CONNECT WITH US  

ನಾಳೆ ಸಾಲಮನ್ನಾ ಪ್ರಕಟ?

ಪ್ರಧಾನಿ ಮೋದಿ ಭೇಟಿ ಬಳಿಕ ಹೇಳಿಕೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ 

ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಕುರಿತಂತೆ ಪ್ರತಿಭಟನೆ, ಗೊಂದಲ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬುಧವಾರ (ಮೇ 30) ಸಾಲ ಮನ್ನಾ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಯಾವ ಪ್ರಮಾಣದಲ್ಲಿ ರೈತರಿಗೆ ಸಾಲಮನ್ನಾದ ಅನುಕೂಲ ಆಗಲಿದೆ ಎಂಬ ಕುತೂಹಲ ಈಗ ಮೂಡಿದೆ.

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಈ ಬಗ್ಗೆ ಮುನ್ಸೂಚನೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರ ಸಾಲಮನ್ನಾ ಸಾಧ್ಯವಿಲ್ಲ ಎಂದು ನಾನು ಹೇಳಿಲ್ಲ. ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೇಳಿದ್ದೆ. ನಾನೇನೂ ಸುಮ್ಮನೆ ಕುಳಿತಿಲ್ಲ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದು, ಬುಧವಾರ ಬೆಂಗಳೂರಿನಲ್ಲಿ ಈ ಕುರಿತು ಜನರ ಮುಂದೆ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾತ್ರವಲ್ಲದೆ, ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವ ಸಂಬಂಧ ಬುಧವಾರ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು. ಈ ವಿಚಾರದಲ್ಲಿ ಯಾರೂ ಆತಂಕ ಪಡಬೇಕಿಲ್ಲ ಎಂದರು.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಾಲ್ವರು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಕುಟುಂಬದ ನೆರವಿಗೆ ಬರುವವರು ಯಾರು ಎಂದು ಪ್ರಶ್ನಿಸಿದ ಅವರು, ಬುಧವಾರ ಇವೆಲ್ಲದಕ್ಕೂ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಯಾರಿಂದಲೂ ಹೇಳಿಸಿಕೊಳ್ಳಲಾರೆ:
ರೈತರ ಸಾಲ ಮನ್ನಾ ವಿಚಾರದಲ್ಲಿ ಯಾರಿಂದಲೂ ಹೇಳಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಉಸಿರಾಡಲಾದರೂ ಸಮಯ ಬೇಕಲ್ಲವೇ? ರೈತರ ಸಾಲ ಮನ್ನಾ ವಿಚಾರ ಪ್ರಸ್ತಾಪವಾದಾಗ, ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರೂ ಜೆಡಿಎಸ್‌ಗೆ ಜನ ಅಧಿಕಾರ ಕೊಡಲಿಲ್ಲವಲ್ಲಾ ಎಂಬ ನೋವಿನಲ್ಲಿ ಕೆಲವು ಮಾತು ಹೇಳಿದ್ದೇನೆ. ಆದರೆ, ನಾನು ಮುಖ್ಯಮಂತ್ರಿಯಾಗಿರುವುದು ರೈತರು ಸೇರಿದಂತೆ ಈ ನಾಡಿನ ಜನರಿಗೆ ಅನ್ಯಾಯ ಮಾಡುವುದಕ್ಕಲ್ಲ ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಹೀಗಾಗಿ ಜನರ ವಿಚಾರದಲ್ಲಿ ಬಿ.ಎಸ್‌.ಯಡಿಯೂರಪ್ಪ ಅಥವಾ ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ. ಒಂದು ವೇಳೆ ಅಂತಹ ಸ್ಥಿತಿ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ರಾಜಕಾರಣದಲ್ಲಿಯೇ ಇರುವುದಿಲ್ಲ. ನಾನು ಭಾವನಾತ್ಮಕ ವ್ಯಕ್ತಿ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರು ರೈತರ ಪರ ಬಹಳ ವೇಗವಾಗಿ ಹೋಗುತ್ತಿದ್ದಾರೆ. ಅಂತಹ ಆತುರ ನನಗಿಲ್ಲ. ಆದರೆ, ನಮ್ಮಷ್ಟು ಜನರ ಜತೆ ಬೆರೆಯುವ ರಾಜಕಾರಣಿ ಬೇರೆ ಇಲ್ಲ. ಮುಖ್ಯಮಂತ್ರಿಯಾದರೂ ಸಾಮಾನ್ಯ ಜನ ಕೂಡ ನನ್ನ ಬಳಿ ಬಂದು ಸಮಸ್ಯೆ ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇನೆ. ಯಾವುದಕ್ಕೂ ಬುಧವಾರ ಉತ್ತರ ಕೊಡುತ್ತೇನೆ. ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂದರು.

ಅಧಿಕಾರಿಗಳಿಂದ ಮಾಹಿತಿ:
ರಾಜ್ಯದಲ್ಲಿ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿದ ಕೃಷಿ ಸಾಲದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಶುಕ್ರವಾರವೇ ಆರ್ಥಿಕ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸಾಲ ಮನ್ನಾ ಮಾಡಲು ಎಷ್ಟು ಹೊರೆ ಬೀಳುತ್ತದೆ ಎಂಬ ಬಗ್ಗೆಯೂ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿದ್ದರು. ಸದ್ಯ ಸುಮಾರು 53 ಸಾವಿರ ಕೋಟಿ ರೂ. ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಅಧಿಕಾರಿಗಳು ಮತ್ತು ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ಹೇಗೆ ಸಾಲ ಮನ್ನಾ ಮಾಡಬೇಕು ಎಂಬುದರ ಕುರಿತು ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಿದ್ದಾರೆ. ಅದರಂತೆ ಬುಧವಾರ ಸಾಲ ಮನ್ನಾ ಬಗ್ಗೆ ಸರ್ಕಾರದ ನಿರ್ಧಾರವನ್ನು ಘೋಷಣೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ.

ಶಮನಗೊಳ್ಳದ ಸಂಪುಟ ಕಗ್ಗಂಟು
ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಗ್ಗಂಟು ಶಮನಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸೋಮವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರ ಮಧ್ಯೆ ಸುದೀರ್ಘ‌ ಮಾತುಕತೆ ನಡೆಯಿತಾದರೂ ಪ್ರಮುಖ ಖಾತೆಗಳಿಗೆ ಎರಡೂ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ಯಾವುದೇ ನಿರ್ಧಾರಕ್ಕೆ ಬಾರದೆ ಸಭೆ ಅಪೂರ್ಣಗೊಂಡಿದೆ.

ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿರುವುದಕ್ಕೆ ಕಾಂಗ್ರೆಸ್‌ನಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟಿರುವುದರಿಂದ ಕೈಗಾರಿಕೆ, ಕಂದಾಯ, ಅಬಕಾರಿ, ಜಲ ಸಂಪನ್ಮೂಲ ಮುಂತಾದ ಪ್ರಮುಖ ಖಾತೆಗಳು ತಮಗೆ ಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದಿದೆ. ಜತೆಗೆ, ಎರಡನೇ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನೂ ಕಾಂಗ್ರೆಸ್‌ನ ಸಚಿವಾಕಾಂಕ್ಷಿಗಳು ಮುಂದಿಟ್ಟಿದ್ದಾರೆ.

ಕಲ್ಲಿದ್ದಲು ಪೂರೈಕೆ ಬಗ್ಗೆ ಪಿಎಂ ಬಳಿ ಸಿಎಂ ಮನವಿ
ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಬಳಿಕ ಸೋಮವಾರ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಈ ವೇಳೆ, ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದ ರಾಯಚೂರು, ಯರಮರಸ್‌ ಮತ್ತು ಬಳ್ಳಾರಿಯ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಮುಗಿಯುತ್ತಿದ್ದು, ತಕ್ಷಣಕ್ಕೆ ಕಲ್ಲಿದ್ದಲು ಅವಶ್ಯಕತೆ ಇದೆ. ಆದ್ದರಿಂದ ಈ ಬಗ್ಗೆ ಕಲ್ಲಿದ್ದಲು ಸಚಿವಾಲಯಕ್ಕೆ ನಿರ್ದೇಶನ ನೀಡಿ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲು ಪೂರೈಸಲು ನಿರ್ದೇಶನ ನೀಡುವಂತೆ ಪ್ರಧಾನಿಯವರನ್ನು ಕೋರಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮ ಅನುಷ್ಠಾನಕ್ಕೆ ತರಬೇಕಾದರೂ ಕಾಂಗ್ರೆಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ, ತಾವು ಕಾಂಗ್ರೆಸ್‌ನ ಮುಲಾಜಿನಲ್ಲಿರುವುದಾಗಿ ಹೇಳಿದ್ದೇನೆಯೇ ಹೊರತು ನಾಡಿನ ಜನರಿಗೆ ಅಗೌರವ ಸಲ್ಲಿಸಲು ಅಲ್ಲ.
- ಎಚ್‌.ಡಿ.ಕುಮಾರಸ್ವಾಮಿ, ಸಿಎಂ


Trending videos

Back to Top