CONNECT WITH US  

ಕುರುಬರಿದ್ದಾರೆಂದು ಬಾದಾಮಿಗೆ ಹೋದರು

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಕುರುಬರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಅಲ್ಲಿಯೂ ಸ್ಪರ್ಧಿಸುತ್ತಾರೆ ಎಂದರೆ ಇದೆಂತಹ ಸಮಾಜವಾದ... ಜಾತ್ಯತೀತವಾದ...! ರಾಯಣ್ಣ ಬ್ರಿಗೇಡ್‌ ಮೂಲಕ ಬಿಜೆಪಿಯ ಕೆಲವು ನಾಯಕರಲ್ಲಿ ತಳಮಳ ಸೃಷ್ಟಿಸಿ ವಿವಾದಕ್ಕೂ ಕಾರಣವಾಗಿದ್ದ ಬೆಂಕಿ ಉಗುಳುವ ನಾಯಕ ಎಂದೇ ಬಿಂಬಿತರಾಗಿರುವ ಕೆ.ಎಸ್‌. ಈಶ್ವರಪ್ಪ ಖಡಕ್‌ ಮಾತುಗಳಿವು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ "ಉದಯವಾಣಿ'ಗೆ ಸಂದರ್ಶನ ನೀಡಿದ ಅವರು, ಸಿದ್ದರಾಮಯ್ಯನವರು ತಾವು ಸಮಾಜವಾದಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಸಮಾಜವಾದದ ಯಾವ ತತ್ವವೂ ಅವರಲ್ಲಿ ಕಾಣುತ್ತಿಲ್ಲ ಎಂದು ಹೇಳಿದರು.

ಸಂದರ್ಶನದ ಸಾರಾಂಶ:

- ಈಶ್ವರಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ಶಿವಮೊಗ್ಗ ಬಿಟ್ಟು ಕದಲುತ್ತಿಲ್ಲ ಯಾಕೆ?
ಹಾಗೇನೂ ಇಲ್ಲ. ಪಕ್ಷ ಯಾವ ಸಂದರ್ಭದಲ್ಲಿ ಯಾವ್ಯಾವ ಕ್ಷೇತ್ರದಲ್ಲಿ ನಾನು ಪ್ರಚಾರದಲ್ಲಿ ಇರಬೇಕೆಂದು
ತೀರ್ಮಾನಿಸುತ್ತದೆಯೋ ಆ ಎಲ್ಲ ಕಡೆಗಳಲ್ಲಿ ಹೋಗಿ ಪ್ರಚಾರ ಮಾಡುತ್ತೇನೆ. ಇಲ್ಲಿ ಬೇರೆ ಯಾವ ಅರ್ಥವೂ ಇಲ್ಲ. ಇದು ಪಕ್ಷದ ವ್ಯವಸ್ಥೆ. ನನ್ನ ಬಿಡುವಿನ ದಿನಾಂಕಗಳನ್ನೂ ತಿಳಿಸಿದ್ದೇನೆ.

- ಅಮಿತ್‌ ಶಾ, ನರೇಂದ್ರ ಮೋದಿ ಬಂದಾಗಲೂ ಹೋಗಲಿಲ್ಲ, ಯಡಿಯೂರಪ್ಪ ಜತೆಗೂ ಕಾಣಿಸಿ ಕೊಳ್ಳಲಿಲ್ಲ...
ಎಲ್ಲರೂ ಎಲ್ಲರ ಜತೆ ಇರಬೇಕೆಂದಿಲ್ಲ. ಪಕ್ಷ ವಹಿಸುವ ಜವಾಬ್ದಾರಿ ಮಾಡಬೇಕು ಅಷ್ಟೇ. ನಾನು ಅಭ್ಯರ್ಥಿಯಾಗಿ ಇಲ್ಲಿ ಸ್ವಲ್ಪ ದಿನ ಪ್ರಚಾರ ಮಾಡಿ ನಂತರ ರಾಜ್ಯದೆಲ್ಲೆಡೆ ಪ್ರಚಾರಕ್ಕೆ ತೆರಳುತ್ತೇನೆ.

- ರಾಯಣ್ಣ ಬ್ರಿಗೇಡ್‌ನ‌ ಅಧ್ಯಕ್ಷರು ತಮಗೆ ಟಿಕೆಟ್‌ ನೀಡಿಲ್ಲ ಎಂದು ಕಾಂಗ್ರೆಸ್‌ ಸೇರಿದ್ದಾರೆ. ಇನ್ನೂ ಕೆಲವು ಮುಖಂಡರು ಬೇರೆ ದಾರಿ ನೋಡಿಕೊಂಡಿದ್ದಾರಲ್ಲಾ ?
 ರಾಯಣ್ಣ ಬ್ರಿಗೇಡ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ನಾನು ಬ್ರಿಗೇಡ್‌ ಸಂಘಟನೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಹೈಕಮಾಂಡ್‌ ಮಾತಿಗೆ ಬದ್ಧನಾಗಿ ಬ್ರಿಗೇಡ್‌ನಿಂದ ದೂರ ಉಳಿದಿದ್ದೆ. ಅದು ರಾಜಕೀಯೇತರ ಸಂಘಟನೆ. ಅದರ ಅಧ್ಯಕ್ಷರೂ ಸೇರಿದಂತೆ ಕೆಲವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಟಿಕೆಟ್‌ ಸಿಕ್ಕಿಲ್ಲ. ಇದರಿಂದ ಮುನಿಸಿಕೊಂಡು ಬೇರೆ ಪಕ್ಷ ಸೇರಿರಬಹುದು. ಹಾಗೆಂದು ಪಕ್ಷಕ್ಕೆ ಹಾನಿಯಾಗಿಲ್ಲ. ಆಗುವುದೂ ಇಲ್ಲ.

- ನಿಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ಸಾಧ್ಯವಾಗಲಿಲ್ಲವೇ?
ಪಕ್ಷದ ತೀರ್ಮಾನ ಅಂತಿಮ. ಎಲ್ಲರೂ ಪಕ್ಷದವರೇ.

- ನಿಷ್ಠಾವಂತರಿಗೆ ಈ ಬಾರಿ ಟಿಕೆಟ್‌ ನೀಡಿಲ್ಲ, ಕಳಂಕಿತರಿಗೆ ಮಣೆ ಹಾಕಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ?
ಕೆಲವೆಡೆ ನಿಷ್ಠಾವಂತರಿಗೆ ಟಿಕೆಟ್‌ ಸಿಗದ ಕಾರಣ ನೋವಿದೆ. ಆಕಾಂಕ್ಷಿಯಾಗಿದ್ದವರಿಗೆ ಟಿಕೆಟ್‌ ಸಿಗದಿದ್ದಾಗ ಬೇಸರ ಸಹಜ. ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. 

- ಜನಾರ್ದನ ರೆಡ್ಡಿಗೆ ಸಂಬಂಧವಿಲ್ಲ ಎಂದು ಪ್ರಚಾರಕ್ಕೆ ಕರೆತರಲಾಗಿದೆಯಲ್ಲಾ?
ಜನಾರ್ದನ ರೆಡ್ಡಿಯ ಮೇಲೆ ಆರೋಪ ಇರುವುದು ನಿಜ. ಅವರಿಗೆ ಪಕ್ಷ ಟಿಕೆಟ್‌ ನೀಡಿಲ್ಲ. ಚುನಾವಣಾ ಪ್ರಚಾರದಲ್ಲಿ ಕೂಡ ಭಾಗಿಯಾಗದಂತೆ ಹೈಕಮಾಂಡ್‌ ತಾಕೀತು ಮಾಡಿದೆ. ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸ್ಪಷ್ಟ. ಆದರೆ ಅವರ ಜೊತೆಯಲ್ಲಿ ಇದ್ದವರು ಏನು ತಪ್ಪು ಮಾಡಿದ್ದಾರೆ? ಅವರ ಸೋದರನಿಗೆ ಕಳೆದ ಬಾರಿಯೂ ಟಿಕೆಟ್‌ ನೀಡಿದ್ದೇವೆ. ಈ ಬಾರಿಯೂ ನೀಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಶ್ರೀರಾಮುಲು
ಪರ ವೈಯಕ್ತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಅಷ್ಟೇ.

- ವಿಜಯೇಂದ್ರಗೆ ಟಿಕೆಟ್‌ ನಿರಾಕರಿಸಿದ್ದೇಕೆ?
 ಟಿಕೆಟ್‌ ನಿರಾಕರಿಸಲಾಗಿಲ್ಲ. ವರುಣಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಮೊದಲ ಸಭೆಯಲ್ಲಿಯೇ ಅವಿರೋಧವಾಗಿ ವಿಜಯೇಂದ್ರ ಅವರ ಹೆಸರು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಿತ್ತು. ಮೊದಲ ಪಟ್ಟಿಯಲ್ಲಿ ಅವರ ಹೆಸರನ್ನು ನಿರೀಕ್ಷಿಸಿದ್ದೆವು. ನಾಮಪತ್ರ ಸಲ್ಲಿಕೆಯ ದಿನ ವಿಜಯೇಂದ್ರ
ಅವರಿಗೆ ಟಿಕೆಟ್‌ ಇಲ್ಲ ಎಂದು ಹೈಕಮಾಂಡ್‌ ಹೇಳಿತು. ಇದನ್ನು ಆರಂಭದಲ್ಲಿಯೇ ಹೇಳಿದ್ದರೆ ಈ ಎಲ್ಲ ಗೊಂದಲಗಳು ನಡೆಯುತ್ತಿರಲಿಲ್ಲ. ಈ ಘಟನೆಯಿಂದ ನನಗೂ ಬೇಸರವಾಗಿದೆ. ಆದರೆ ಹೈಕಮಾಂಡ್‌ ಆದೇಶಕ್ಕೆ ನಾವೆಲ್ಲ ಬದ್ಧರು.

- ಬಿಜೆಪಿಯಲ್ಲಿನ್ನೂ ಗೊಂದಲ ಬಗೆಹರಿದಿಲ್ವಾ?
ಯಾವ ಗೊಂದಲಗಳೂ ಇಲ್ಲ. ಎಲ್ಲರೂ ಒಂದಾಗಿಯೇ ಕೆಲಸ ಮಾಡುತ್ತಿದ್ದೇವೆ. ಎಲ್ಲವನ್ನೂ ಬದಿಗೊತ್ತಿ ಏಕಶಿಲೆಯಂತೆ ನಿಂತಿದ್ದೇವೆ.

- ಜೆಡಿಎಸ್‌ ಜತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತಿದೆಯಲ್ಲಾ?
ಅವೆಲ್ಲಾ ಸುಳ್ಳು. ಬಿಜೆಪಿಗೆ ಪೂರ್ಣ ಬಹುಮತ ಬಂದೇ ಬರುತ್ತದೆ. ಹೀಗಿರುವಾಗ ಒಳ ಒಪ್ಪಂದದ ಅಗತ್ಯವೇನಿದೆ. ದೇವೇಗೌಡರು ಅದನ್ನು ನಿರಾಕರಿಸಿದ್ದಾರೆ. ದೇವೇಗೌಡರು- ಕುಮಾರಸ್ವಾಮಿ ಒಟ್ಟಿಗೆ ಇರಬೇಕು. ನಮ್ಮಿಂದ ಅವರ ಕುಟುಂಬ ಯಾಕೆ ಒಡೆಯಬೇಕು.

- ಬಿಜೆಪಿ ಯಾವ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ?
ರಾಷ್ಟ್ರವಾದ ಮತ್ತು ಅಭಿವೃದ್ಧಿ ಮುಂಚೂಣಿಯ ವಿಷಯಗಳು. ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದ ಅಭಿವೃದ್ಧಿ ಮತ್ತು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಾರ್ಯ ಯೋಜನೆಗಳು ಜನರನ್ನು ಸೆಳೆದಿದೆ. ನಮ್ಮ ವೈರಿ ದೇಶ ಪಾಕಿಸ್ತಾನವನ್ನು ಏಕಾಂಗಿಯಾಗಿ ಮಾಡಿದ ಹೆಗ್ಗಳಿಕೆ ಮೋದಿಯವರದ್ದು. ಇದೆಲ್ಲವೂ ಈ ಬಾರಿಯ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ.

- ಬಿಜೆಪಿ ಬಳಿ ವಿಷಯಗಳೇ ಇಲ್ಲ ಅಂತ ಸಿದ್ದರಾಮಯ್ಯ ಹೇಳ್ತಾರಲ್ಲಾ?
 ಬಾದಾಮಿಯಲ್ಲಿ ಕುರುಬರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅಲ್ಲಿ ಸ್ಪರ್ಧೆ ಮಾಡ್ತಾರೆ ಅಂದರೆ ಇದೆಂತಹ ಸಮಾಜವಾದ...ಜಾತ್ಯತೀತವಾದ.... ಅವರ ಮಾತು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಸಿದ್ದರಾಮಯ್ಯ ಅಹಿಂದ ವರ್ಗದ ಪರ ಎನ್ನುತ್ತಾರೆ. ಇದುವರೆಗೆ ಈ ವರ್ಗಕ್ಕೆ ಯಾವ ಯೋಜನೆಯನ್ನೂ ರೂಪಿಸಿಲ್ಲ. ಇಟ್ಟ ಹಣ ಖರ್ಚು ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ ಹಿಂದುಳಿದ ಮತ್ತು ದಲಿತ ವರ್ಗದ ಮಠಗಳ
ಮಠಾಧಿಪತಿಗಳು ಒಕ್ಕೂಟ ರಚಿಸಿಕೊಂಡು ಈ ವರ್ಗಕ್ಕೆ ಸೌಲಭ್ಯ ನೀಡುವಂತೆ ಕೋರಿದ್ದರು. ಆಗ 97 ಕೋಟಿ ರೂ.
ಅನುದಾನ ನಿಗದಿಪಡಿಸಿ ಆ ವರ್ಗದ ಮಠಗಳು ನಡೆಸುತ್ತಿರುವ ಶಾಲೆ, ಆಸ್ಪತ್ರೆ ಇನ್ನಿತರ ಸೌಲಭ್ಯಗಳಿಗೆ ಖರ್ಚು ಮಾಡಿದೆವು. ಈ ಸರ್ಕಾರ ಈ ವರ್ಗಕ್ಕೆ ನಿಗದಿಪಡಿಸಿದ ಹಣವನ್ನು ಖರ್ಚು ಮಾಡಿಯೇ ಇಲ್ಲ. ಬದಲಿಗೆ ಮಠಗಳನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದರು. ಗೋಮಾಂಸ ತಿನ್ನಿ ಎಂದರು. ಈಗ ಬಹಿರಂಗವಾಗಿ ಗೋಮಾಂಸ ತಿನ್ನುವಂತೆ ಹೇಳಲಿ ನೋಡೋಣ?

- ಪ್ರತ್ಯೇಕ ಧರ್ಮ ವಿಚಾರದಿಂದ ಮತ ವಿಭಜನೆಯಾಗಲಿದೆಯೇ?
ಖಂಡಿತವಾಗಿಯೂ ಇಲ್ಲ. ವೀರಶೈವ ಮತ್ತು ಲಿಂಗಾಯಿತ ಎಂದು ಸಮಾಜ ಒಡೆಯುವ ಕೆಲಸ ಮಾಡಿದರು. ಆದರೆ ಬಸವಣ್ಣನನ್ನು ನಂಬಿರುವ ಇವರ್ಯಾರೂ ಸಿದ್ದರಾಮಯ್ಯನವರನ್ನು ನಂಬುವುದಿಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಗೊತ್ತಾಗಿ ಹೋಗಿದೆ. 

- ಗೋಪಾಲ್‌ ಯಡಗೆರೆ

Trending videos

Back to Top