CONNECT WITH US  

ಗೂಂಡಾಗಿರಿ: ಹ್ಯಾರಿಸ್‌ ಪುತ್ರ ಮಹಮದ್‌ ಕೈ ನಿಂದ ಉಚ್ಛಾಟನೆ!

ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮಹಮದ್‌ ನಲಪಾಡ್‌

ಆರೋಪಿ ಮಹಮದ್‌ ನಲಪಾಡ್‌ , ಹಲ್ಲೆಗೊಳಗಾದ ವಿದ್ವತ್‌

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ವಿರುದ್ಧ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ಶನಿವಾರ ರಾತ್ರಿ ಯುಬಿ ಸಿಟಿಯ ರೆಸ್ಟೊರೆಂಟ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ನಲಪಾಡ್‌ ಮತ್ತು ಆತನ ಹತ್ತಕ್ಕೂ ಹೆಚ್ಚು ಸ್ನೇಹಿತರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಲಾಗಿದೆ.

ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ವಿದ್ವತ್‌ ಎಂಬ ವಿದ್ಯಾರ್ಥಿ ಇದೀಗ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ವತ್‌ನ ಸಹಾಯಕ್ಕೆ ಬಂದ ಸಹೋದರ ಸಾತ್ವಿಕ್‌ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ನಡೆದ ನಂತರ ನಲಪಾಡ್‌ ನಾಪತ್ತೆಯಾಗಿದ್ದು,ಶಾಸಕ ಹ್ಯಾರಿಸ್‌ ಅವರು ಆಸ್ಪತ್ರೆಗೆ ಆಗಮಿಸಿ ಗಾಯಾಳು ವಿದ್ವತ್‌ನ ಕ್ಷೇಮ ವಿಚಾರಿಸಿದ್ದಾರೆ.

ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ನಲಪಾಡ್‌ ವಿರುದ್ಧ ಕೊಲೆಯತ್ನ, ಬೆದರಿಕೆ ಹಲ್ಲೆ ಸೇರಿ 10 ಕ್ಕೂ ಹೆಚ್ಚು ಕಲಂಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಕಾಂಗ್ರೆಸ್‌ನಿಂದ ಉಚ್ಛಾಟನೆ 
ಆರೋಪ ಕೇಳಿ ಬಂದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ನಲಪಾಡ್‌ನ‌ನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ. 

ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ 
ತಪ್ಪು ಯಾರೇ ಮಾಡಿದ್ದರು ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಪೊಲೀಸರಿಗೆ ಆದೇಶಿಸಿದ್ದಾರೆ. 

ಪ್ರತಿ ದೂರು 
ಹ್ಯಾರಿಸ್‌ ಬೆಂಬಲಿಗ ಅರುಣ್‌ ಬಾಬು ಎನ್ನುವವರು ಪ್ರತಿ ದೂರನ್ನೂ ದಾಖಲಿಸಿದ್ದಾರೆ. ವಿದ್ವತ್‌ ಮದ್ಯಪಾನ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಈ ಹಿಂದೆ ಹ್ಯಾರಿಸ್‌ ಅವರ ಇನ್ನೋರ್ವ ಪುತ್ರ ಉಮರ್‌ ವಿರುದ್ಧ ಪಬ್‌ನಲ್ಲಿ ಗಲಾಟೆ ನಡೆಸಿದ ಪ್ರಕರಣ ದಾಖಲಾಗಿತ್ತು.


Trending videos

Back to Top