CONNECT WITH US  

ಟಿಕೆಟ್‌ ಆಕಾಂಕ್ಷಿಗಳಾಗಿದ್ದರೆ ಹುದ್ದೆಗೆ ರಾಜೀನಾಮೆ ನೀಡಿ

ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳಿಗೆ ವೇಣುಗೋಪಾಲ್‌, ಪರಮೇಶ್ವರ್‌ ಖಡಕ್‌ ಸೂಚನೆ

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಕೆ.ಸಿ.ವೇಣುಗೋಪಾಲ್‌ ಮಾತನಾಡಿದರು.

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಎಂದು ಪಕ್ಷದ
ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಖಡಕ್‌
ಎಚ್ಚರಿಕೆ ನೀಡಿದ್ದಾರೆ.

ಸರ್ದಾರ್‌ ಭವನದಲ್ಲಿ ನಡೆದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಉಭಯ ನಾಯಕರು, ಪಕ್ಷದ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರುವ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಜನಾಶೀರ್ವಾದ ಯಾತ್ರೆಗೆ ಆಗಮಿಸಿದ್ದಾಗ ಗೈರು ಹಾಜರಾಗಿದ್ದ ಪದಾಧಿಕಾರಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಕಾರಣ ಇಲ್ಲದೇ ಗೈರು  ಹಾಜರಾಗಿದ್ದ ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯಕ್ಕೆ ಬಂದು ಸುಳ್ಳು ಹೇಳಿ ಹೋಗುತ್ತಿದ್ದಾರೆ. ಅದರ ವಿರುದ್ಧ ಜನತೆಗೆ ಸತ್ಯ ತಿಳಿಸುವ ಕೆಲಸವನ್ನು ಪದಾಧಿಕಾರಿಗಳು ಬೂತ್‌ಮಟ್ಟದ ಕಾರ್ಯಕರ್ತರ ಮೂಲಕ ಮಾಡಬೇಕು. "ಮನೆ ಮನೆಗೂ ಕಾಂಗ್ರೆಸ್‌' ಉತ್ತಮ ಕಾರ್ಯಕ್ರಮವಾಗಿದ್ದು, ಅದನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ ಎಂದು ವೇಣುಗೋಪಾಲ್‌ ಅಸಮಾಧಾನ ಹೊರ ಹಾಕಿದ್ದಾರೆ. ಪ್ರತಿಯೊಬ್ಬ ಪದಾಧಿಕಾರಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಹದಿನೈದು ದಿನಕ್ಕೊಮ್ಮೆ ನಾನು ವರದಿ ಪಡೆಯುತ್ತಿದ್ದೇನೆ. ಸರಿಯಾಗಿ ಕೆಲಸ ಮಾಡದವರನ್ನು ಮುಲಾಜಿಲ್ಲದೆ ಕಿತ್ತು ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಮ್‌ ಬ್ಯಾಕ್‌ ಟು ಪವರ್‌: ವಿಧಾನಸಭೆಗೆ ಚುನಾವಣೆಗೆ ಇನ್ನೂ ಎರಡು ತಿಂಗಳ ಸಮಯವಿದೆ ಎಂಬ ಭಾವನೆ ಬಿಟ್ಟು, ಇಂದಿನಿಂದ
ಪ್ರತಿ ದಿನವೂ ಚುನಾವಣೆ ಎಂಬ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಬಿಜೆಪಿಯ ಕುತಂತ್ರಕ್ಕೆ ಸರಿಯಾಗಿ ಉತ್ತರ ನೀಡಬೇಕು. ಅದಕ್ಕಾಗಿ ಎಲ್ಲರೂ ಸಕ್ರಿಯರಾಗಿ ಕಾರ್ಯ ನಿರ್ವಹಿಸುವಂತೆ ವೇಣುಗೋಪಾಲ್‌ ಸೂಚಿಸಿದ್ದಾರೆ. ಸಭೆಯ ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಮನೆ, ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮವನ್ನು ಮಾರ್ಚ್‌ 20 ರಿಂದ ಮತ್ತೂಂದು ಬಾರಿ ಎಲ್ಲ ಕ್ಷೇತ್ರಗಳಲ್ಲಿಯೂಆರಂಭಿಸಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್‌ನ ಬಗ್ಗೆ ಬಿಜೆಪಿಯವರು ಮಾಡುತ್ತಿರುವ ಸುಳ್ಳು ಆರೋಪಗಳಿಗೆ ತಿರುಗೇಟು ನೀಡಬೇಕೆಂದು ತೀರ್ಮಾನಿಸಿದ್ದೇವೆ. ಟಿಕೆಟ್‌ ಆಕಾಂಕ್ಷಿಗಳಾಗಿರುವ ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿ ಕ್ಷೇತ್ರದಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳಲು ಸೂಚನೆ ನೀಡಿದ್ದೇವೆ ಎಂದರು.


Trending videos

Back to Top