CONNECT WITH US  

ವಿಧಾನಮಂಡಲ ಅಧಿವೇಶನ ಜುಲೈ ಮೊದಲ ವಾರ ಆರಂಭ

ಬಜೆಟ್‌ ಮಂಡನೆ, ಸಾಲಮನ್ನಾ ಘೋಷಣೆ ಸಾಧ್ಯತೆ

ಬೆಂಗಳೂರು: ಜುಲೈ ಮೊದಲ ವಾರದಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುವ ಸಾಧ್ಯತೆಯಿದ್ದು, ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಜೆಟ್‌ ಮಂಡಿಸಲಿದ್ದಾರೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ರೈತರ ಸಾಲ ಮನ್ನಾಗೆ ನಿಯಮಾವಳಿ, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗೆ ಮಾಸಾಶನ ಬಜೆಟ್‌ನಲ್ಲೇ ಘೋಷಿಸುವ ಸಾಧ್ಯತೆಯಿದೆ.
ಅಧಿವೇಶನ ಎರಡು ವಾರ ನಡೆಸುವ ಸಾಧ್ಯತೆಯಿದ್ದು ಬಜೆಟ್‌ ಮಂಡನೆ ನಂತರ ಬಜೆಟ್‌ ಮೇಲಿನ ಚರ್ಚೆಗೆ ಅವಕಾಶ, ಸರ್ಕಾರದಿಂದ ಉತ್ತರ ಹಾಗೂ ಪ್ರಶ್ನೋತ್ತರ ಕಲಾಪ ಸಹ ನಡೆಸಲು ತೀರ್ಮಾನಿಸಲಾಗಿದೆ ಎಂ ದು ಹೇಳಲಾಗಿದೆ.

ಗುರುವಾರ ಕುಮಾರಸ್ವಾಮಿ ಅವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನಕಾರ್ಯದರ್ಶಿಗಳು, ಕಾರ್ಯದರ್ಶಿ ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಲಿದ್ದು ಮಳೆ ಹಾನಿ, ರೈತರ ಸಾಲ ಸೇರಿ ಹಲವು ಪ್ರಮಖ ವಿಷಯಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ನಂತರ ಎರಡು ವಾರ ನಿಂತರವಾಗಿ ಬಜೆಟ್‌ ಸಿದ್ಧತಾ ಸಭೆಗಳಲ್ಲಿ ತೊಡಗಿ, ಇಲಾಖಾವಾರು ಅಧಿಕಾರಿಗಳ ಜತೆ ಸಭೆ ನಡೆಸಿ ರಾಜ್ಯದ ಆರ್ಥಿಕ ಸ್ಥಿತಿಗತಿ, ಕಳೆದ ಬಜೆಟ್‌ನಲ್ಲಿ ಘೋಷಿಸಿ ಜಾರಿಗೊಳಿಸಿದ ಯೋಜನೆಗಳು, ಜಾರಿ ಮಾಡದಿ ರುವ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ.

ಸಾಲ ಮನ್ನಾಗೆ 50 ಸಾವಿರ ಕೋಟಿ ರೂ.ವರೆಗೆ ಹಂಚುವುದು ಸೇರಿ ಹಲವು ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಸವಾಲು ಆಗಿರುವುದರಿಂದ ಪರ್ಯಾಯ ಮಾರ್ಗೋಪಾಯಗಳ ಬಗ್ಗೆಯೂ ಇಲಾಖೆ ಅಧಿಕಾರಿಗಳು, ಉದ್ಯಮಿ, ಕೈಗಾರಿಕೆ ಸಂಘಟನೆಗಳು, ಐಟಿ-ಬಿಟಿ ವಲಯ.
ಆರ್ಥಿಕ ತಜ್ಞರ ಜತೆಯೂ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. 

ಸಮಾನ ಕಾರ್ಯಸೂಚಿ ಬಗ್ಗೆಯೂ ತೀರ್ಮಾನ
ಅಧಿವೇಶನಕ್ಕೂ ಮುಂಚೆ ಸಂಪುಟದಲ್ಲಿ ಬಾಕಿ ಉಳಿದಿರುವ ಸ್ಥಾನಗಳನ್ನು ಭರ್ತಿ ಮಾಡಿ ಕಾಂಗ್ರೆಸ್‌ ನಲ್ಲಿ ಭುಗಿಲೆದ್ದಿರುವ ಅತೃಪ್ತಿ ಶಮನಗೊಳಿಸುವುದು. ಜತೆಗೆ ಎರಡೂ ಪಕ್ಷದಲ್ಲಿ ಸಚಿವ ಸ್ಥಾನ ವಂಚಿತರಾಗುವ 25 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ಸಹಿತ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಲು ತೀರ್ಮಾನಿಸಲಾಗಿದೆ. ಅಧಿವೇಶನ ಪ್ರಾರಂಭದ ವೇಳೆಗೆ ಅಸಮಾಧಾನ, ಅತೃಪ್ತಿಗೆ ಅಂತ್ಯ ಹಾಡಿ ಸುಗಮವಾಗಿ ಅಧಿವೇಶನ ನಡೆಯುವಂತೆ ಮಾಡಲು ಈಗಾಗಲೇ ಎರಡೂ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ. ಜೂ.14 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸರ್ಕಾರದ ಮೊದಲ ಸಮನ್ವಯ ಸಮಿತಿ ಸಭೆ ನಡೆಯಲಿದ್ದು ಅಲ್ಲಿ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ, ಬಜೆಟ್‌ ಮಂಡನೆ, ಹೊಸ ಯೋಜನೆಗಳ ಸೇರ್ಪಡೆ, ಎರಡೂ ಪಕ್ಷಗಳು ಚುನಾವಣೆಯಲ್ಲಿ ನೀಡಿದ್ದ ಪ್ರಣಾಳಿಕೆಗಳಲ್ಲಿ ಯಾವ ಅಂಶ ಬಜೆಟ್‌ನಲ್ಲಿ ಸೇರ್ಪಡೆ ಮಾಡಬೇಕು. ಸಂಪನ್ಮೂಲ ಕ್ರೋಢೀಕರಣ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲು "ಸಮಾನ ಕಾರ್ಯ ಸೂಚಿ' ರೂಪಿಸುವ ಬಗ್ಗೆಯೂ ಅಂದಿನ ಸಭೆಯಲ್ಲಿ ತೀರ್ಮಾ ನ ವಾಗಲಿದೆ ಎಂದು
ಮೂಲಗಳು ತಿಳಿಸಿವೆ.

Trending videos

Back to Top