CONNECT WITH US  

ಮತ್ತೆ ರಾಯಣ್ಣ ಬ್ರಿಗೇಡ್‌ ಚಟುವಟಿಕೆ ಚುರುಕು

ಬಾಗಲಕೋಟೆಯಲ್ಲಿ ನಾಳೆ ನಡೆಸಲು ಉದ್ದೇಶಿಸಿದ್ದ ಸಭೆ ದಿಢೀರ್‌ ಮುಂದೂಡಿಕೆ

ಬಾಗಲಕೋಟೆ: ರಾಜಕೀಯ ಬಿಕ್ಕಟ್ಟು, ವೈಮನಸ್ಸು, ಜಿದ್ದಾಜಿದ್ದಿಗೆ ಸಾಕ್ಷಿಯಾಗಿ ಕೊಂಚ ತಣ್ಣಗಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಈಗ ಮತ್ತೆ ಸದ್ದು ಮಾಡುತ್ತಿದೆ. ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಂಘಟನೆಯನ್ನು ಚುರುಕುಗೊಳಿಸಲು ಸಜ್ಜಾಗಿರುವ ಪದಾಧಿಕಾರಿಗಳು, ಜೂ.25ರಂದು ಮಧ್ಯಾಹ್ನ 3 ಗಂಟೆಗೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಪ್ರಮುಖರ ಸಭೆಯನ್ನು ಬಾಗಲಕೋಟೆಯಲ್ಲಿ ಆಯೋಜಿಸಿದ್ದಾರೆ. ಈ ಸಭೆಗೆ ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ಶಾಸಕ ಕೆ.ಎಸ್‌.ಈಶ್ವರಪ್ಪ ಆಗಮಿಸುತ್ತಿದ್ದಾರೆ.

ಇದ್ದಕ್ಕಿದ್ದಂತೆ ನಡೆದಿರುವ ಈ ಬೆಳವಣಿಗೆಯಿಂದ ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿದೆ. ರಾಯಣ್ಣ ಬ್ರಿಗೇಡ್‌ ಮೂಲಕ ಈಶ್ವರಪ್ಪ ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಸಂದೇಶ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಇದರಿಂದ ಈಶ್ವರಪ್ಪ ವಿರೋಧಿ ಬಣ ಗರಂ ಆಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿವಿಧ ನಾಯಕರಿಗೆ ಮೌಖೀಕವಾಗಿ ದೂರು ನೀಡಲಾಗಿದೆ. ಬ್ರಿಗೇಡ್‌ನ‌ ಈ ಸಭೆ ಕುರಿತು ವಾದ ವಿವಾದ ಆರಂಭವಾಗುತ್ತಿದ್ದಂತೆ ಶನಿವಾರ ಮಧ್ಯಾಹ್ನ ಸಭೆಯ ಸ್ಥಳ ಬದಲಾಯಿಸಲು ನಿರ್ಧರಿಸಲಾಗಿದೆ.

ಯಡಿಯೂರಪ್ಪ ಅವರೊಂದಿಗೆ ಮುನಿಸಿಕೊಂಡಿದ್ದ ಈಶ್ವರಪ್ಪ, ಬ್ರಿಗೇಡ್‌ನ‌ ಉತ್ತರ ಕರ್ನಾಟಕದ ಬೃಹತ್‌ ಸಮಾವೇಶವನ್ನು 2017ರ ಜ.26ರಂದು ಕೂಡಲಸಂಗಮದಲ್ಲಿ ನಡೆಸಿದ್ದರು. ಈ ಸಮಾವೇಶದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು, ಬಿಜೆಪಿ ವರಿಷ್ಠರಿಗೆ ಈಶ್ವರಪ್ಪ ಅವರನ್ನು ಬಿಜೆಪಿಯಲ್ಲಿ ನಿರ್ಲಕ್ಷಿಸಿದರೆ ಬಂಡಾಯ ಶತಸಿದ್ಧ ಎಂಬ ಸಂದೇಶ ರವಾನಿಸಲಾಗಿತ್ತು. ಆಗ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿ ಸಂಧಾನ ಮಾಡಿದ್ದರು. ಬಳಿಕ ಬ್ರಿಗೇಡ್‌ ಸಂಘಟನೆ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು. ದಾವಣಗೆರೆಯಲ್ಲಿ ಬೃಹತ್‌ ಪ್ರತಿಭಾ ಪುರಸ್ಕಾರ ಮಾಡುತ್ತೇವೆಂದು ಸಂಧಾನದ ಬಳಿಕ ಈಶ್ವರಪ್ಪ ಹೇಳಿಕೊಂಡಿದ್ದರಾದರೂ ಅದು ನಡೆಯಲಿಲ್ಲ.

ಈಶ್ವರಪ್ಪ ಅವರು ಬ್ರಿಗೇಡ್‌ ಚಟುವಟಿಕೆಯಿಂದ ದೂರ ಉಳಿದಾಗ ಸಂಘಟನೆ ರಾಜ್ಯಾಧ್ಯಕ್ಷ ಕೆ. ವಿರೂಪಾಕ್ಷಪ್ಪ, ಬಿಬಿಎಂಪಿ ಮಾಜಿ ಮೇಯರ್‌ ವೆಂಕಟೇಶ ಮೂರ್ತಿ, ಬಿಜೆಪಿ ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಕಾಶಿನಾಥ ಹುಡೇದ, ಬ್ರಿಗೇಡ್‌ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಸೇರಿ ಹಲವಾರು ಪ್ರಮುಖರು ಕಾಂಗ್ರೆಸ್‌ ಸೇರಿದ್ದಾರೆ. ಅವರೆಲ್ಲರನ್ನೂ ಬಿಜೆಪಿಯಲ್ಲಿ ಉಳಿಸಿಕೊಳ್ಳಲು ಸ್ವತಃ ಮುರಳೀಧರರಾವ್‌ ಪ್ರಯತ್ನಿಸಿದ್ದರೂ ಸಫಲವಾಗಿರಲಿಲ್ಲ. ಆದರೆ, ಇವರೆಲ್ಲ ಈಗಲೂ ರಾಯಣ್ಣ ಬ್ರಿಗೇಡ್‌ನ‌ ರಾಜ್ಯ ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಯಾಗಿದ್ದಾರೆ.

ಬದಲಾಗುತ್ತಾ ಸ್ಥಳ?
ಬ್ರಿಗೇಡ್‌ ಸಂಘಟನೆಯ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಪ್ರಮುಖರ ಸಭೆಯನ್ನು ಜೂ.25ರಂದು ಮಧ್ಯಾಹ್ನ 3ಕ್ಕೆ ಬಾಗಲಕೋಟೆಯ ಮಹಾರಾಜ ಗಾರ್ಡನ್‌ ಹತ್ತಿರದ ಬಿ.ವಿ.ಹಲಕಿ ಅವರ ಫಾರ್ಮ್ ಹೌಸ್‌ (ಡೈರಿ)ನಲ್ಲಿ ನಡೆಸಲು ಉದ್ದೇಶಿಸಿದ್ದು, ನಾಲ್ಕೂ ಜಿಲ್ಲೆಗಳ ಪದಾಧಿಕಾರಿಗಲಿಗೆ ಭಾಗವಹಿಸಲು ಕೋರಲಾಗಿತ್ತು. ಈ ಸುದ್ದಿ ಶುಕ್ರವಾರವೇ ನಾಲ್ಕು ಜಿಲ್ಲೆಗಳಲ್ಲಿ ಹರಿದಾಡಿದ್ದು, ಇದರಿಂದ ಬಿಜೆಪಿಯ ನಾಯಕರು, ಗರಂ ಆಗಿ, ವಿಷಯ ವಾದ- ವಿವಾದಕ್ಕೆ ಸಿಲುಕಿದೆ. ಹೀಗಾಗಿ, ಫಾರ್ಮ್ಹೌಸ್‌ ಬದಲು, ಹೊಸ ಪ್ರವಾಸಿ ಮಂದಿರದಲ್ಲಿ ಔಪಚಾರಿಕ ಸಭೆಯಾಗಿ ಇದನ್ನು ಮಾರ್ಪಡಿಸಲಾಗಿದೆ ಎಂದು ಬ್ರಿಗೇಡ್‌ನ‌ ಮೂಲಗಳು ತಿಳಿಸಿವೆ.

ಬ್ರಿಗೇಡ್‌ಗೂ, ಈಶ್ವರಪ್ಪಗೂ ಸಂಬಂಧವಿಲ್ಲ. ಜೂ.25ರಂದು ಬಾಗಲಕೋಟೆಯಲ್ಲಿ ಯಾವುದೇ ಸಭೆ ಕರೆದಿಲ್ಲ. ಅವರು ಒಬ್ಬ ನಾಯಕ ಅಷ್ಟೆ. ಬ್ರಿಗೇಡ್‌ನ‌ಲ್ಲಿ ಬಿರುಕು ಮೂಡಲು, ಸಂಘಟನೆ ಹಾಳಾಗಲು ಈಶ್ವರಪ್ಪ ಅವರೇ ಕಾರಣ. ವದಂತಿಗಳಿಗೆ ಬ್ರಿಗೇಡ್‌ ಪ್ರಮುಖರು ತಲೆ ಕೆಡಿಸಿಕೊಳ್ಳಬಾರದು.
- ಕೆ.ವಿರೂಪಾಕ್ಷಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯಾಧ್ಯಕ್ಷ.

ಬ್ರಿಗೇಡ್‌ ಪಕ್ಷಾತೀತ ಮತ್ತು ಜಾತ್ಯತೀತ ಸಂಘಟನೆ. ನಾನು ಇಂದಿಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ. ಈಶ್ವರಪ್ಪ ಅವರು ಜೂ.25ರಂದು ಬಾಗಲಕೋಟೆಯಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದು ಬ್ರಿಗೇಡ್‌ ಸಭೆ ಆಗಿದ್ದರೆ ನಾನು ಹೋಗುತ್ತೇನೆ. ಒಂದು ವೇಳೆ ಬಿಜೆಪಿ ಪ್ರಮುಖರನ್ನು ಅಷ್ಟೇ ಕರೆದಿದ್ದರೆ ನಾನು ಹೋಗಲ್ಲ.
- ಕಾಶಿನಾಥ ಹುಡೇದ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯ ಪ್ರಧಾನ ಕಾರ್ಯದರ್ಶಿ.

- ಶ್ರೀಶೈಲ ಕೆ. ಬಿರಾದಾರ


Trending videos

Back to Top