CONNECT WITH US  

ವಿದ್ಯಾರ್ಥಿಗಳ ಉಚಿತ ಪಾಸ್‌ ಸಾಲ ತೀರಿಸದ ಸರ್ಕಾರ

ನಾಲ್ಕು ಸಾರಿಗೆ ನಿಗಮಗಳಿಗೆ ನಾಲ್ಕು ವರ್ಷದ 2084 ಕೋಟಿ ರೂ. ಬಾಕಿ

ಹುಬ್ಬಳ್ಳಿ: ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡಬೇಕೆಂಬ ಕೂಗು ಜೋರಾದ ಬೆನ್ನಲ್ಲೇ ಸರ್ಕಾರ ನಾಲ್ಕು ಸಾರಿಗೆ ನಿಗಮಗಳಿಗೆ ನಾಲ್ಕು ವರ್ಷಗಳಿಂದ ನೀಡಬೇಕಾದ 2084 ಕೋಟಿ ರೂ. ಪಾವತಿ ಬಾಕಿ ಉಳಿಸಿಕೊಂಡಿದ್ದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಅಲ್ಲದೇ ಪ್ರಸಕ್ತ ವರ್ಷವೂ ಉಚಿತ ಪಾಸ್‌ ನೀಡಲು ಸಿದ್ಧತೆ ನಡೆಸಿದ್ದು, ಇದರಿಂದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 629 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಬಾಕಿ ಕೇಳಿದರೆ "ನಮ್ಮ ಲೆಕ್ಕ ಚುಕ್ತಾ ಆಗಿದೆ' ಎಂದು ಸರ್ಕಾರ ಸಿದ್ಧ ಉತ್ತರ ನೀಡುತ್ತಿದೆ.

ನಾಲ್ಕು ವರ್ಷದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಒಟ್ಟು 69,91,390 ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್‌ ಪಾಸ್‌ ವಿತರಿಸಲಾಗಿದೆ. ಇದಕ್ಕೆ ತಗುಲಿರುವ ವೆಚ್ಚ 7063.92 ಕೋಟಿ ರೂ. ಈ ವೆಚ್ಚಕ್ಕೆ ಸರ್ಕಾರದಿಂದ ನಾಲ್ಕು ನಿಗಮಗಳಿಗೆ 3648.63 ಕೋಟಿ ರೂ. ಪಾವತಿಯಾಗಬೇಕಿತ್ತು. ಆದರೆ ಆಯವ್ಯಯದಲ್ಲಿ ಘೋಷಿಸಿದ್ದು 2697.52 ಕೋಟಿ ರೂ. ಹೀಗಾಗಿ 951 ಕೋಟಿ ರೂ. ಆಯವ್ಯಯ ಕೊರತೆ ಹಾಗೂ 1133 ಕೋಟಿ ರೂ. ವಿದ್ಯಾರ್ಥಿಗಳ ಪಾಲಿನ ಮೊತ್ತದ ಕೊರತೆಯನ್ನು ಸರ್ಕಾರ ತುಂಬಿಕೊಡುವಲ್ಲಿ ವಿಫ‌ಲವಾಗಿದ್ದು, ಕಳೆದ ನಾಲ್ಕು ವರ್ಷದಲ್ಲಿ 2084 ಕೋಟಿ ರೂ. ಸರ್ಕಾರದಿಂದ ಬರಬೇಕಾಗಿದೆ ಎಂಬುದು ಸಾರಿಗೆ ನಿಗಮಗಳ ಅಧಿಕಾರಿಗಳ ಅಭಿಪ್ರಾಯ.

ಬಾಕಿ ಇಲ್ಲವೆಂದ ಸರ್ಕಾರ!:
ಸರ್ಕಾರ ತನ್ನ ಪಾಲಿನ ಹಾಗೂ ವಿದ್ಯಾರ್ಥಿಗಳ ಪಾಲಿನ ಕೊರತೆಯ ಬಾಕಿ ನೀಡುವಲ್ಲಿ ಹಿಂದೇಟು ಹಾಕುತ್ತಿದ್ದು, ಬಾಕಿ ವಸೂಲಿಗೆ ನಿಗಮದ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದರೂ ಸಕಾರಾತ್ಮಕ ಸ್ಪಂದನೆಯಿಲ್ಲದಂತಾಗಿದೆ. ವಿಧಾನಸೌಧನಕ್ಕೆ ಅಲೆದಾಡುವುದಾಗಿದೆಯೇ ಹೊರತು ಯಾವುದೇ ಪ್ರಯೋಜನವಾಗಿಲ್ಲ. "ಸರ್ಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಯಾವುದೇ ಪಾವತಿ ಬಾಕಿ ಇರುವುದಿಲ್ಲ' ಎಂದು ಪತ್ರ ಕೂಡ ಬಂದಿದೆ ಎಂಬುದು ವಿಪರ್ಯಾಸ. ಸರ್ಕಾರ ಸಕಾಲಕ್ಕೆ ಸಮರ್ಪಕ ಅನುದಾನ ನೀಡದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಸಹಕಾರಿ ಸಂಘ, ಎಲ್‌ಐಸಿ, ಭವಿಷ್ಯ ನ್ಯಾಸ ಮಂಡಳಿ, ಹಾಲಿ ಹಾಗೂ ನಿವೃತ್ತ ನೌಕರರಿಗೆ ನೀಡಬೇಕಾದ ಆರ್ಥಿಕ ಸೌಲಭ್ಯಗಳಾದ ತುಟ್ಟಿಭತ್ಯೆ ಬಾಕಿ, ರಜೆ ನಗದೀಕರಣ, ವೇತನ ಪರಿಷ್ಕರಣೆ, ಉಪದಾನ ಬಾಕಿ, ಬ್ಯಾಂಕ್‌ ಸಾಲ ಮರುಪಾವತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡದಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಕಿ ಉಳಿಯಲು ಕಾರಣ ಏನು?
ವಿದ್ಯಾರ್ಥಿಗಳ ರಿಯಾಯಿತಿ ಬಸ್‌ ಪಾಸ್‌ಗೆ ತಗಲುವ ವೆಚ್ಚದಲ್ಲಿ ಸರ್ಕಾರ ಶೇ.50ರಷ್ಟು ಹಾಗೂ ವಿದ್ಯಾರ್ಥಿಗಳು ಶೇ.25 ಭರಿಸಬೇಕು. ಉಳಿದ ಶೇ.25 ಭರಿಸುವುದು ಸಾರಿಗೆ ಸಂಸ್ಥೆಗಳ ಹೊಣೆಗಾರಿಕೆ. ಆದರೆ ಸರ್ಕಾರ ನೀಡಬೇಕಾದ ಶೇ.50ರಲ್ಲಿ ಕಡಿಮೆ ಅನುದಾನವನ್ನು ಬಜೆಟ್‌ನಲ್ಲಿ ನಿಗದಿಪಡಿಸುವುದು. ವಿದ್ಯಾರ್ಥಿಗಳ ಪಾಲಿನ ಶೇ.25ರ ಬದಲು ಶೇ.6ರಿಂದ 7ರಷ್ಟು ಮಾತ್ರ ಪಡೆಯುವಂತೆ ಸೂಚಿಸಿರುವುದೇ ಇಷ್ಟೊಂದು ದೊಡ್ಡ ಮೊತ್ತದ ಬಾಕಿಗೆ ಕಾರಣವಾಗಿದೆ.

ವಿದ್ಯಾರ್ಥಿ ಪಾಸ್‌ಗೆ ತಗಲುವ ವೆಚ್ಚವನ್ನು ಸರ್ಕಾರ ಸಂಪೂರ್ಣವಾಗಿ ಪಾವತಿ ಮಾಡಿದರೆ ಸಾರಿಗೆ ಸಂಸ್ಥೆಗಳ ನಷ್ಟದ ಪ್ರಮಾಣ ತಗ್ಗುತ್ತದೆ. ಬಾಕಿ ಪಾವತಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಆದರೆ ಯಾವುದೇ ಬಾಕಿ ಇಲ್ಲ ಎಂಬುದು ಸರ್ಕಾರದ ಉತ್ತರವಾಗಿದೆ.
- ಎಸ್‌.ಆರ್‌.ಉಮಾಶಂಕರ, ಕೆಎಸ್‌ಆರ್‌ಟಿಸಿ ಎಂಡಿ

- ಹೇಮರಡ್ಡಿ ಸೈದಾಪುರ

Trending videos

Back to Top