CONNECT WITH US  

ಹಿಂದುತ್ವದ ಬಗ್ಗೆ ಕಾಂಗ್ರೆಸ್‌ ಮೃದು 

ರಾಜ್ಯದಲ್ಲಿ ರಾಹುಲ್‌ ಹೊಸ ಕಾರ್ಯತಂತ್ರ

ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ವಾಪಸ್‌ ಆಗುತ್ತಿರುವ ಸಿದ್ದರಾಮಯ್ಯ, ಪರಮೇಶ್ವರ, ವೇಣುಗೋಪಾಲ್‌ ಮತ್ತಿತರರು.

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದು ಮತ್ತೂಮ್ಮೆ ಕರ್ನಾಟಕದಲ್ಲಿ ಸರ್ಕಾರ ರಚಿಸಲೇಬೇಕು. ಆ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿ ಎಂದು ತಾಕೀತು ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿಯ ಹಿಂದುತ್ವ ಅಜೆಂಡಾಗೆ ಪ್ರತಿತಂತ್ರವಾಗಿ ಮೃದು ಹಿಂದುತ್ವ ತಂತ್ರ ಅನುಸರಿಸಲು ಸೂಚಿಸಿದ್ದಾರೆ.

ಇದರ ಜತೆಗೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಶೀಘ್ರ ಸಿದ್ದಪಡಿಸಿ, ಗೊಂದಲ ಇಲ್ಲದಿರುವ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿ ಬೇಗ ಬಿಡುಗಡೆ ಮಾಡಿ ಕೆಲಸ ಪ್ರಾರಂಭಿಸುವಂತೆ ಅಭ್ಯರ್ಥಿಗಳಿಗೆ ನಿರ್ದೇಶನ ನೀಡಿ ಎಂದು ಸಲಹೆ ನೀಡಿದ್ದಾರೆ.

ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಲು ರಾಹುಲ್‌ಗಾಂಧಿ ಒಪ್ಪಿಗೆ ನೀಡಿದ್ದು, ಫೆ. 12 ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ದೇಶಿಸಿ ಭಾಷಣ ಮಾಡುವ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ದೆಹಲಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಸೇರಿ ರಾಜ್ಯದ ನಾಯಕರ ಜತೆ ಮುಂದಿನ ಚುನಾವಣಾ ತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ ರಾಹುಲ್‌ಗಾಂಧಿ, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‌ ಪಾಲಿಗೆ ಅತ್ಯಂತ ಮಹತ್ವವಾಗಿದೆ ಎಂದು ಹೇಳಿದರು.

ರಾಜ್ಯದ ನಾಯಕರ ಜತೆ ಪ್ರತ್ಯೇಕವಾಗಿ ಮಾತನಾಡಿದ ರಾಹುಲ್‌ಗಾಂಧಿ, ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದು  ಈ ಕ್ಷಣದಿಂದಲೇ ಎಲ್ಲ ನಾಯಕರು ಒಗ್ಗಟ್ಟಾಗಿ ಚುನಾವಣಾ "ಅಖಾಡ' ಪ್ರವೇಶಿಸಿ ಎಂದು ಸೂಚಿಸಿದರು.

ವಿವಾದಾತ್ಮಕ ಹೇಳಿಕೆ ಬೇಡ
ಬಿಜೆಪಿ ಹಿಂದುತ್ವ ಅಜೆಂಡಾ ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಹ ರಕ್ಷಣಾತ್ಮಕ ನಡೆ ಅನುಸರಿಸಬೇಕು. ಹಿಂದುತ್ವ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಬೇಡ. ಯಾರೂ ಹಿಂದೂ ವಿರೋಧಿ ಎನ್ನುವುದನ್ನು ಬಿಂಬಿಸಿಕೊಳ್ಳಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಗುಜರಾತ್‌ನಲ್ಲಿ ಬಿಜೆಪಿ ಎದುರಿಸಿದ ತಂತ್ರಗಾರಿಕೆ ಹಾಗೂ ಗುಜರಾತ್‌ ಸ್ಥಳೀಯ ಕಾಂಗ್ರೆಸ್‌ ನಾಯಕರ ವೈಫ‌ಲ್ಯದ ಬಗ್ಗೆಯೂ ರಾಹುಲ್‌ ಗಾಂಧಿ ರಾಜ್ಯ ನಾಯಕರ ಜತೆ ಚರ್ಚಿಸಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳದಂತೆ ಕಿವಿಮಾತು ಹೇಳಿದರು.

ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಬೂತ್‌ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸದೃಢಗೊಳಿಸಬೇಕು. ಗುಜರಾತ್‌ ಚುನಾವಣೆಯಲ್ಲಿ ಬೂತ್‌ ಮಟ್ಟದಲ್ಲಿ ಸಂಘಟನೆಯಾಗದಿರುವುದು ನಮ್ಮ ಸೋಲಿಗೆ ಕಾರಣವಾಯಿತು ಎಂಬ ಅಂಶವನ್ನು ರಾಹುಲ್‌ಗಾಂಧಿ ರಾಜ್ಯ ನಾಯಕರ ಬಳಿ ಪ್ರಸ್ತಾಪಿಸಿದರು ಎಂದು ಹೇಳಲಾಗಿದೆ.

ಒಗ್ಗಟ್ಟು ಪ್ರದರ್ಶನಕ್ಕೆ ಸೂಚನೆ
ಚುನಾವಣೆ ಸಂದರ್ಭದಲ್ಲಿ ನಿಮ್ಮಲ್ಲೇ ಗೊಂದಲ ಸೃಷ್ಠಿಯಾಗದಂತೆ ನೋಡಿಕೊಳ್ಳಿ. ಆಂತರಿಕ ಭಿನ್ನಾಭಿಪ್ರಾಯ ಶಮನ ಮಾಡಿಕೊಂಡು ಒಗ್ಗಟ್ಟು ಪ್ರದರ್ಶನ ಮಾಡಿ. ಭಿನ್ನಾಭಿಪ್ರಾಯ ಅಥವಾ ಗೊಂದಲದ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬರುವ ಮೊದಲೇ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಜತೆಗೆ  ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯಿಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್‌.ಆರ್‌.ಪಾಟೀಲ್‌, ದಿನೇಶ್‌ಗುಂಡೂರಾವ್‌ ಸೇರಿದಂತೆ ರಾಜ್ಯದ ನಾಯಕರು ರಾಹುಲ್‌ಗಾಂಧಿಯವರ ಜತೆ ಸಮಾಲೋಚನೆ ನಡೆಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸ್ವ ಕ್ಷೇತ್ರದಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದರಿಂದ ದೆಹಲಿಗೆ ಹೋಗಿರಲಿಲ್ಲ.

ಸಾಧನಾ ಸಂಭ್ರಮ ಯಾತ್ರೆ ಮಾಹಿತಿ
ಒಂದು ತಿಂಗಳ ಸಾಧನಾ ಸಂಭ್ರಮ ಯಾತ್ರೆ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್‌ಗಾಂಧಿ ಅವರಿಗೆ ಮಾಹಿತಿ ನೀಡಿದ್ದು, ಯಾತ್ರೆಯಲ್ಲಿ ದೊರೆತ ಸ್ಪಂದನೆ ಬಗ್ಗೆಯೂ ತಿಳಿಸಿದರು. ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 155  ಈಡೇರಿಸಿದೆ. ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದ್ದು ಆಡಳಿತ ವಿರೋಧಿ ಅಲೆಯಿಲ್ಲ. ಸರ್ಕಾರದ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಮನವರಿಕೆ ಮಾಡಿಕೊಟ್ಟರು ಎಂದು ಹೇಳಲಾಗಿದೆ.

ಫೆ 10 ರಿಂದ ಮೂರು ದಿನ ರಾಹುಲ್‌ ಪ್ರವಾಸ
ರಾಹುಲ್‌ಗಾಂಧಿ ಫೆ.10 ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದು, ಮೂರು ದಿನ ಪ್ರವಾಸ ಕೈಗೊಳ್ಳಲಿರುವ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಫೆ. 10 ರಂದು ಎಸ್‌ಟಿ ಸಮಾಜದ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 11 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧುರಾಶ್ವತ್ಥದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಮೈಸೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 12 ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ಉದ್ದೇಶಿಸಿ ಭಾಷಣ ಮಾಡುವ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕರ್ನಾಟಕಕ್ಕೆ ಬರುತ್ತಿರುವ ರಾಹುಲ್‌ಗಾಂಧಿ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಸಿದ್ಧತೆ ಮಾಡಿಕೊಂಡಿದೆ.

Trending videos

Back to Top