CONNECT WITH US  

ಖರ್ಗೆಗೆ ಕಾಂಗ್ರೆಸ್‌ ಮೋಸ

ಕಾಂಗ್ರೆಸ್‌ ವಿರುದ್ಧ ದಲಿತ ಕಾರ್ಡ್‌ ಪ್ರಯೋಗಿಸಿದ ಮೋದಿ

ಕೆಂಗೇರಿ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಎಸ್‌ಎಂ ಕೃಷ್ಣರೊಂದಿಗೆ ಪ್ರಧಾನಿ ನರೇಂದ್ರ ಮೋದಿ.

ಕಲಬುರಗಿ/ಬಳ್ಳಾರಿ/ಬೆಂಗಳೂರು: ದಲಿತ ಸಮುದಾಯದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2013ರ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ, ಮಾತು ತಪ್ಪುವ ಮೂಲಕ ಕಾಂಗ್ರೆಸ್‌ ದಲಿತರಿಗೆ ಮೋಸ‌ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ನಡೆಸಿದ್ದಾರೆ.

ಹೈದರಾಬಾದ್‌ ಕರ್ನಾಟಕ ಭಾಗದ ಪ್ರಮುಖ ನಗರ ಕಲಬುರಗಿ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ರ್ಯಾಲಿ ನಡೆಸಿದ ಅವರು, ಕಾಂಗ್ರೆಸ್‌ ವಿರುದ್ಧ ನೇರವಾಗಿ ದಲಿತ ಕಾರ್ಡ್‌ ಪ್ರಯೋಗ ಮಾಡಿದರು. ಮೊನ್ನೆಯಷ್ಟೇ ಕನ್ನಡಿಗ ಮಾಜಿ ಪ್ರಧಾನಿ ದೇವೇಗೌಡರಿಗೆ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ ಎಂದು ಹೇಳಿ ಒಕ್ಕಲಿಗ ಸಮುದಾಯ ಗೆಲ್ಲಲು ತಂತ್ರಗಾರಿಕೆ ಮಾಡಿದ್ದ ಮೋದಿ ಅವರು, ಇದೀಗ ಕಾಂಗ್ರೆಸ್‌ ದಲಿತ ಸಮುದಾಯಕ್ಕೂ ಮೋಸ ಮಾಡಿದೆ ಎಂದು ಹೇಳುವ ಮೂಲಕ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ.

2013ರ ವಿಧಾನಸಭೆ ಚುನಾವಣೆಗೂ ಮುನ್ನ ದಲಿತ ಸಮುದಾಯದ ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ಅವರ ಹೆಸರಲ್ಲೇ ಮತ ಪಡೆದು ಕಡೆಗೆ ಮೋಸ ಮಾಡಿದ್ದೀರಿ. ಆದರೆ, ಬಿಜೆಪಿ ನಿಮ್ಮ ರೀತಿ ಮಾಡಲಿಲ್ಲ. ಮುಸ್ಲಿಂ ಸಮುದಾಯದ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಮತ್ತು ದಲಿತ ಮಹಿಳೆಯ ಪುತ್ರ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಹುದ್ದೆಗೇರಿಸಿದ್ದು ಬಿಜೆಪಿ ಎಂದರು. 

ಇದಷ್ಟೇ ಅಲ್ಲ, ಬಿಜೆಪಿ ನೀತಿಯ ಕಾರಣದಿಂದಲೇ ಹಿಂದುಳಿದ ಸಮುದಾಯದ ಹಾಗೂ ಟೀ ಮಾರಾಟ ಮಾಡುತ್ತಿದ್ದ ತಾವು ಕೂಡ ಪ್ರಧಾನಿಯಾದದ್ದು ಎಂದು ಹೇಳಿ, ಕಾಂಗ್ರೆಸ್‌ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಅಹಿಂದ ಅಸ್ತ್ರವನ್ನೂ ಪ್ರಯೋಗಿಸಿದ್ದಾರೆ.

ಸರ್ಜಿಕಲ್‌ ಸ್ಟ್ರೈಕ್‌ಗೆ ಕ್ಯಾಮೆರಾ ಬೇಕಿತ್ತೇ?: ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ ನಮ್ಮ ಸೇನೆಗೆ ಗೌರವ ಕೊಡಲೇ ಇಲ್ಲ. ಮೊದಲ ಪ್ರಧಾನಿ ನೆಹರು ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್‌, ಆಗ ಸರ್ಜಿಕಲ್‌ ಸ್ಟ್ರೈಕ್‌ ಮಾಡಿದ್ದ ಕನ್ನಡಿಗರಾದ ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ಹಾಗೂ ಜನರಲ್‌ ತಿಮ್ಮಯ್ಯ ಅವರನ್ನು ಅವಮಾನ ಮಾಡಿದ್ದರು. ಈಗ ನಾವು ಸರ್ಜಿಕಲ್‌ ಸ್ಟ್ರೈಕ್‌ ಮಾಡಿದಾಗಲೂ, ಅದಕ್ಕೆ ಕಾಂಗ್ರೆಸ್‌ನವರು ಸಾಕ್ಷ್ಯ ಕೇಳುತ್ತಿದ್ದಾರೆ. ನಮ್ಮ ಯೋಧರು ಇವರಿಗೆ ಸಾಕ್ಷ್ಯ ನೀಡುವ ಸಲುವಾಗಿ ಸರ್ಜಿಕಲ್‌ ಸ್ಟ್ರೈಕ್‌ಗೆ ಗನ್‌ ತೆಗೆದುಕೊಂಡು ಹೋಗಬೇಕಿತ್ತೋ ಅಥವಾ ಕ್ಯಾಮೆರಾ ತೆಗೆದುಕೊಂಡು ಹೋಗಬೇಕಿತ್ತೋ ಎಂದು ಮೋದಿ ಪ್ರಶ್ನಿಸಿದ್ದಾರೆ.

ಸಿದ್ಧರೂಪಯ್ಯ ಸರ್ಕಾರ: ಅತ್ತ ಬಳ್ಳಾರಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ ಅವರು, ಕಾಂಗ್ರೆಸ್‌ ಸರ್ಕಾರವನ್ನು ಸಿದ್ಧರೂಪಯ್ಯ ಸರ್ಕಾರ ಎಂದು ಕರೆದರು. ಈ ಸರ್ಕಾರ ಇಡೀ ರಾಜ್ಯವನ್ನು ಸಾಲದ ಸುಳಿಯಲ್ಲಿ ಇಟ್ಟಿದೆ ಎಂದ ಮೋದಿ, ವಿಜಯನಗರ ಅರಸರು ಆಳಿದ್ದ ಈ ನೆಲವನ್ನು ಕಳ್ಳ-ಕಾಕರ ನೆಲ ಎಂದು ಕಾಂಗ್ರೆಸ್‌ನವರು ಬಿಂಬಿಸಿದರು. ಈ ಮೂಲಕ ಇಲ್ಲಿನ ಜನರಿಗೆ ಅವಮಾನ ಮಾಡಿದ್ದಾರೆ ಎಂದೂ ಆರೋಪಿಸಿದರು.

ಸೋಲುವ ಪಕ್ಷಕ್ಕೇಕೆ ಓಟು?: ಎರಡು ದಿನಗಳ ಹಿಂದಷ್ಟೇ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ್ದ ಮೋದಿ ಅವರು, ಗುರುವಾರ ಸಂಜೆ ಬೆಂಗಳೂರಿನ ಬಳಿಯ ಕೆಂಗೇರಿಯಲ್ಲಿ ಜೆಡಿಎಸ್‌ ಅನ್ನೇ ಟಾರ್ಗೆಟ್‌ ಮಾಡಿಕೊಂಡರು. ರಾಜ್ಯದ ಎಲ್ಲಾ ಮತದಾರರಿಗೂ ಜೆಡಿಎಸ್‌ ಸೋಲುವ ಮತ್ತು ಮೂರನೇ ಸ್ಥಾನ ಪಡೆಯುವ ಪಕ್ಷ ಎಂಬುದು ಗೊತ್ತು. ಈಗ ಅದು ತೆವಳುತ್ತಾ ಸಾಗುತ್ತಿದೆ. ಬುದ್ಧಿವಂತ ಮತದಾರರ್ಯಾರೂ ಈ ಪಕ್ಷಕ್ಕೆ ಓಟು ಹಾಕಲ್ಲ ಎಂದರು. ಅಲ್ಲದೆ ಜೆಡಿಎಸ್‌ ನಕ್ಸರನ್ನು ಬೆಂಬಲಿಸುವ ಕೋಮುವಾದಿ ಪಕ್ಷಗಳ ಜತೆ ಕೈಜೋಡಿಸಿದೆ ಎಂದು ಆರೋಪಿಸಿದರು.

ಸಿದ್ದು ತಿರುಗೇಟು
ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅವರು ಕನ್ನಡದ ಹೆಮ್ಮೆಯ ಪುತ್ರ. ಇವರಿಗೆ ಅವಮಾನ ಮಾಡುವ ಮಾತೇ ಇಲ್ಲ. ಇವರ ವಿಚಾರದಲ್ಲಿ ರಾಜಕೀಯ ಮಾಡದೆ, ಕರ್ನಾಟಕಕ್ಕಾಗಿ ನೀವು ಮಾಡಿರುವ 5 ಒಳ್ಳೆಯ ಕೆಲಸ ಪಟ್ಟಿ ಮಾಡುತ್ತೀರಾ?; 1. ನೀವು ಕನ್ನಡ ಧ್ವಜಕ್ಕೆ ಒಪ್ಪಿಗೆ ನೀಡುತ್ತೀರಾ? 2. ಬ್ಯಾಂಕಿಂಗ್‌ ಕ್ಷೇತ್ರದ ನೇಮಕಾತಿ ನಿಯಮ ಬದಲಿಸಿ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೀರಾ? 3. ಮಹದಾಯಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುತ್ತೀರಾ? 4ಎಸ್‌ಡಿಆರ್‌ಎಫ್ ಅನುದಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸುತ್ತೀರಾ?

Trending videos

Back to Top