CONNECT WITH US  

ಸಂಪುಟ ಸರ್ಕಸ್‌: ಕಗ್ಗಂಟಾದ ಕೈ ಆಕಾಂಕ್ಷಿಗಳ ಪಟ್ಟಿ

ಮುಗಿಯದ ಗೊಂದಲ, ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವ ಬಗ್ಗೆ ಪಕ್ಷದಲ್ಲಿ ಅಪಸ್ವರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಕಾಂಗ್ರೆಸ್‌ನಲ್ಲಿ ನಿರಂತರ ಸರ್ಕಸ್‌ ಮುಂದುವರಿದಿದ್ದು, ರಾಜ್ಯ ನಾಯಕರು ಗುರುವಾರ ತಡ ರಾತ್ರಿವರೆಗೂ ಕಸರತ್ತು ನಡೆಸಿದರೂ, ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಕೆ.ಸಿ.ವೇಣುಗೋಪಾಲ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಲವು ಸುತ್ತಿನ ಮಾತುಕತೆ ನಡೆಸಿದರೂ, ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿರುವು ದರಿಂದ ಅಂತಿಮವಾಗಿ ಯಾರು ಸಂಪುಟ ಸೇರಬೇಕೆಂಬ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.

ಹಿರಿಯ ಶಾಸಕರಾದ ಎಚ್‌.ಕೆ. ಪಾಟೀಲ್‌, ಆರ್‌.ವಿ ದೇಶಪಾಂಡೆ, ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ರೋಷನ್‌ ಬೇಗ್‌, ಎಂ.ಬಿ. ಪಾಟೀಲ್‌, ಶಾಮನೂರು ಶಿವಶಂಕರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಬಗ್ಗೆ ಪಕ್ಷದಲ್ಲಿ ಅಪಸ್ವರ ಕೇಳಿ ಬಂದಿರುವುದರಿಂದ ಹಿರಿಯರನ್ನು ಹೊರಗಿಟ್ಟು
ಪಟ್ಟಿ ಸಿದ್ಧಪಡಿಸುವುದು ರಾಜ್ಯ ನಾಯಕರಿಗೆ ಕಷ್ಟವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೀದರ್‌ನಲ್ಲಿ ಮಾಜಿ ಸಚಿವ ಈಶ್ವರ್‌ ಖಂಡ್ರೆಗೆ ಮತ್ತೆ ಅವಕಾಶ ಕಲ್ಪಿಸಿದರೆ, ಬಸವರಾಜ್‌ ಪಾಟೀಲ್‌ ಹುಮ್ನಾಬಾದ್‌ ಬಂಡಾಯ ಏಳುವ ಸಾಧ್ಯತೆಯಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿ ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಟಾಳ್ಕರ್‌ ಮೂವರೂ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ರಮೇಶ್‌ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಟಾಳ್ಕರ್‌ಗೆ ಸಚಿವ ಸ್ಥಾನ ನೀಡಬಾರದು ಎಂದು ರಾಜ್ಯ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಲಕ್ಷ್ಮಿ ಹೆಬ್ಟಾಳ್ಕರ್‌ ಮಹಿಳಾ ಕೋಟಾದಡಿ ಸಂಪುಟದಲ್ಲಿ ಸೇರಲು ಪ್ರಯತ್ನ ನಡೆಸಿದರೆ, ಅವರಿಗೆ ಪರ್ಯಾಯವಾಗಿ ಮಹಿಳಾ ಕೋಟಾದಡಿ ದಲಿತ ಸಮುದಾಯದ ಎಡಗೈ ಪಂಗಡಕ್ಕೆ ಸೇರಿದ ರೂಪಾ ಶಶಿಧರ್‌ಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಎಂ.ಬಿ. ಪಾಟೀಲರಿಗೆ ಅವರ ಜಿಲ್ಲೆಯ ಶಾಸಕರಾದ ಶಿವಾನಂದ ಪಾಟೀಲ್‌ ಹಾಗೂ ಯಶವಂತರಾಯಗೌಡ ಪಾಟೀಲ್‌ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಆದರೆ, ಎಂ.ಬಿ.ಪಾಟೀಲ್‌ ಹೈಕಮಾಂಡ್‌ ಮೂಲಕ ಸಂಪುಟ ಸೇರಲು ನಿರಂತರ ಪ್ರಯತ್ನ ನಡೆಸಿದ್ದಾರೆ. ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 15 -18 ಸಚಿವ ಸ್ಥಾನಗಳನ್ನು ಭರ್ತಿ ಮಾಡಿ, 3-4 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಸಚಿವ ಸ್ಥಾನ ವಂಚಿತರಾಗುವ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸಲು ಯೋಜಿಸಿದ್ದಾರೆಂದು ತಿಳಿದು ಬಂದಿದೆ.

ಇದರ ಮಧ್ಯೆಯೂ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚಿಸಿ ಹೈಕಮಾಂಡ್‌ಗೆ ಪಟ್ಟಿ ರವಾನಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಸದ್ಯ
ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದಿರುವುದರಿಂದ ಮುಂದಿನ ಬುಧವಾರದ ವರೆಗೂ ಸಂಪುಟ ವಿಸ್ತರಣೆ ನಡೆಯುವುದು ಅನುಮಾನ ಎಂದು
ಹೇಳಲಾಗಿದೆ.

ಜೆಡಿಎಸ್‌ ನಾಯಕರ ಜತೆ ನಮ್ಮ ನಾಯಕರು ಸಂಪರ್ಕದಲ್ಲಿದ್ದಾರೆ. ಖಾತೆ ಹಂಚಿಕೆ ವಿಚಾರ ವಾಗಿ ನಿರಂತರ ಚರ್ಚೆ ನಡೆಸುತ್ತಿದ್ದಾರೆ. ಖಾತೆ ಹಂಚಿಕೆ ವಿಷಯ ಎರಡು ದಿನದಲ್ಲಿ ಬಗೆ ಹರಿಯಲಿದೆ.
● ಕೃಷ್ಣ ಭೈರೇಗೌಡ, ಮಾಜಿ ಸಚಿವ

ಸಮ್ಮಿಶ್ರ ಸರ್ಕಾರ ಇರುವುದರಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಶ್ಮೀರದಲ್ಲಿ ಸಂಪುಟ ರಚನೆಗೆ 3 ತಿಂಗಳು ಸಮಯ ತೆಗೆದುಕೊಳ್ಳಲಾಗಿತ್ತು. ಖಾತೆ ಹಂಚಿಕೆ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದೇವೆ.
● ಕೆ.ಸಿ. ವೇಣುಗೋಪಾಲ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ


Trending videos

Back to Top