CONNECT WITH US  

ಭಗವಾನ್‌ಗೂ ಟಾರ್ಗೆಟ್‌; ವಿಚಾರಣೆ ವೇಳೆ ಬಾಯ್ಬಿಟ್ಟ ವಾಗ್ಮೋರೆ

ಬೆಂಗಳೂರು: ಗೌರಿ ಲಂಕೇಶ್‌ ಮಾತ್ರವಲ್ಲ, ಗಿರೀಶ್‌ ಕಾರ್ನಾಡ್‌, ಕೆ.ಎಸ್‌.ಭಗವಾನ್‌ ಸೇರಿದಂತೆ ಹಂತಕರ ಲಿಸ್ಟ್‌ನಲ್ಲಿ ಇನ್ನೂ ಹಲವಾರು ವಿಚಾರವಾದಿ ಹಾಗೂ ಚಿಂತಕರಿದ್ದರೇ? 

ಬಂಧಿತ ಗೌರಿ ಹತ್ಯೆ ಆರೋಪಿ ಪರಶುರಾಮ್‌ ವಾಗ್ಮೋರೆ ವಿಚಾರಣೆ ಸಂದರ್ಭದಲ್ಲಿ ನಮ್ಮ ಹಿಟ್‌ ಲಿಸ್ಟ್‌ನಲ್ಲಿ ಇನ್ನಷ್ಟು ವಿಚಾರವಾದಿಗಳಿದ್ದರು . ಗೌರಿ ಹತ್ಯೆಗೂ ಮೊದಲೇ ಸಾಹಿತಿ ಗಿರೀಶ್‌ ಕಾರ್ನಾಡ್‌ ಕೊಲೆಗೆ ಸಂಚು ರೂಪಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ಗಿರೀಶ್‌ ಕಾರ್ನಾಡ್‌ ಟಾರ್ಗೆಟ್‌ ಕೈಬಿಡಲಾಯಿತು ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಗಿರೀಶ್‌ ಕಾರ್ನಾಡ್‌ ಬಳಿಕ ಸಿ.ಎಸ್‌. ದ್ವಾರಕಾನಾಥ್‌, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ ಮತ್ತು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ವಿಚಾರವಾದಿ ಕೆ.ಎಸ್‌.ಭಗವಾನ್‌ ಅವರನ್ನು ಹತ್ಯೆ ಮಾಡುವ ಯೋಜನೆ ರೂಪಿಸಿದ್ದರು ಎಂದು ವಿಚಾರಣೆಯಲ್ಲಿ ಬಯಲಾಗಿದೆ.

ಡಾ.ಎಂ.ಎಂ.ಕಲಬುರಗಿ ಆ ನಂತರ ಗೌರಿ ಲಂಕೇಶ್‌  ಹತ್ಯೆ ಪ್ರಕರಣಗಳು ನಡೆದಾಗ ರಾಜ್ಯದಲ್ಲಿ ಮತ್ತಷ್ಟು ವಿಚಾರವಾದಿಗಳ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಪೊಲೀಸರು ಸಹ ಬಂಧಿತ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ  ಆ ಕುರಿತ ಮಾಹಿತಿ ಸಂಗ್ರಹಿಸಿದ್ದರು. ಇದೀಗ ಪರಶುರಾಮ್‌ ವಾಗ್ಮೋರೆ ಬಂಧನದ ನಂತರ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. 

ವಿಧಾನಸಭೆ ಚುನಾವಣೆಗೂ ಮೊದಲೇ ಭಗವಾನ್‌ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಇದನ್ನು ಪರಶುರಾಮ್‌ ಕೂಡ ತಪ್ಪೊಪ್ಪಿಗೆ ಹೇಳಿಕೆಯಲ್ಲಿಯೂ ನೀಡಿದ್ದು, ಹೊಟ್ಟೆ ಮಂಜ ಬಂಧನವಾಗದಿದ್ದರೆ ಅದು ಕೂಡ ನಡೆದು ಹೋಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.  ಒಟ್ಟಾರೆ, ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಶಂಕಿತ ರೂವಾರಿ ಪರಶುರಾಮ್‌ ವಾಗೊ¾àರೆ  ಬಂಧನದ ನಂತರ ಹೊರಬರುತ್ತಿರುವ ಮಾಹಿತಿಗಳು ರಾಜ್ಯದ ಪ್ರಗತಿಪರ ಹೋರಾಟಗಾರು, ಸಾಹಿತಿ, ಚಿಂತಕರ ವಲಯದಲ್ಲಿ ಆತಂಕ ಮೂಡಿಸಿದೆ.

ಈ ಮಧ್ಯೆ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪರಶುರಾಮ್‌ ವಾಗ್ಮೋರೆ ಒಬ್ಬ ಧರ್ಮ ರಕ್ಷಕ ಎಂದು ವಿಜಯಪುರ ಶ್ರೀರಾಮಸೇನೆ ಸಂಚಾಲಕ ನೀಲಕಂಠ ಕಂದಗಲ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಗ್ಮೋರೆ ಭಾವಚಿತ್ರವನ್ನು ಹಾಕಿಕೊಂಡು ಶ್ರೀರಾಮ ಸೇನೆಯ ಸಂಚಾಲಕ ಪ್ರಕಟಿಸಿದ್ದು, ಮಾತೃ ಭೂಮಿಯ ರಕ್ಷಣೆಗಾಗಿ ಮುಡುಪಾಗಿದೆ ನನ್ನ ಪ್ರಾಣ. ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅದರಲ್ಲಿ ಬರೆಯಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

Trending videos

Back to Top