀಕರ ಅವಘಡಗಳು 

ಹಾಸನ / ಕೋಲಾರ/ ಕಾರವಾರ : ರಾಜ್ಯದ ವಿವಿಧೆಡೆ ಶನಿವಾರ ಭೀಕರ ಅವಘಡಗಳು ಸಂಭವಿಸಿದ್ದು 13 ಕ್ಕೂ ಹೆಚ್ಚು ಮಂದಿ  ದಾರುಣವಾಗಿ ಸಾವನ್ನಪ್ಪಿದ್ದಾರೆ.

ಹಾಸನ ತಾಲೂಕಿನ ಶಾಂತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಕೃಷಿ ಕಾಲೇಜ್‌ ಬಳಿ ಶನಿವಾರ ನಸುಕಿನ ಜಾವ ಕೆಎಸ್‌ಆರ್‌ಟಿಸಿ ಐರಾವತ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ 8ಜನ ಸಾವನ್ನಪ್ಪಿ 10ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಚಾಲಕ ಲಕ್ಷ್ಮಣ್‌, ವೈದ್ಯಕೀಯ ವಿದ್ಯಾರ್ಥಿನಿ ಡಯಾನ, ಗಂಗಾಧರ, ಶಿವಪ್ಪ ಛಲವಾದಿ ಸೇರಿದಂತೆ ಇಬ್ಬರು ಮಹಿಳೆಯರು ಮತ್ತು 4 ಪುರುಷರು  ಮೃತಪಟ್ಟ ದುರ್ವೈವಿಗಳು ಎಂದು ತಿಳಿದು ಬಂದಿದೆ.

ಬಸ್‌ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೋಲಾರದಲ್ಲಿ ಮರಕ್ಕೆ ಗುದ್ದಿದ ಅಪೆ ಆಟೋ : 3 ಬಲಿ 
ಮುಳಬಾಗಿಲಿನ ಗಾಜಲಬಾವಿ ಗ್ರಾಮದ ಬಳಿ ಶನಿವಾರ ನಸುಕಿನ 2 ಗಂಟೆಯ ವೇಳೆ ಅಪೆ ಆಟೋ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದು ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ  ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಭಾಸ್ಕರ್‌(35), ಪಾರ್ವತಮ್ಮ(38), ಗೌರಮ್ಮ ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.

 ಮೃತಪಟ್ಟವರೆಲ್ಲ ಬಂಗಾರ ಪೇಟೆ ತಾಲೂಕು ಸಣ್ಣಕುಪ್ಪ ಗ್ರಾಮದವರೆಂದು ತಿಳಿದು ಬಂದಿದ್ದು, ಖಾದ್ರಿಪುರ ಶನಿಮಹಾತ್ಮ ದೇವಾಲಯಕ್ಕೆ  ತೆರಳಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಾರವಾರದಲ್ಲಿ ಕ್ರೂಸರ್‌ ಮರಕ್ಕೆ ಢಿಕ್ಕಿ; 2ಬಲಿ 
ಕಾರವಾರದ ಚಂಡ್ಯಾ ಗ್ರಾಮದ ಬಳಿ ಕುಷ್ಠಗಿಯಿಂದ ಗೋವಾಕ್ಕೆ ತೆರಳುತ್ತಿದ್ದ  ಕ್ರೂಸರ್‌ವೊಂದು ಮರಕ್ಕೆ ಢಿಕ್ಕಿಯಾಗಿ  ಇಬ್ಬರು ದಾರುಣವಾಗಿ  ಸಾವನ್ನಪ್ಪಿದ್ದು, 10 ಕ್ಕೂಹೆಚ್ಚು ಮಂದಿ  ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ಮೃತರಿಬ್ಬರು ಪುರುಷರಾಗಿದ್ದು, ಒಬ್ಬರ ಹೆಸರು ಹನುಮಂತಪ್ಪ ಎಂದು ತಿಳಿದು ಬಂದಿದೆ. ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Back to Top