CONNECT WITH US  

ಸಾಲಮನ್ನಾಕ್ಕೆ ಹಣ ಹೊಂದಿಸಲು ಕಸರತ್ತು

ಹೊಸ ಬಜೆಟ್‌ನಲ್ಲಿ ಹಳೇ ಕಾರ್ಯಕ್ರಮ ಉಳಿಸಿಕೊಳ್ಳುವ ಸವಾಲು 

ಬೆಂಗಳೂರು: ಸಾಮಾನ್ಯವಾಗಿ ಬಜೆಟ್‌ನಲ್ಲಿ ಹಳೆಯ ಕಾರ್ಯಕ್ರಮಗಳನ್ನು ಮುಂದುವರಿಸುವುದರೊಂದಿಗೆ ಒಂದಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುತ್ತ ದೆ. ಅದರಲ್ಲೂ ಹೊಸ ಪಕ್ಷ ಅಧಿಕಾರಕ್ಕೆ ಬಂದಾಗ ಮಂಡಿಸುವ ಬಜೆಟ್‌ ಎಲ್ಲ ಇಲಾಖೆಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸಾಧ್ಯವಾದಷ್ಟು ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲು ಸಚಿವರು ಬೇಡಿಕೆಗಳ ಪಟ್ಟಿಯನ್ನೇ ಮುಂದಿಡುತ್ತಾರೆ. ಆದರೆ, ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್‌ ಮಾತ್ರ ಅದಕ್ಕಿಂತ ಭಿನ್ನ.

ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾವೇ ಪ್ರಮುಖ ಆದ್ಯತೆಯಾಗಿರುವುದರಿಂದ ಬಜೆಟ್‌ ಪೂರ್ವಭಾವಿ
ಸಭೆಯಲ್ಲಿ ಹೊಸ ಯೋಜನೆಗಳಿಗಿಂತ ಹಳೆಯ ಯೋಜನೆಗಳನ್ನು ಉಳಿಸಿಕೊಳ್ಳುವುದೇ ಇಲಾಖಾ ಸಚಿವರಿಗೆ ಸವಾಲಾಗಿ ಪರಿಣಮಿಸಿದೆ. ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ ನಡೆಸುತ್ತಿರುವ ಮುಖ್ಯಮಂತ್ರಿಗಳು, ಹೊಸ ಯೋಜನೆಗಳಿಗಿಂತ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು, ಇಲಾಖೆಯಲ್ಲಿ ಮಿತವ್ಯಯ ಕಾಪಾಡಲು ಹೇಳುತ್ತಿರುವುದು ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಾರಿ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿರುವ ಸಿಎಂ ಕುಮಾರಸ್ವಾಮಿ, ತಮ್ಮೆಲ್ಲಾ ಗಮನವನ್ನು ಈ ಕಾರ್ಯಕ್ರಮಕ್ಕೆ ಹಣ ಹೊಂದಿಸುವುದಕ್ಕೇ ಮೀಸಲಾಗಿಟ್ಟಿದ್ದಾರೆ.

ಬೆಳೆ ಸಾಲ ಸೇರಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮೊದಲ ಹಂತದಲ್ಲಿ ರೈತರ ಬೆಳೆ ಸಾಲ ಮಾತ್ರ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಈ ಪೈಕಿ ಸಹಕಾರ ಬ್ಯಾಂಕ್‌ಗಳಲ್ಲಿರುವ ಸಾಲ ಮನ್ನಾ ದೊಡ್ಡ ವಿಚಾರವಲ್ಲದಿದ್ದರೂ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಕಠಿಣ ಸವಾಲು ತಂದೊಡ್ಡಿದೆ. ಸಹಕಾರ ಬ್ಯಾಂಕ್‌ಗಳ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ರೈತರು ಮಾಡಿರುವ ಬೆಳೆ ಸಾಲ ಮನ್ನಾ ಮಾಡಬೇಕಾದರೆ ಕನಿಷ್ಠ 25 ರಿಂದ 30 ಸಾವಿರ ಕೋಟಿ ರೂ. ಬೇಕು. ಆದರೆ, ಅಷ್ಟೊಂದು ಹಣ ಹೊಂದಿಸುವುದು ಕಷ್ಟಸಾಧ್ಯ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಈಗಾಗಲೇ ಕೈಚೆಲ್ಲಿದ್ದಾರೆ. ಹೀಗಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು, ಮುಂತಾದ ಕ್ರಮಗಳ ಮೂಲಕ ಯೋಜನೆಗೆ ಹಣ ಹೊಂದಿಸಲು ಮುಖ್ಯಮಂತ್ರಿ ಮುಂದಾಗಿದ್ದು, ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಅದನ್ನೇ ಪ್ರಧಾನವಾಗಿ ಪ್ರಸ್ತಾಪಿಸುತ್ತಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಉದಯವಾಣಿ ಜತೆ ಮಾತನಾಡಿದ ಸಚಿವರೊಬ್ಬರು, ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹೊಸ ಕಾರ್ಯಕ್ರಮ ಪ್ರಕಟಿಸುವ ಬಗ್ಗೆ ಪ್ರಸ್ತಾಪಿಸಲು ಅವಕಾಶ ಇರಲಿಲ್ಲ. ಜಾರಿಯಲ್ಲಿರುವ ಯೋಜನೆಗಳಿಗೆ ಅನುದಾನ ಒದಗಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಜತೆಗೆ ಇಲಾಖೆಯಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಅನುದಾನ ಹೊಂದಾಣಿಕೆಗೆ ಪ್ರಯತ್ನಿಸುವಂತೆ ಸಲಹೆ ಮಾಡಿದ್ದಾರೆ ಎಂದು ತಿಳಿಸಿದರು.

ಮುಂದುವರಿದ ಪೂರ್ವಭಾವಿ ಸಭೆ 
ಜೂ. 21ರಿಂದ ಪ್ರತಿನಿತ್ಯ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ ನಡೆಸುತ್ತಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಹಲವು ಇಲಾಖೆಗಳ ಜತೆ ಸಭೆ ನಡೆಸಿದ್ದಾರೆ. ಪ್ರಮುಖವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಸಹಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಪೌರಾಡಳಿತ, ಬಂದರು, ಒಳನಾಡು ಮತ್ತು ಜಲಸಾರಿಗೆ, ನಗರಾಭಿವೃದ್ಧಿ, ವಸತಿ ಇಲಾಖೆ ಜತೆ ಸಮಾಲೋಚನೆ ನಡೆಸಲಾಗಿದೆ. 

ರೈತರು ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಬರಲಿದ್ದಾರೆ. ಜುಲೈ 5ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಸಾಲ ಮನ್ನಾ ಮಾಡುವುದು ಖಚಿತ.
● ಎಚ್‌.ಡಿ.ರೇವಣ್ಣ , ಲೋಕೋಪಯೋಗಿ ಸಚಿವ

ಬಜೆಟ್‌ ಮಂಡನೆ ವೇಳೆ ನಾನಿರಲ್ಲ: ಶಿವಕುಮಾರ್‌
ಕನಕಪುರ: "ನಾನು ನಂಬಿರುವ ದೇವಾಲಯಕ್ಕೆ ತೆರಳುತ್ತಿರುವುದರಿಂದ ಜುಲೈ 5ರಂದು ಬಜೆಟ್‌ ಮಂಡನೆ ವೇಳೆ ವಿಧಾನ ಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ, ಕನಕಪುರಕ್ಕೆ 400ಕ್ಕೂ ಹೆಚ್ಚು ಹಾಸಿಗೆಯುಳ್ಳ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜಿನ ಘೋಷಣೆಯಾಗಲಿದೆ' ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. ಕನಕಪುರ ಹೊರವಲಯದ ಅರಳಾಳು ಗ್ರಾಮದಲ್ಲಿ
ಮಾತನಾಡಿ, ನಾನು ನಂಬಿರುವ ಶಕ್ತಿದೇವತೆಯ ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಸದರಿ ಸ್ಥಳಕ್ಕೆ ರಾಜ್ಯಪಾಲರು ಸಹ ಭೇಟಿ ಕೊಡುತ್ತಿದ್ದಾರೆ. ಹೀಗಾಗಿ, ನಾನು ಅಲ್ಲಿ ಇರಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಬಜೆಟ್‌ ಮಂಡನೆ ವೇಳೆ ವಿಧಾನ ಸಭೆ ಅಧಿವೇಶನದಲ್ಲಿ ಹಾಜರಿರಲು ಸಾಧ್ಯವಾಗುತ್ತಿಲ್ಲ' ಎಂದರು. 

ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಕಬ್ಟಾಳು ದೇವಾಲಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕನಕಪುರಕ್ಕೆ ಮೆಡಿಕಲ್‌ ಕಾಲೇಜು ಕೊಡುವುದಾಗಿ ಹೇಳಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೇನೆ. ಜುಲೈ 5ರಂದು ಅವರು ಮಂಡಿಸುವ ಬಜೆಟ್‌ನಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಬಗ್ಗೆ ಘೋಷಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Trending videos

Back to Top