CONNECT WITH US  

ಕೊರಳಲ್ಲಿ ಹಾವು ಸುತ್ತಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿದ!

ರೋಣ: ಸತತ 6 ತಿಂಗಳಿಂದ ಮಾಸಾಶನ ಬಾರದ ಹಿನ್ನೆಲೆಯಲ್ಲಿ ಪಟ್ಟಣದ ವಯೋ ವೃದ್ಧನೊಬ್ಬ ಜೀವಂತ ಹಾವನ್ನು ಕೊರಳಿನಲ್ಲಿ ಸುತ್ತಿಕೊಂಡು ತಹಶೀಲ್ದಾರ್‌, ಉಪ ಖಜಾನೆ ಇಲಾಖೆ ಕಾರ್ಯಾಲಯಕ್ಕೆ ತೆರಳಿ ಮಾಸಾಶನ ಬಿಡುಗಡೆಗೆ ಒತ್ತಾಯಿಸಿದ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.

ಸಾಕಷ್ಟು ಬಾರಿ ಕಚೇರಿಗೆ ಅಲೆದರೂ ತನ್ನ ಕೆಲಸಕ್ಕೆ ಸ್ಪಂದಿಸದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ರಾಜಾಖಾನ, ಬೆಳಗ್ಗೆ ಜೀವಂತ ಹಾವಿನೊಂದಿಗೆ ತಹಶೀಲ್ದಾರ್‌, ಉಪ ಖಜಾನೆಯ ಕಚೇರಿಗೆ ಆಗಮಿಸಿ, ನನಗೆ ಅಂಗವಿಕಲ ಮಾಸಾಶನ ಬಿಡುಗಡೆ ಮಾಡುತ್ತಿರೋ ಇಲ್ಲವೋ? ಇಲ್ಲದಿದ್ದರೇ ನಿಮ್ಮ ಕಚೇರಿಯಲ್ಲಿ ಹಾವನ್ನು ಬಿಟ್ಟು ಹೋಗುವೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ.

ಇದರಿಂದ ಭಯಗೊಂಡ ಕಚೇರಿ ಸಿಬ್ಬಂದಿ, ತಾಂತ್ರಿಕ ದೋಷದಿಂದ ನಿಮ್ಮ ಖಾತೆಗೆ ಮಾಸಾಶನ ಜಮಾ ಆಗಿಲ್ಲ. ಈ ತಿಂಗಳಿಂದ ಜಮಾ ಮಾಡಲಾಗಿದೆ ಎಂದು ಖಜಾನೆ ಅಧಿ ಕಾರಿಗಳು ಉತ್ತರಿಸಿದ ನಂತರ ಕಚೇರಿಯಿಂದ ಹೊರ ಹೋದ. ನಂತರ ವಿವಿಧ ಸ್ಥಳಗಳಲ್ಲಿ ಕೊರಳಿನಲ್ಲಿ ಹಾವು ಹಿಡಿದು ಜನರ ಮುಂದೆ ಪ್ರದರ್ಶಿಸಿದ.

ಈ ಕುರಿತು ಪ್ರತಿಕ್ರಿಯಿಸಿರುವ ರೋಣ ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ಹಾವಿನೊಂದಿಗೆ ವ್ಯಕ್ತಿಯೋರ್ವ ಮಾಸಾಶನ ಬಿಡುಗಡೆ ಮಾಡುವಂತೆ ಒತ್ತಾಯಿಸಲು ಉಪ ಖಜಾನೆ ಕಚೇರಿಗೆ ಬಂದಿದ್ದ. ಇದು ನನ್ನ ಗಮನಕ್ಕೆ ಬಂದಿಲ್ಲ. ನಾನು ಕಚೇರಿಯಲ್ಲಿ ಇರದೇ ಇರುವ ಸಮಯದಲ್ಲಿ ಏನಾದರೂ ಬಂದಿದ್ದರೆ ಖಜಾನೆ ಇಲಾಖೆ ಸಿಬ್ಬಂದಿಯಿಂದ ಮಾಹಿತಿ ಪಡೆದು ಅವರ ಮಾಸಾಶನ ಬಿಡುಗಡೆ ಮಾಡಲು ಆದೇಶ ನೀಡುತ್ತೇನೆ ಎಂದು ತಿಳಿಸಿದರು.


Trending videos

Back to Top