CONNECT WITH US  

ಬಾದಾಮಿಯಲ್ಲಿ ತಿಣುಕಾಡಿ ಗೆದ್ದ ಸಿದ್ದು

ಗೆಲುವಿನ ಅಂತರ ಕೇವಲ 1696 ಮತ; ಮಾನ ಕಾಪಾಡಿದ ಕ್ಷೇತ್ರ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಾದಾಮಿ ಕ್ಷೇತ್ರದ ಗೆಲುವಿನಿಂದ ಹೋದ ಮಾನ ಮರಳಿ ಬಂದಂತಾಗಿದೆ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರಿಗೆ ಚಾಮುಂಡೇಶ್ವರಿ ಕೈ ಕೊಟ್ಟಿದ್ದು, ಬಾದಾಮಿಯ ಬನಶಂಕರಿ ಕೈ ಹಿಡಿದಿದ್ದಾಳೆ.

ಜಿಲ್ಲೆಯಿಂದ ಸ್ಪರ್ಧಿಸಿದ್ದ 5ನೇ ಮುಖ್ಯಮಂತ್ರಿ ಸಾಲಿಗೆ ಸಿದ್ದರಾಮಯ್ಯ ಸೇರಿದ್ದರು. ಬಿ.ಡಿ.ಜತ್ತಿ, ಎಸ್‌. ಆರ್‌.ಕಂಠಿ ತವರು ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿಯಾಗಿದ್ದರು. 1962ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಎಸ್‌.ನಿಜಲಿಂಗಪ್ಪ ಅವರು ಪುನಃ ಸಿಎಂ ಆಗಿದ್ದರು. ವೀರೇಂದ್ರ ಪಾಟೀಲರು ಲೋಕಸಭೆಗೆ ಸ್ಪರ್ಧೆ ಮಾಡಿ ಗೆದ್ದಿದ್ದರು. ಆದರೆ, 1992ರಲ್ಲಿ ಮುಖ್ಯಮಂತ್ರಿ ಆಗಿದ್ದ ರಾಮಕೃಷ್ಣ ಹೆಗಡೆ ಅವರು ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು. ಸಿಎಂರನ್ನೇ ಸೋಲಿಸಿದ ಖ್ಯಾತಿ  ಬಾಗಲಕೋಟೆಗಿತ್ತು. ಈ ಬಾರಿಯೂ ಬಾದಾಮಿಯಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಲಿದ್ದಾರೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಅವರ ಹಳೆಯ ಆಪ್ತ- ಜೆಡಿಎಸ್‌ ಅಭ್ಯರ್ಥಿ ಪಡೆದ
ಮತಗಳಿಂದ ಸಿಎಂ ಪ್ರಯಾಸದ ಗೆಲುವು ಸಾಧಿಸಿದ್ದಾರೆ ಎನ್ನಲಾಗುತ್ತಿದೆ.

ಉಲ್ಟಾ ಹೊಡೆದ ಲೆಕ್ಕಾಚಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಉತ್ತರ ಕರ್ನಾಟಕದ 56 ಮತ್ತು ಮುಂಬೈ ಕರ್ನಾಟಕದ 40 ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. ಉತ್ತರದಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಸಿಎಂ ಬಾದಾಮಿಯಿಂದ ಸ್ಪರ್ಧೆ ಮಾಡಬೇಕು. ಇದರಿಂದ ಪ್ರಮುಖವಾಗಿ ಜಿಲ್ಲೆಯ ಬಾಗಲಕೋಟೆ, ಹುನಗುಂದ, ಬೀಳಗಿ ಕ್ಷೇತ್ರಗಳ ಮೇಲೆ ಮೊದಲ ಪ್ರಭಾವ ಬೀರಲಿದೆ ಎಂದು ಹೇಳಲಾಗಿತ್ತು.
ಬಾದಾಮಿಯಲ್ಲಿ ಸಿಎಂ ಗೆದ್ದರೂ ಅಕ್ಕ-ಪಕ್ಕದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಹೀಗಾಗಿ ಜಿಲ್ಲೆಯಲ್ಲಿಯೇ ಸಿಎಂ ಪ್ರಭಾವ ಬೀರಿಲ್ಲ.

ಹಳೆಯ ಆಪ್ತನೇ ನೆರವು: ಸಿದ್ದರಾಮಯ್ಯ ಅವರು ಜೆಡಿಎಸ್‌ ತೊರೆದು ಎಬಿಪಿಜೆಡಿ ಕಟ್ಟಿದಾಗ ಆ ಪಕ್ಷದಿಂದ ಜಿಪಂ ಸದಸ್ಯನಾಗಿ, ಉಪಾಧ್ಯಕ್ಷರೂ ಆಗಿದ್ದ ಹನುಮಂತ ಮಾವಿನಮರದ, ಬಳಿಕ ಕಾಂಗ್ರೆಸ್‌ ಸೇರಿ ಗುಳೇದಗುಡ್ಡ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರೂ ಆಗಿದ್ದರು. ಎರಡು ವರ್ಷಗಳ ಹಿಂದೆ ಜೆಡಿಎಸ್‌ ಸೇರಿ ಈ ಬಾರಿ ಬಾದಾಮಿಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಇವರು 24,484 ಮತ ಪಡೆದಿದ್ದು, ಇದು ಸಿದ್ದರಾಮಯ್ಯ ಗೆಲುವಿಗೆ ವರದಾನವಾಗಿದೆ. ಇವರ ಸ್ಪರ್ಧೆ ಎರಡೂ ಪಕ್ಷಗಳಿಗೂ ಹೊಡೆತ ಕೊಟ್ಟರೂ, ಬಿಜೆಪಿಗೆ ಹೆಚ್ಚಿನ ಹಿನ್ನಡೆಯಾಗಿದೆ.

ಶ್ರೀಶೈಲ ಕೆ. ಬಿರಾದಾರ

Trending videos

Back to Top