CONNECT WITH US  

ರಾಜ್ಯದ 3 ವಿವಿಗಳಿಗೆ ನೂತನ ಕುಲಪತಿಗಳ  ನೇಮಕ

ಬೆಂಗಳೂರು: ಹಂಗಾಮಿ ಕುಲಪತಿಗಳ ಆಡಳಿತದಿಂದಲೇ ಒಂದೂವರೆ ವರ್ಷ ಕಳೆದಿರುವ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕೊನೆಗೂ ನೂತನ ಕುಲಪತಿಗಳ ನೇಮಕವಾಗಿದೆ. ಇದರೊಂದಿಗೆ ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೂ ಹೊಸ ಕುಲಪತಿಗಳ ನೇಮಕವಾಗಿದ್ದು, ರಾಜ್ಯ ಪಾಲ ವಜೂಭಾç ವಾಲಾ ಅವರು ಈ ನೇಮಕಗಳನ್ನು ಮಾಡಿದ್ದಾರೆ.

ಯುವಿಸಿಇ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ.ಆರ್‌.ವೇಣು ಗೋಪಾಲ್‌ ಅವರನ್ನು ಬೆಂಗಳೂರು ವಿವಿಗೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ| ಎಸ್‌. ಸಚ್ಚಿದಾನಂದ ಅವರನ್ನು ರಾಜೀವ್‌ಗಾಂಧಿ ಆರೋಗ್ಯ ವಿವಿಗೆ ಕುಲಪತಿಗಳಾಗಿ ನೇಮಿಸಲಾಗಿದೆ. ಜತೆಗೆ ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಪ್ರೊ| ಈಶ್ವರ್‌ ಭಟ್‌ ಅವರನ್ನು ಕುಲಪತಿಯಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಪ್ರೊ| ಕೆ.ಆರ್‌.ವೇಣುಗೋಪಾಲ್‌ ಅವರು ಮಂಗಳವಾರ ಬೆಂವಿವಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿ ದ್ದಾರೆ. ರಾಜೀವ್‌ ಗಾಂಧಿ ಆರೋಗ್ಯ ವಿವಿಯ ಕುಲಪತಿಯಾಗಿ ಡಾ|ಎಸ್‌.ಸಚ್ಚಿದಾನಂದ ಅವರು ಇನ್ನೂ ಅಧಿಕಾರ ಸ್ವೀಕರಿಸಿಲ್ಲ. 

ಮೈಸೂರು ವಿವಿಗೆ ವಿಸಿ ಇಲ್ಲ
ಮೈಸೂರು ವಿಶ್ವವಿದ್ಯಾ ಲಯದ ಕುಲಪತಿ ಆಯ್ಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಈ ಹಿಂದಿನ ಸರಕಾರ ನೀಡಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಕುಲಪತಿ ನೇಮಕಕ್ಕೆ ಹೊಸದಾಗಿ ಶೋಧನಾ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಸಮಿತಿ ಸಭೆ ಸೇರಿ ಸರಕಾರಕ್ಕೆ ಪ್ರತ್ಯೇಕ ಪಟ್ಟಿ ನೀಡಲಿದೆ. ಅದನ್ನು ಸರಕಾರ ರಾಜ್ಯಪಾಲರಿಗೆ ಸಲ್ಲಿಸಿ, ರಾಜ್ಯಪಾಲರು ಆಯ್ಕೆ ಮಾಡಿ ಆದೇಶ ಹೊರಡಿಸಬೇಕಿದೆ.
 

Trending videos

Back to Top