CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಫೆ.17: ಜೆಡಿಎಸ್‌ ವಿಕಾಸಪರ್ವ ಸಮಾವೇಶ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಹಾಗೂ ಬೃಹತ್‌ ಸಮಾವೇಶ ಫೆ.17ರಂದು ಯಲಹಂಕ ಸಮೀಪ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಪ್ರವಾಸದ ಬೆನ್ನಲ್ಲೇ ಜೆಡಿಎಸ್‌ ಅಧಿಕೃತ ಚುನಾವಣಾ ಪ್ರಚಾರ ಹಾಗೂ ಎರಡೂ ಪಕ್ಷಗಳಿಗಿಂತ ಮುಂಚಿತವಾಗಿ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ "ಅಖಾಡ'ಕ್ಕೆ ಇಳಿಸಲು ಸಜ್ಜಾಗಿದೆ. ಬಿಎಸ್‌ಪಿ ಅಷ್ಟೇ ಅಲ್ಲದೆ  ಎಡಪಕ್ಷ, ರೈತ ಹಾಗೂ ಕನ್ನಡಪರ ಸಂಘಟನೆಗಳ ಜತೆಯೂ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್‌ ನಿರ್ಧರಿಸಿದ್ದು ಆ ಬಗ್ಗೆಯೂ ಸಮಾವೇಶದಲ್ಲಿ ಘೋಷಣೆ ಹೊರಬೀಳಲಿದೆ.

ಮಂಗಳವಾರ ಸಮಾವೇಶದ ಸ್ಥಳ ಪರಿಶೀಲನೆ ನಡೆಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಇದೊಂದು ಐತಿಹಾಸಿಕ ಸಮಾವೇಶವಾಗಲಿದ್ದು ಕನಿಷ್ಠ ಹತ್ತು ಲಕ್ಷ ಜನ ಸೇರಲಿದ್ದಾರೆ ಎಂದು ತಿಳಿಸಿದರು. ಸಮಾವೇಶದಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಪಕ್ಷಗಳನ್ನು ಟೀಕೆ ಮಾಡುವುದಾಗಲಿ. ನರೇಂದ್ರಮೋದಿ, ಸಿದ್ದರಾಮಯ್ಯ ಸಹಿತ ಇತರ ಪಕ್ಷಗಳ ನಾಯಕರನ್ನು ದೂರುವುದಾಗಲಿ, ಭ್ರಷ್ಟಾಚಾರದ ಬಗ್ಗೆಯಾಗಲಿ ಮಾತನಾಡುವುದಿಲ್ಲ. ಬದಲಿಗೆ ಜೆಡಿಎಸ್‌ನ ಕಾರ್ಯಕ್ರಮಗಳು, ಅಧಿಕಾರಕ್ಕೆ ಬಂದರೆ ನಮ್ಮ ಬದ್ಧತೆ ಏನು ಎಂಬುದನ್ನು ಜನರ ಮುಂದಿಡಲಾಗುವುದು ಎಂದು ತಿಳಿಸಿದರು.

ಹಾಲಿ ಶಾಸಕರಿಗೆಲ್ಲಾ ಟಿಕೆಟ್‌ ಡೌಟ್‌?: ಮೊದಲ ಹಂತದ ಪಟ್ಟಿಯಲ್ಲಿ  ಜೆಡಿಎಸ್‌ನ ಹಾಲಿ ಶಾಸಕರಿಗೆಲ್ಲಾ ಟಿಕೆಟ್‌ ಅನುಮಾನ.  31 ಶಾಸಕರ ಪೈಕಿ ಐವರಿಗೆ ಟಿಕೆಟ್‌ ತಪ್ಪಲಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ ಭಾಗದ ಶಾಸಕರು ಟಿಕೆಟ್‌ ಕೈ ತಪ್ಪುವ ಪಟ್ಟಿಯಲ್ಲಿದ್ದಾರೆ ಎಂದು ಹೇಳಲಾಗಿದೆ.  

ರಾಜ್ಯದಲ್ಲಿ ಲೋಕೋಪಯೋಗಿ ಹಾಗೂ ಜಲ ಸಂಪನ್ಮೂಲ ಇಲಾಖೆಯ ಸಾವಿರಾರು ಕೋಟಿ ರೂ. ಮೊತ್ತದ ಗುತ್ತಿಗೆ ಕಾಮಗಾರಿ ಹೊರ ರಾಜ್ಯದವರಿಗೆ ನೀಡಲಾಗುತ್ತಿದೆ.  ಕರ್ನಾಟಕದಲ್ಲಿ ಒಳ್ಳೆಯ ಗುತ್ತಿಗೆದಾರರು ಇದ್ದರೂ ಬೇರೆ ರಾಜ್ಯದವರಿಗೆ ಕಾಮಗಾರಿ ಕೊಡುವ ಅವಶ್ಯಕತೆಯೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Back to Top