ಚೀಫ್ ವಿಪ್ ಅಶೋಕ ಅವರಿಗೆ ಪಿತೃವಿಯೋಗ

ರಾಮದುರ್ಗ: ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರ ತಂದೆ, ಮಾಜಿ ಶಾಸಕ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಡಾ| ಮಹಾದೇವಪ್ಪ ಪಟ್ಟಣ (107) ಶುಕ್ರವಾರ ಬೆಳಗ್ಗೆ ನಿಧನರಾದರು.
ಕಳೆದೆರಡು ವರ್ಷಗಳಿಂದಲೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಶುಕ್ರವಾರ ಬೆಳಗ್ಗೆ 5-30ಕ್ಕೆ ಆರೋಗ್ಯದಲ್ಲಿ ಏರುಪೇರಾಗಿ ನಿಧನ ಹೊಂದಿದರು. ಮೃತರಿಗೆ ಪತ್ನಿ ಮಾಜಿ ಶಾಸಕಿ ಶಾರದಮ್ಮ ಪಟ್ಟಣ, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಸೇರಿದಂತೆ ನಾಲ್ಕು ಗಂಡು ಮಕ್ಕಳು, ಇಬ್ಬರು ಪುತ್ರಿಯರಿದ್ದಾರೆ.
1939ರಲ್ಲಿ ರಾಮದುರ್ಗ ರಾಜನ ಕರ ವಸೂಲಿ ವಿರೋಧಿಸಿ ಚಳವಳಿ ನಡೆಸಿದ ಕಾರಣಕ್ಕೆ ಸರ್ಕಾರ ಅವರ ವಿರುದಟಛಿ ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶ ನೀಡಿತ್ತು. ಅಂದಿನಿಂದ ಸುಮಾರು 7 ವರ್ಷಗಳ ಕಾಲ ಅಜ್ಞಾತವಾಸ ಅನುಭವಿಸಿ ಅವರು ರಾಮದುರ್ಗಕ್ಕೆ ಮರಳಿದ್ದರು. 1957ರಲ್ಲಿ ಲೋಕಸೇವಾ ಜನಸಂಘದಿಂದ ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಜಯ ಸಾಧಿಸಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಕಳೆದ ವರ್ಷ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಲ್ಲದೇ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಗೌರವ ಡಾಕ್ಟರೆಟ್ ನೀಡಿ ಸನ್ಮಾನಿಸಿತ್ತು. ದೊಡಮಂಗಡಿಯ ಅವರ ತೋಟದಲ್ಲಿ ಸರಕಾರಿ ಗೌರವದೊಂದಿಗೆ ಶುಕ್ರವಾರ ಸಂಜೆ ಮೃತ ದೇಹದ ಅಂತ್ಯಕ್ರಿಯೆ ನೆರವೇರಿತು.