CONNECT WITH US  

ಬಾದಾಮಿಯಲ್ಲಿ ಮುಖ್ಯಮಂತ್ರಿ ಗೆಲ್ಲಿಸಲು ಜಾರಕಿಹೊಳಿ ರಣತಂತ್ರ

ಬಾದಾಮಿ: ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಸಂಸದ ಶ್ರೀರಾಮುಲು ಅವರ ಸ್ಪರ್ಧೆಯಿಂದ ಗಮನ ಸೆಳೆದಿರುವ ಬಾದಾಮಿ ಕ್ಷೇತ್ರದಲ್ಲಿ 3ನೇ ಅತಿದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ಸಮಾಜದ ಮತಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದೆ.

ಬಿಜೆಪಿಯಿಂದ ಸ್ಪರ್ಧಿಸಿರುವ ಶ್ರೀರಾಮುಲು ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮಾಜದ ಮತಗಳು ಕಾಂಗ್ರೆಸ್‌ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಲು ಸಿಎಂ ಆಪ್ತ, ಮಾಜಿ ಸಚಿವ ಸತೀಶ ಜಾರಕಿಹೋಳಿ ಕ್ಷೇತ್ರದಲ್ಲಿ ತಂತ್ರಗಾರಿಕೆ ನಡೆಸಿದ್ದಾರೆ. ಅಲ್ಲದೇ ಬಾದಾಮಿ ಕ್ಷೇತ್ರಕ್ಕೆ ಪಕ್ಷೇತರರಾಗಿ ವಾಲ್ಮೀಕಿ ಸಮಾಜದವರೂ ನಾಮಪತ್ರ ಸಲ್ಲಿಸಿದ್ದು, ಅವರನ್ನು ಕರೆದು ಮಾತನಾಡಿಸಿ ಕಣದಿಂದ ಹಿಂದೆ ಸರಿದು ಸಿಎಂ ಪರವಾಗಿ ಕೆಲಸ ಮಾಡಲು ಜಾರಕಿಹೊಳಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾದರೆ ಏ.27ರಂದು ಅವರೆಲ್ಲ ನಾಮಪತ್ರ ಹಿಂದಕ್ಕೆ ಪಡೆದು ಕಾಂಗ್ರೆಸ್‌ಗೆ ಬೆಂಬಲ ಕೊಡುವ ಸಾಧ್ಯತೆಯಿದೆ.

ದೇವರಾಜಗೆ ಸತೀಶ ಸಮಾಧಾನ: 2013 ಮತ್ತು 2018ರ ಎರಡೂ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರಕ್ಕೆ ಕಾಂಗ್ರೆಸ್‌ ಟಿಕೆಟ್‌
ಘೋಷಣೆ ಮಾಡಿದರೂ ಸ್ಪರ್ಧೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಡಾ.ದೇವರಾಜ ಪಾಟೀಲ ಮತ್ತು ಅವರ ಪತ್ನಿ ಡಾ.ಭಾಗ್ಯಶ್ರೀ
ಪಾಟೀಲ ಅವರನ್ನು ಕರೆದು ಸಮಾಧಾನ ಹೇಳಿದ ಸತೀಶ, "ನಿಮ್ಮ ಬಗ್ಗೆ ಪಕ್ಷದ ನಾಯಕರಿಗೆ ಉತ್ತಮ ಅಭಿಪ್ರಾಯವಿದೆ. ತ್ಯಾಗ ಮಾಡಿದವರೇ ಮುಂದೆ ಬೆಳೆಯುತ್ತಾರೆ. ಸದ್ಯಕ್ಕೆ ಎಲ್ಲರೂ ಕೂಡಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ. ನಿಮಗೆ ಉತ್ತಮ ಭವಿಷ್ಯವಿದೆ' ಎಂದು ಹೇಳಿದ್ದಾರೆ ಎನ್ನಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ ಸಮಾಜದ ಬಳಿಕ ವಾಲ್ಮೀಕಿ ಸಮಾಜ ಬಲಿಷ್ಠವಾಗಿದ್ದು, ಅದೇ ಕಾರಣಕ್ಕೆ ಬಿಜೆಪಿ ಕೂಡ ಇಲ್ಲಿ ಅದೇ ಸಮಾಜಕ್ಕೆ ಸೇರಿದ ವ್ಯಕ್ತಿಯನ್ನು ಕಣಕ್ಕಿಳಿಸಿದೆ.


Trending videos

Back to Top