CONNECT WITH US  

ಸತೀಶ ಪ್ರಾಬಲ್ಯ ಕಡಿವಾಣಕ್ಕೆ ಸಹೋದರರ ಪ್ಲಾನ್‌?

ವಿಧಾನಸಭೆ ಚುನಾವಣೆ ಬೆನ್ನಲ್ಲೇ ಹೆಚ್ಚಾದ ಜಾರಕಿಹೊಳಿ ಸಹೋದರರ ರಾಜಕೀಯ ವೈಮನಸ್ಯ

ಬೆಳಗಾವಿ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾರಕಿಹೊಳಿ ಸಹೋದರರ ನಡುವಿನ ವೈಮನಸ್ಯ ಮತ್ತೆ ಹೆಚ್ಚಿದ್ದು, ಹಾಲಿ ಶಾಸಕ ಮತ್ತು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಮತ್ತು ಅವರ ತಮ್ಮ ಲಖನ್‌ ಜಾರಕಿಹೊಳಿ ಮಧ್ಯೆ ಆರೋಪ, ಪ್ರತ್ಯಾರೋಪ ಹೊಸ ಸ್ವರೂಪ ಪಡೆದುಕೊಂಡಿದೆ.

ಜಿಲ್ಲಾ ರಾಜಕಾರಣದಲ್ಲಿ ಆದರಲ್ಲೂ ಮುಖ್ಯವಾಗಿ ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ಸತೀಶ ಜಾರಕಿಹೊಳಿ ಏಕಾಂಗಿಯಾಗಿದ್ದಾರೆಂಬ ಮಾತುಗಳು ಕೇಳಿಬಂದಿವೆ. ಇದೇ ಅವಕಾಶವನ್ನು ಬಳಸಿಕೊಂಡು ಸತೀಶಗೆ ಚುನಾವಣೆಯಲ್ಲಿ ಪೆಟ್ಟುಕೊಡಲು ಅವರದೇ ಪಕ್ಷದ ನಾಯಕರು ಹಾಗು ಸಹೋದರರು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ.  ಲಖನ್‌ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕೆಂಬುದು ಇದರ ಒಂದು ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನ ಒಳಜಗಳದಿಂದ ಬೇಸತ್ತಿರುವ ಸತೀಶ ಜಾರಕಿಹೊಳಿ ಪಕ್ಷದಿಂದ ಒಂದು ಕಾಲು ಹೊರಗಡೆ ಇಟ್ಟಿದ್ದಾರೆ. ಜೆಡಿಎಸ್‌ ಜತೆ ಅವರ ಸಖ್ಯ ಗಾಢವಾಗುತ್ತಿದೆ. ಇದಕ್ಕೆ ಪೂರಕವಾಗಿ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ 25 ಜೆಡಿಎಸ್‌ ಅಭ್ಯರ್ಥಿಗಳ ಬಿ ಫಾರ್ಮ್ ಅನ್ನು ಸತೀಶ ಅವರಿಗೆ ಜೆಡಿಎಸ್‌ ವರಿಷ್ಠರು ನೀಡಿದ್ದಾರೆಂಬ ಮಾತುಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಲಯದಲ್ಲಿ ಹರಿದಾಡುತ್ತಿವೆ. ಇದು ಕಾಂಗ್ರೆಸ್‌ ನಾಯಕರ ಮುನಿಸಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಲಖನ್‌ ಜಾರಕಿಹೊಳಿಗೆ ಸಹೋದರರಾದ ರಮೇಶ ಹಾಗೂ ಬಾಲಚಂದ್ರ  ಬೆಂಬಲದ ಜತೆಗೆ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಡಿ.ಕೆ.ಶಿವಕುಮಾರ  ಬೆಂಬಲವೂ ಇದೆ. ಇದರಿಂದ ಲಖನ್‌ ಬಹಿರಂಗವಾಗಿಯೇ ತಮ್ಮ ಸಹೋದರ ಸತೀಶ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಚುನಾವಣೆಯ ಸವಾಲು ಹಾಕುತ್ತಿದ್ದಾರೆಂಬ ಮಾತುಗಳು ಕೇಳಿಬಂದಿವೆ.

ಪಕ್ಷದ ಮೂಲದ ಪ್ರಕಾರ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸುವ  ತಂತ್ರಗಾರಿಕೆ ನಡೆದಿದೆ. ಇದರ ಹಿಂದೆ ಜಾರಕಿಹೊಳಿ ಸಹೋದರರ ಜತೆಗೆ ಕಾಂಗ್ರೆಸ್‌ನ ಪ್ರಭಾವಿ ನಾಯಕರು ಕೆಲಸ ಮಾಡುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ರಾಜಕಾರಣ ಇದಕ್ಕೆ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. ಇದನ್ನು ಸೂಕ್ಷ್ಮವಾಗಿ ಅರಿತಿರುವ ಸತೀಶ ಜಾರಕಿಹೊಳಿ ಜೆಡಿಎಸ್‌ ವರಿಷ್ಠರ ಜತೆ ಮಾತುಕತೆ ಮುಗಿಸಿದ್ದು, ಘೋಷಣೆಯಷ್ಟೇ ಬಾಕಿಯಿದೆ.  ಸತೀಶ ಅವರು ಜೆಡಿಎಸ್‌ದಿಂದ ಕಾಂಗ್ರೆಸ್‌ಗೆ  ಪೆಟ್ಟು ನೀಡುವ ಕಾರ್ಯತಂತ್ರ ರೂಪಿಸಿದ್ದಾರೆ. ಇದರ ಭಾಗವಾಗಿ ರಾಮದುರ್ಗ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ತಮ್ಮ ಆಪ್ತರಿಗೆ ಟಿಕೆಟ್‌ ಕೊಡಿಸಿದ್ದಾರೆಂಬ ಮಾತುಗಳು ಕೇಳಿಬಂದಿದೆ.

ಚಾಣಕ್ಯ ನಡೆ: ರಾಜಕೀಯವಾಗಿ ಮೊದಲಿಂದಲೂ ಚಾಣಾಕ್ಷ್ಯ ನಡೆ ಅನುಸರಿಸುತ್ತ ಬಂದಿರುವ ಸತೀಶ ಜಾರಕಿಹೊಳಿ ಎಂದಿಗೂ ತಮ್ಮ ನಿಗೂಢತೆಯನ್ನು ಬಿಟ್ಟುಕೊಟ್ಟಿಲ್ಲ. ಮೇಲಾಗಿ ಮುಂದಿನ 10 ವರ್ಷಗಳ ನಂತರ ನಾನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊದಲೇ ಹೇಳಿದ್ದಾರೆ. ಹೀಗಾಗಿ ಜಿಲ್ಲಾ ಕಾಂಗ್ರೆಸ್‌ ನಾಯಕರಿಗೆ ಯಾವ ರೀತಿ ತಿರುಮಂತ್ರ ನೀಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು ಎಂಬುದು ಅವರನ್ನು ಬಹಳ ಹತ್ತಿರದಿಂದ ನೋಡಿರುವ ಆಪ್ತರ ಮಾತು.

ಜಾರಕಿಹೊಳಿ ಸಹೋದರರ ನಡುವಿನ ಈ ವೈಮನಸ್ಸಿಗೆ ಹಲವು  ಕಾರಣಗಳಿವೆ, ಅದರಲ್ಲಿ ಯಮಕನಮರಡಿ ಕ್ಷೇತ್ರ ಒಂದು. ಅದರ ಜತೆಗೆ ಬೆಳಗಾವಿ ಗ್ರಾಮೀಣ ರಾಜಕಾರಣ. ಈ ಬಾರಿಯ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬ ಆಸೆ ಹೊಂದಿರುವ ಲಖನ್‌ ಜಾರಕಿಹೊಳಿ ಇದನ್ನು ತಮಗೆ ಬಿಟ್ಟುಕೊಡಬೇಕೆಂದು ಸತೀಶಗೆ ದುಂಬಾಲು ಬಿದ್ದಿದ್ದಾರೆ. ಆದರೆ  ಈ ಕ್ಷೇತ್ರದ ಮೇಲೆ ಬಲವಾದ ಹಿಡಿತ ಹೊಂದಿರುವ ಸತೀಶ ಜಾರಕಿಹೊಳಿ ಕ್ಷೇತ್ರ ಬಿಟ್ಟುಕೊಡುವ ಮಾತಿಗೆ  ಸೊಪ್ಪು ಹಾಕಿಲ್ಲ ಇದು ಸಮಸ್ಯೆಗೆ ಕಾರಣ.

ತಮ್ಮ ಸಹೋದರ ಈಗಾಗಲೇ ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಜೆಡಿಎಸ್‌ನ ಸುಮಾರು 25 ಅಭ್ಯರ್ಥಿಗಳ ಬಿ ಫಾರ್ಮ ಇವರ ಮಾತಿನಂತೆಯೇ ಹಂಚಿಕೆಯಾಗುತ್ತಿವೆ. ಇದಕ್ಕೆ ಬೆಳಗಾವಿ ಗ್ರಾಮೀಣ, ರಾಮದುರ್ಗ ಅಭ್ಯರ್ಥಿಗಳ ಹೆಸರೇ ಸಾಕ್ಷಿ. ಹೆಜ್ಜೆ ಹೊರಗಿಟ್ಟವರಿಗೆ ಪಕ್ಷದ ಬಗ್ಗೆ ಏಕೆ ಚಿಂತೆ ಎಂಬುದು ಲಖನ್‌ ಪ್ರಶ್ನೆ.

ಯಮಕನಮರಡಿ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ. ಪಕ್ಷ ಯಾವುದು ಎಂಬುದು ನಿರ್ಧಾರವಾಗಬೇಕಷ್ಟೆ. ಸತೀಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದಿದ್ದರೆ ಬೇರೆ ಕ್ಷೇತ್ರ ನೋಡಿಕೊಳ್ಳಲಿ. ಇಲ್ಲದಿದ್ದರೆ  ಕಳೆದ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿ ಎಂಬುದು ಲಖನ್‌ ಹೇಳಿಕೆ.

- ಕೇಶವ ಆದಿ

Trending videos

Back to Top